ನಿಟ್ಟೆಯಲ್ಲಿ ತೆರೆದ ಬಾವಿಗೆ ಬಿದ್ದ ಚಿರತೆ!

0
3

ಕಾರ್ಕಳ: ಮನೆಯ ನಾಯಿಯನ್ನು ಬೆನ್ನಟ್ಟಿಕೊಂಡು ಹೋಗುವ ಭರದಲ್ಲಿ ಆವರಣವಿಲ್ಲದ ತೆರೆದ ಬಾವಿಗೆ ಬಿದ್ದ ಬೃಹತ್ ಗಾತ್ರದ ಚಿರತೆಯನ್ನು ಕಾರ್ಕಳ ಅರಣ್ಯ ಇಲಾಖೆಯ ಸಿಬ್ಬಂದಿ ಸುರಕ್ಷಿತವಾಗಿ ರಕ್ಷಿಸಿ, ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿದೆ.

ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದ ಮುಜಕಿಲ ಎಂಬಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿ ಅಂತೋನಿ ಅವರ ಮನೆಯ ನಾಯಿಯನ್ನು ಹಿಡಿಯಲು ಚಿರತೆ ಬೆನ್ನಟ್ಟಿಕೊಂಡು ಹೋಗುತ್ತಿದ್ದಾಗ ಆಕಸ್ಮಿಕವಾಗಿ ಆವರಣವಿಲ್ಲದ ತೆರೆದ ಬಾವಿಗೆ ಬಿದ್ದಿದೆ. ಬಾವಿಯ ಪೊಟರೆಯೊಳಗೆ ಸೇರಿಕೊಂಡಿದ್ದ ಚಿರತೆಯನ್ನು ಗಮನಿಸಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ ಬಾವಿಯೊಳಗೆ ಬೋನನ್ನು ಇಳಿಸಿ ಚಿರತೆಯನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಳಿಕ ಚಿರತೆಯನ್ನು ಕುದುರೆಮುಖ ರಾಷ್ಟ್ರೀಯ ಉದ್ಯಾನವನಕ್ಕೆ ಬಿಡಲಾಗಿದೆ.

ರಕ್ಷಿಸಲಾದ ಚಿರತೆಗೆ ಸುಮಾರು ಐದು ವರ್ಷ ವಯಸ್ಸಾಗಿದ್ದು, ಅಂದಾಜು 100 ಕೆ.ಜಿ. ತೂಕದ ಗಂಡು ಚಿರತೆಯಾಗಿದೆ. ಬೃಹತ್ ಗಾತ್ರ ಹೊಂದಿದ್ದ ಈ ಚಿರತೆಯ ರಕ್ಷಣಾ ಕಾರ್ಯಾಚರಣೆ ಸ್ಥಳೀಯರಲ್ಲಿ ಕುತೂಹಲ ಮೂಡಿಸಿತು.

ಕಾರ್ಕಳ ವಲಯ ಅರಣ್ಯಾಧಿಕಾರಿ ಅರುಣ್ ಕುಮಾರ್, ಉಪ ವಲಯ ಅರಣ್ಯಾಧಿಕಾರಿಗಳಾದ ಶಿವಕುಮಾರ್ ಮತ್ತು ಸುಧೀರ್, ಅರಣ್ಯ ರಕ್ಷಕರಾದ ಸುರೇಶ್ ಮತ್ತು ಹಿತೇಶ್, ಅರಣ್ಯ ವೀಕ್ಷಕ ಯಮನೂರು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.