ರಾಜಕಾರಣಿಗಳಿಗೆ ವಿದುರ ನೀತಿ ಮಾದರಿ: ಡಾ. ವಿನಾಯಕ ಭಟ್ ಗಾಳಿಮನೆ‌

0
6

ಓಲೈಕೆ ರಾಜಕಾರಣಕ್ಕಿಂತ ಸ್ವಾಭಿಮಾನ ಮತ್ತು ನಿಷ್ಠೆಗೆ ಆದ್ಯತೆ ನೀಡಿದ ವಿದುರನ ಬದುಕು ಇಂದಿಗೂ ಪ್ರಸ್ತುತ

ಕಾರ್ಕಳ: ನಿಷ್ಠುರವಾದಿಯಾಗಿ, ಓಲೈಕೆ ರಾಜಕಾರಣಕ್ಕೆ ಮಣಿಯದೆ, ಸ್ವಾಭಿಮಾನಕ್ಕೆ ಧಕ್ಕೆಯಾದಾಗ ಮಂತ್ರಿ ಪದವಿಯನ್ನೇ ತೊರೆದ ವಿದುರನನ್ನು ಮಂತ್ರಿ ಪದವಿಗೆ ಭಾಷ್ಯ ಬರೆದ ವ್ಯಕ್ತಿ ಎಂದು ಶ್ರೀಕೃಷ್ಣ ವರ್ಣಿಸಿದ್ದಾನೆ. ಧೃತರಾಷ್ಟ್ರನಿಗೆ ವಿದುರನು ನೀಡಿದ ಉಪದೇಶಗಳು ರಾಜತಾಂತ್ರಿಕ ನೆಲೆಯಲ್ಲಿ ಅತ್ಯಂತ ಮಹತ್ವದ್ದಾಗಿದ್ದು, ‘ವಿದುರ ನೀತಿ’ ಎಂದು ಪ್ರಸಿದ್ಧವಾಗಿರುವ ಈ ಮಾತುಗಳು ಸರ್ವಕಾಲದ ರಾಜಕಾರಣಿಗಳಿಗೂ ಮಾದರಿಯಾಗಿವೆ ಎಂದು ವಿದ್ವಾಂಸರಾದ ಡಾ. ವಿನಾಯಕ ಭಟ್ ಗಾಳಿಮನೆ ಹೇಳಿದರು.

ಕನ್ನಡ ಸಂಘ ಕಾಂತಾವರ, ಅಲ್ಲಮಪ್ರಭು ಪೀಠ ಕಾಂತಾವರ ಹಾಗೂ ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ನ ಕಾರ್ಕಳ ತಾಲೂಕು ಘಟಕದ ಸಹಭಾಗಿತ್ವದಲ್ಲಿ ವರ್ಷಪೂರ್ತಿ ನಡೆಯುತ್ತಿರುವ ‘ಮಹಾಭಾರತ ಭಾವದೀಪ’ ಉಪನ್ಯಾಸಮಾಲೆಯ ದಶಮ ಸೋಪಾನದಲ್ಲಿ ಅವರು ಮಾತನಾಡಿದರು. ಅಕ್ಟೋಬರ್ 24ರಂದು ಕಾರ್ಕಳದ ಪ್ರಕಾಶ್ ಹೋಟೆಲ್‌ನ ‘ಸಂಭ್ರಮ’ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಉದ್ಯೋಗ ಪರ್ವ, ಕುರುಕ್ಷೇತ್ರ ಪರ್ವ’ ವಿಷಯದ ಕುರಿತು ಉಪನ್ಯಾಸ ನೀಡಿದರು.

ಚಿಂತಾಕ್ರಾಂತರಾಗಿದ್ದ ಧೃತರಾಷ್ಟ್ರನಿಗೆ ವಿದುರನ ಮಾತುಗಳು ಒಪ್ಪಿಗೆಯಾಗಿದ್ದರೂ, ಮಕ್ಕಳ ಮೇಲಿನ ಅತಿಯಾದ ಮಮಕಾರ ಆತನನ್ನು ಸತ್ಯದ ಮಾರ್ಗದಲ್ಲಿ ನಡೆಯದಂತೆ ತಡೆಯಿತು. ಮಮಕಾರವನ್ನು ತ್ಯಜಿಸುವ ಆಧ್ಯಾತ್ಮಿಕ ಮಾರ್ಗದ ಕುರಿತು ಸನತ್ ಸುಜಾತರು ಬೋಧಿಸಿದರೂ, ಪುತ್ರವ್ಯಾಮೋಹದಿಂದ ಧೃತರಾಷ್ಟ್ರ ಹೊರಬರಲಿಲ್ಲ. ಅಂತಿಮವಾಗಿ ಯುದ್ಧವನ್ನೇ ಆಯ್ಕೆ ಮಾಡಿಕೊಂಡ ಪರಿಣಾಮ ಕುರುಕ್ಷೇತ್ರದ ಯುದ್ಧ ಅನಿವಾರ್ಯವಾಯಿತು ಎಂದು ಡಾ. ವಿನಾಯಕ ಭಟ್ ಗಾಳಿಮನೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಡಾ. ನಾ. ಮೊಗಸಾಲೆ, ನಿತ್ಯಾನಂದ ಪೈ, ಮಿತ್ರಪ್ರಭಾ ಹೆಗ್ಡೆ ಹಾಗೂ ಏರ್ ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕು. ಶಾರ್ವರಿ ಶ್ಯಾನುಭಾಗ್ ಪ್ರಾರ್ಥಿಸಿದರು. ಶ್ರೀಮತಿ ಸುಲೋಚನಾ ಬಿ. ಕಾರ್ಯಕ್ರಮ ನಿರ್ವಹಿಸಿದರು. ಸದಾನಂದ ನಾರಾವಿ ಸ್ವಾಗತಿಸಿ, ಜಗದೀಶ್ ಗೋಖಲೆ ವಂದಿಸಿದರು.

ರಾಜಧರ್ಮ, ನೈತಿಕತೆ, ಸ್ವಾಭಿಮಾನ ಹಾಗೂ ಅಧಿಕಾರದ ನಡುವಿನ ಸಂಬಂಧವನ್ನು ಮಹಾಭಾರತದ ಪ್ರಸಂಗಗಳ ಮೂಲಕ ವಿಶ್ಲೇಷಿಸಿದ ಈ ಉಪನ್ಯಾಸವು ಸಮಕಾಲೀನ ರಾಜಕೀಯ ಮತ್ತು ಸಾರ್ವಜನಿಕ ಜೀವನಕ್ಕೆ ವಿದುರ ನೀತಿಯ ಪ್ರಸ್ತುತತೆಯನ್ನು ನೆನಪಿಸಿತು.