ಮಂಗಳೂರಿನಲ್ಲಿ ಮನಸೂರೆಗೊಂಡ ಜಲತರಂಗ ಜುಗಲ್‌ಬಂಧಿ

0
19

ವಿದುಷಿ ಶಶಿಕಲಾ ದಾನಿ ಮತ್ತು ಡಾ. ಸುಜ್ಞಾನ ದಾನಿ ಅವರಿಂದ ಅಪರೂಪದ ವಾದ್ಯಸಂಗೀತ ಪ್ರಸ್ತುತಿ

ಮಂಗಳೂರು: ನಗರದ ಸಂಗೀತಪ್ರಿಯರಿಗೆ ಅಪರೂಪದ ವಾದ್ಯಸಂಗೀತವನ್ನು ಆಲಿಸುವ ಸುಯೋಗ ಅಕ್ಟೋಬರ್ 25ರಂದು ಒದಗಿಬಂದಿತು. ಭರತಾಂಜಲಿ (ರಿ.) ಮಂಗಳೂರು ನಾಟ್ಯಸಂಸ್ಥೆಯ 31ನೇ ವಾರ್ಷಿಕೋತ್ಸವದ ಅಂಗವಾಗಿ ನಗರದ ಪುರಭವನದಲ್ಲಿ ಆಯೋಜಿಸಲಾಗಿದ್ದ ಜಲತರಂಗ ಜುಗಲ್‌ಬಂಧಿ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದೆ ವಿದುಷಿ ಶಶಿಕಲಾ ದಾನಿ ಹಾಗೂ ಅವರ ಪುತ್ರ ಡಾ. ಸುಜ್ಞಾನ ದಾನಿ ಅವರು ತಮ್ಮ ಮನಮೋಹಕ ವಾದನದ ಮೂಲಕ ಪ್ರೇಕ್ಷಕರ ಮನಸೂರೆಗೊಂಡರು.

ಭಾರತದ ಏಕೈಕ ಮಹಿಳಾ ಹಿಂದೂಸ್ತಾನಿ ಜಲತರಂಗ ಕಲಾವಿದೆ ಎಂದು ಗುರುತಿಸಲ್ಪಟ್ಟಿರುವ ವಿದುಷಿ ಶಶಿಕಲಾ ದಾನಿ ಹಾಗೂ ಡಾ. ಸುಜ್ಞಾನ ದಾನಿ ಅವರು ಪಿಂಗಾಣಿ ಬಟ್ಟಲುಗಳ ಮೇಲೆ ನೀರಿನ ಮಟ್ಟವನ್ನು ಹೊಂದಿಸಿ ಹೊರಹೊಮ್ಮಿಸುವ ಜಲತರಂಗದ ಸುಮಧುರ ನಾದದ ಮೂಲಕ ಸಂಗೀತಾಸಕ್ತರನ್ನು ಮಂತ್ರಮುಗ್ಧಗೊಳಿಸಿದರು.

ಶಾಸ್ತ್ರೀಯ ಸಂಗೀತದ ಮಧುವಂತಿ ರಾಗದಲ್ಲಿ ಆಲಾಪನೆಯೊಂದಿಗೆ ಆರಂಭವಾದ ಜುಗಲ್‌ಬಂಧಿ, ನಂತರ ತೀನ್‌ತಾಳದಲ್ಲಿ ಧ್ರುತ್ ಪ್ರಸ್ತುತಿಯ ಮೂಲಕ ಮುಂದುವರಿಯಿತು. ಬಳಿಕ ಮಿಶ್ರ ಖಮಾಜ್ ರಾಗದ ಧುನ್ ಹಾಗೂ ಕೆಲವು ಭಕ್ತಿಗೀತೆಗಳನ್ನು ಕಲಾವಿದರು ಪ್ರಸ್ತುತಪಡಿಸಿದರು. ಜಲತರಂಗದ ಅಪೂರ್ವ ನಾದವೈಭವಕ್ಕೆ ಸಭಿಕರಿಂದ ಮೆಚ್ಚುಗೆ ವ್ಯಕ್ತವಾಯಿತು.

ಈ ಸಂಗೀತ ಪ್ರಸ್ತುತಿಗೆ ಶ್ರೀಲತಾ ಪ್ರಭು ಅವರು ಬಲವಾದಲ್ಲಿ, ವಂದನಾ ರಾಣಿ ಅವರು ತಂಬೂರಿಯಲ್ಲಿ ಹಾಗೂ ಅರುಣ ದಾನಿ ಅವರು ಮಂಜೀರಾದಲ್ಲಿ ಸಮರ್ಥವಾಗಿ ಸಾಥ್ ನೀಡಿದರು.

ಕಾರ್ಯಕ್ರಮವನ್ನು ಎಡನೀರು ಮಠದ ಸಚ್ಚಿದಾನಂದ ಭಾರತಿ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಈ ಸಂದರ್ಭದಲ್ಲಿ ಆಕಾಶವಾಣಿಯ ಎ ಶ್ರೇಣಿಯ ಕಲಾವಿದೆಯಾದ ವಿದುಷಿ ಶಶಿಕಲಾ ದಾನಿ ಅವರನ್ನು ಭರತಾಂಜಲಿ ನಾಟ್ಯಸಂಸ್ಥೆಯ ವತಿಯಿಂದ ಆತ್ಮೀಯವಾಗಿ ಗೌರವಿಸಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಅಗರಿ ರಾಘವೇಂದ್ರ ರಾವ್ ಅವರು ಶುಭಾಶಂಸನೆಗೈದರು.

ನಾಟ್ಯಸಂಸ್ಥೆಯ ಗುರು ಶ್ರೀಧರ ಹೊಳ್ಳ ಅವರು ಅತಿಥಿಗಳನ್ನು ಸ್ವಾಗತಿಸಿ ಸಂಸ್ಥೆಯ ಸಾಧನೆಗಳನ್ನು ವಿವರಿಸಿದರು. ಪ್ರತಿಮಾ ಹೊಳ್ಳ ವಂದಿಸಿದರು.

ಸಂಗೀತ ಕಾರ್ಯಕ್ರಮದ ಬಳಿಕ ಭರತಾಂಜಲಿ (ರಿ.), ಕೊಟ್ಟಾರ, ಮಂಗಳೂರಿನ ವಿದ್ಯಾರ್ಥಿಗಳಿಂದ ‘ಜಲಾಂಜಲಿ ನೃತ್ಯಾಮೃತಂ’ ಎಂಬ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಶಾಸ್ತ್ರೀಯ ಸಂಗೀತ ಮತ್ತು ನೃತ್ಯದ ಸಮ್ಮಿಲನದೊಂದಿಗೆ ನಡೆದ ಈ ಕಾರ್ಯಕ್ರಮವು ಭರತಾಂಜಲಿಯ ವಾರ್ಷಿಕೋತ್ಸವಕ್ಕೆ ವಿಶೇಷ ಮೆರುಗು ನೀಡಿತು.