ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 14 ವಿವಿಧ ಸ್ಪರ್ಧೆಗಳ ಆಯೋಜನೆ
ಪುತ್ತೂರು : ಪ್ರೌಢಶಾಲಾ ವಿದ್ಯಾರ್ಥಿಗಳ ಪ್ರತಿಭೆ ಹಾಗೂ ಸೃಜನಶೀಲತೆಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ವತಿಯಿಂದ ರಾಜ್ಯಮಟ್ಟದ ‘ಕನಸುಗಳು–2026’ ಕಾರ್ಯಕ್ರಮವನ್ನು ಅಕ್ಟೋಬರ್ 30ರಂದು ಶುಕ್ರವಾರ ಆಯೋಜಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಬೆಳಗ್ಗೆ 9 ಗಂಟೆಗೆ ನಡೆಯಲಿದ್ದು, ವಿವೇಕಾನಂದ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿಯ ನಿರ್ದೇಶಕ ರಮೇಶ್ಚಂದ್ರ ಎಂ. ಅಧ್ಯಕ್ಷತೆ ವಹಿಸಲಿದ್ದಾರೆ. ಗೋವಾದ ವೇದಾಂತ ಐರನ್ ಅಂಡ್ ಸ್ಟೀಲ್ ಲಿಮಿಟೆಡ್‌ನ ಅಸೋಸಿಯೇಟ್ ಮ್ಯಾನೇಜರ್ ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿನಿ ಸಿಎ ಶ್ರದ್ಧಾ ವಿ. ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಉದ್ಘಾಟನಾ ಸಮಾರಂಭದ ಬಳಿಕ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ 14 ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಸಾಮಾನ್ಯ ರಸಪ್ರಶ್ನೆ, ವಿಜ್ಞಾನ ಮಾದರಿ, ಜಾಹೀರಾತು, ಪೆನ್ಸಿಲ್ ಸ್ಕೆಚ್, ಕನ್ನಡ ಕವನ ರಚನೆ ಮತ್ತು ವಾಚನ, ಪ್ರಾಕೃತಿಕ ರಂಗೋಲಿ, ಮುಖವರ್ಣಿಕೆ, ವಿಡಿಯೋ ಸಂಕಲನ, ಚರ್ಚಾಸ್ಪರ್ಧೆ, ತಾಳವಾದ್ಯ, ‘ಕಲರವ’ ಸಾಂಸ್ಕೃತಿಕ ವೈವಿಧ್ಯ, ನಿಧಿಶೋಧ ಹಾಗೂ ಭಗವದ್ಗೀತಾ ಕಂಠಪಾಠ ಸೇರಿದಂತೆ ವಿವಿಧ ಸ್ಪರ್ಧೆಗಳು ನಡೆಯಲಿವೆ.
ವಿದ್ಯಾರ್ಥಿಗಳಲ್ಲಿ ಅಡಗಿರುವ ಸೃಜನಶೀಲತೆ, ಕಲಾತ್ಮಕ ಅಭಿರುಚಿ, ವೈಜ್ಞಾನಿಕ ಚಿಂತನೆ ಹಾಗೂ ವಾಗ್ಮಿತೆಯನ್ನು ಗುರುತಿಸಿ ಪ್ರೋತ್ಸಾಹಿಸಲು ಈ ಕಾರ್ಯಕ್ರಮ ಸಹಕಾರಿಯಾಗಲಿದೆ.
ಅಪರಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ರವೀಂದ್ರ ಪಿ. ಅಧ್ಯಕ್ಷತೆ ವಹಿಸಲಿದ್ದಾರೆ. ಯೂಟ್ಯೂಬರ್ ಹಾಗೂ ನಟ ಧನರಾಜ್ ಆಚಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಖ್ಯಾತ ವೈದ್ಯರು ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ಹಿರಿಯ ವಿದ್ಯಾರ್ಥಿ ಡಾ. ವೇಣುಗೋಪಾಲ ಶರ್ಮ ವಿಶೇಷ ಅಭ್ಯಾಗತರಾಗಿ ಆಗಮಿಸಲಿದ್ದಾರೆ.
‘ಕನಸುಗಳು–2026’ ಕಾರ್ಯಕ್ರಮವು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಹೊಸ ಅನುಭವಗಳನ್ನು ಗಳಿಸಲು ಉತ್ತಮ ವೇದಿಕೆಯಾಗಲಿದೆ.

