
ಬೆಂಗಳೂರು : ರಾಷ್ಟ್ರೀಯ ಏಕತೆಯ ಹರಿಕಾರ, ಉಕ್ಕಿನ ಮನುಷ್ಯ ಎಂದೇ ಖ್ಯಾತರಾದ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ಬೆಂಗಳೂರಿನಲ್ಲಿ ದೇಶಭಕ್ತಿಯ ಸಂದೇಶ ಸಾರುವ ವಿಶಿಷ್ಟ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕರ್ನಾಟಕದ ಖ್ಯಾತ ಗಾಯಕ ವಿದ್ವಾನ್ ಯಶವಂತ್ ಎಂ.ಜಿ. ಅವರು ‘ವಂದೇ ಭಾರತ ಮಾತರಂ’ ಶೀರ್ಷಿಕೆಯಡಿ 28 ಗಂಟೆಗಳ ನಿರಂತರ ಗಾಯನದ ಮೂಲಕ ಐತಿಹಾಸಿಕ ವಿಶ್ವದಾಖಲೆ ನಿರ್ಮಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ.
‘ಒಂದು ದೇಶ, ಒಂದು ಧ್ವನಿ, ಒಂದು ಭಾವ’ ಎಂಬ ಆಶಯದೊಂದಿಗೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ 28 ಭಾಷೆಗಳ ಮೂಲಕ ಭಾರತದ ವೈವಿಧ್ಯಮಯ ಸಂಸ್ಕೃತಿ, ಭಾಷಾ ಸೌಹಾರ್ದ ಮತ್ತು ರಾಷ್ಟ್ರೀಯ ಏಕತೆಯನ್ನು ಪ್ರತಿಬಿಂಬಿಸುವ ಉದ್ದೇಶ ಹೊಂದಲಾಗಿದೆ. ದೇಶದ 28 ರಾಜ್ಯಗಳ ವೈವಿಧ್ಯತೆಯನ್ನು ಸಂಗೀತದ ಮೂಲಕ ಪರಿಚಯಿಸುವ ಈ ಪ್ರಯತ್ನವು ದೇಶಭಕ್ತಿಯ ಭಾವನೆಯನ್ನು ಮತ್ತಷ್ಟು ಬಲಪಡಿಸುವ ಗುರಿ ಹೊಂದಿದೆ.

ನಿರಂತರ 28 ಗಂಟೆಗಳ ಕಾಲ ನಡೆಯಲಿರುವ ಗಾಯನ ಕಾರ್ಯಕ್ರಮವು ಸಂಗೀತ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸುವ ಆಶಯ ಹೊಂದಿದೆ. ಈ ಪ್ರಯತ್ನವನ್ನು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ದಾಖಲಿಸುವ ಉದ್ದೇಶವನ್ನೂ ಆಯೋಜಕರು ಹೊಂದಿದ್ದಾರೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ದೇಶದ ಏಕೀಕರಣಕ್ಕೆ ನೀಡಿದ ಮಹತ್ವದ ಕೊಡುಗೆಯನ್ನು ಸ್ಮರಿಸುವುದರ ಜೊತೆಗೆ, ಭಾಷೆ ಮತ್ತು ಪ್ರಾದೇಶಿಕ ವೈವಿಧ್ಯತೆಯ ನಡುವೆಯೂ ಭಾರತೀಯರೆಲ್ಲರೂ ಒಂದೇ ಎಂಬ ಸಂದೇಶವನ್ನು ಸಾರುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.
ಕಾರ್ಯಕ್ರಮದ ವಿವರಗಳು:
– ಕಾರ್ಯಕ್ರಮದ ಹೆಸರು: ವಂದೇ ಭಾರತ ಮಾತರಂ
– ಪ್ರಮುಖ ಗಾಯಕರು: ವಿದ್ವಾನ್ ಯಶವಂತ್ ಎಂ.ಜಿ.
– ದಿನಾಂಕ: ಅಕ್ಟೋಬರ್ 28, ಬುಧವಾರ, ಬೆಳಿಗ್ಗೆ 10 ಗಂಟೆಯಿಂದ ಅಕ್ಟೋಬರ್ 29, ಗುರುವಾರ, ಸಂಜೆ 6 ಗಂಟೆಯವರೆಗೆ
– ಸ್ಥಳ: ಡಾ. ರಾಜ್ಕುಮಾರ್ ಆಡಿಟೋರಿಯಂ, ಗೆಳೆಯರ ಬಳಗ ಲೇಔಟ್ ಸಮೀಪ, ಮಹಾಲಕ್ಷ್ಮೀಪುರ, ರಾಜಾಜಿನಗರ, ಬೆಂಗಳೂರು.
– ದಾಖಲೆ ಪ್ರಯತ್ನ: ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್
‘ಏಕ್ ಭಾರತ್, ಶ್ರೇಷ್ಠ ಭಾರತ್’ ಎಂಬ ರಾಷ್ಟ್ರೀಯ ಆಶಯಕ್ಕೆ ಪೂರಕವಾಗಿ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಭಾಗವಹಿಸಿ, ದೇಶದ ಏಕತೆ ಮತ್ತು ಸೌಹಾರ್ದದ ಸಂದೇಶವನ್ನು ಜನಮಾನಸಕ್ಕೆ ತಲುಪಿಸಲು ಕೈಜೋಡಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಬನ್ನಿ, ಐಕ್ಯತೆಯ ಮಂತ್ರವನ್ನು ಪಠಿಸೋಣ; ದೇಶಭಕ್ತಿಯ ಗೀತೆಯೊಂದಿಗೆ ಇತಿಹಾಸದ ಪುಟಗಳಲ್ಲಿ ಸ್ಥಾನ ಪಡೆಯುವ ಈ ಪ್ರಯತ್ನಕ್ಕೆ ಸಾಕ್ಷಿಯಾಗೋಣ!
