
ಮಂಗಳೂರು : ವಿಶ್ವ ಕೊಂಕಣಿ ಕೇಂದ್ರದಲ್ಲಿ ‘ಸಿ.ಎ. ಪವರ್-25’ ಸಿ.ಎ. ಇಂಟರ್ ಸೀಸನ್-9ರ ಒಂಬತ್ತನೇ ಆವೃತ್ತಿಯ ವಸತಿಯುತ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭವು ಅಕ್ಟೋಬರ್ 20ರಂದು ನಡೆಯಿತು.
ಯುವಜನರಲ್ಲಿ ಚಾರ್ಟರ್ಡ್ ಅಕೌಂಟೆಂಟ್ (ಸಿ.ಎ.) ಪರೀಕ್ಷೆಗಳನ್ನು ಎದುರಿಸುವ ಆತ್ಮವಿಶ್ವಾಸ ಬೆಳೆಸುವ ಹಾಗೂ ಆಸಕ್ತ ವಿದ್ಯಾರ್ಥಿಗಳಿಗೆ ಪರೀಕ್ಷಾಪೂರ್ವ ತರಬೇತಿ ನೀಡುವ ಉದ್ದೇಶದಿಂದ ‘ಸಿ.ಎ. ಪವರ್-25’ ಎಂಬ ವಿಶಿಷ್ಟ ತರಬೇತಿ ಯೋಜನೆಯನ್ನು ರೂಪಿಸಲಾಗಿದೆ.
ವಿಶ್ವ ಕೊಂಕಣಿ ಕೇಂದ್ರದ ಅಧ್ಯಕ್ಷರಾದ ಸಿ.ಎ. ನಂದಗೋಪಾಲ ಶೆಣೈ ಅವರು ದೀಪ ಬೆಳಗಿಸಿ ಶಿಬಿರವನ್ನು ಉದ್ಘಾಟಿಸಿದರು. ಬಳಿಕ ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ಅವರು, ತ್ರಿಶಾ ಸಂಸ್ಥೆಯು ವಿಶ್ವ ಕೊಂಕಣಿ ಕೇಂದ್ರದ ಸಹಯೋಗದಲ್ಲಿ ಸೂಕ್ತ ಸಂಪನ್ಮೂಲ ವ್ಯಕ್ತಿಗಳನ್ನು ಒದಗಿಸುವುದರೊಂದಿಗೆ ತರಬೇತಿ ಕಾರ್ಯಕ್ರಮಕ್ಕೆ ಸಂಪೂರ್ಣ ಪ್ರೋತ್ಸಾಹ ನೀಡುತ್ತಿದೆ ಎಂದು ತಿಳಿಸಿದರು.
ಸಿ.ಎ. ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಶಿಬಿರ ಅತ್ಯಂತ ಉಪಯುಕ್ತವಾಗಿದ್ದು, ವಿದ್ಯಾರ್ಥಿಗಳು ಆತ್ಮವಿಶ್ವಾಸ ಮತ್ತು ನಿರಂತರ ಅಭ್ಯಾಸದ ಮೂಲಕ ತರಬೇತಿಯ ಸಂಪೂರ್ಣ ಪ್ರಯೋಜನ ಪಡೆದು ಜೀವನದಲ್ಲಿ ಯಶಸ್ಸು ಸಾಧಿಸಬೇಕು ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ತ್ರಿಶಾ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ನ ಡಾ. ನಾರಾಯಣ್ ಕಾಯರ ಕಟ್ಟೆ ಅವರು ಮಾತನಾಡಿ, ಸಿ.ಎ. ಪರೀಕ್ಷೆಗಳನ್ನು ಯಶಸ್ವಿಯಾಗಿ ಎದುರಿಸಲು ಪರೀಕ್ಷಾರ್ಥಿಗಳು ಅಳವಡಿಸಿಕೊಳ್ಳಬೇಕಾದ ಅಗತ್ಯ ಮೌಲ್ಯಗಳು, ಶಿಸ್ತು ಹಾಗೂ ಸಿದ್ಧತೆಯ ಕುರಿತು ಸಲಹೆಗಳನ್ನು ನೀಡಿದರು.
ವಿಶ್ವ ಕೊಂಕಣಿ ಕೇಂದ್ರದ ಉಪಾಧ್ಯಕ್ಷರಾದ ರಮೇಶ್ ಡಿ. ನಾಯಕ್, ಮುಖ್ಯ ಆಡಳಿತಾಧಿಕಾರಿ (ಸಿಎಒ) ಡಾ. ಬಿ. ದೇವದಾಸ ಪೈ ಹಾಗೂ ತ್ರಿಶಾ ಸಂಸ್ಥೆಯ ಪ್ರೊ. ಗೌರಿ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಬಿರಾರ್ಥಿ ರಿಯಾ ಸಿಂಗ್ ಕಾರ್ಯಕ್ರಮ ನಿರೂಪಿಸಿದರು. ಲಕ್ಷ್ಮೀ ಕಿಣಿ ಪ್ರಾರ್ಥಿಸಿದರು.
20 ದಿನಗಳ ಉಚಿತ ವಸತಿಯುತ ತರಬೇತಿ
ಈ ಶಿಬಿರವು 20 ದಿನಗಳ ಅವಧಿಯ ಉಚಿತ ವಸತಿಯುತ ತರಬೇತಿ ಕಾರ್ಯಕ್ರಮವಾಗಿದ್ದು, ಶಿಬಿರಾರ್ಥಿಗಳಿಗೆ ವಸತಿ ಮತ್ತು ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಹೊರರಾಜ್ಯಗಳಿಂದ ಆಹ್ವಾನಿಸಲಾದ ಉಪನ್ಯಾಸಕರು ಸೇರಿದಂತೆ ಹಲವು ಅನುಭವಿ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳಿಗೆ ತರಬೇತಿ ನೀಡಲಿದ್ದಾರೆ.
ಸಿ.ಎ. ಉಲ್ಲಾಸ್ ಕಾಮತ್ ಅವರ ಯು.ಕೆ. ಆಂಡ್ ಕೋ ಹಾಗೂ ತ್ರಿಶಾ ಕ್ಲಾಸಸ್ ಸಂಸ್ಥೆಗಳು ವಿಶ್ವ ಕೊಂಕಣಿ ಕೇಂದ್ರದೊಂದಿಗೆ ಈ ತರಬೇತಿ ಯೋಜನೆಯ ಸಹಭಾಗಿಗಳಾಗಿವೆ.
ಸಿ.ಎ. ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಲ್ಲಿ ವಿಷಯಜ್ಞಾನ, ಆತ್ಮವಿಶ್ವಾಸ ಮತ್ತು ಪರೀಕ್ಷೆ ಎದುರಿಸುವ ಸಾಮರ್ಥ್ಯವನ್ನು ವೃದ್ಧಿಸುವ ನಿಟ್ಟಿನಲ್ಲಿ ಈ ತರಬೇತಿ ಶಿಬಿರ ಮಹತ್ವದ ಹೆಜ್ಜೆಯಾಗಿದೆ.
