ಪುತ್ತೂರು ವಿವೇಕಾನಂದ ಪದವಿಪೂರ್ವ ಕಾಲೇಜಿನ ವಾರ್ಷಿಕೋತ್ಸವ ‘ಪರಂಪರಾ ದರ್ಶನಂ’ ಆಚರಣೆ
ಪುತ್ತೂರು : ವಿದ್ಯಾರ್ಥಿ ಜೀವನವು ಬದುಕಿನ ಸುವರ್ಣಯುಗವಾಗಿದ್ದು, ಈ ಅವಧಿಯಲ್ಲಿ ದೊರೆಯುವ ಅನುಭವಗಳು ಹಾಗೂ ಅನುಭಾವಗಳು ಭವಿಷ್ಯದ ಬದುಕಿಗೆ ಸ್ಪಷ್ಟ ದಿಕ್ಕನ್ನು ನೀಡುತ್ತವೆ. ಇಂದಿನ ವಿದ್ಯಾರ್ಥಿಗಳು ವಿದ್ಯೆಯ ಜೊತೆಗೆ ಭಾವನೆಗಳು, ಸಂವೇದನೆಗಳು ಮತ್ತು ಜೀವನ ಮೌಲ್ಯಗಳನ್ನು ಬೆಳೆಸಿಕೊಂಡು ಬದುಕಬೇಕು ಎಂದು ಕರ್ನಾಟಕ ಧಾರ್ಮಿಕ ಪರಿಷತ್ತಿನ ಮಾಜಿ ಸದಸ್ಯರು ಹಾಗೂ ವಾಗ್ಮಿ ಕಶೆಕೋಡಿ ಸೂರ್ಯನಾರಾಯಣ ಭಟ್ ಹೇಳಿದರು.

ಪುತ್ತೂರಿನ ವಿವೇಕಾನಂದ ಪದವಿಪೂರ್ವ ಕಾಲೇಜಿನ ಏಕತಾ ವೇದಿಕೆಯಲ್ಲಿ ನಡೆದ ಕಾಲೇಜಿನ ಎರಡನೇ ದಿನದ ವಾರ್ಷಿಕೋತ್ಸವ ‘ಪರಂಪರಾ ದರ್ಶನಂ’ ಕಾರ್ಯಕ್ರಮದಲ್ಲಿ ಪ್ರಧಾನ ವಕ್ತಾರರಾಗಿ ಭಾಗವಹಿಸಿ ಅವರು ಮಾತನಾಡಿದರು.
ಪ್ರಾಚೀನ ಶಿಕ್ಷಣ ಪರಂಪರೆಯು ವಿದ್ಯಾರ್ಥಿಗಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರ, ಶಿಸ್ತು, ಜೀವನ ಮೌಲ್ಯಗಳು ಹಾಗೂ ಭಾವನಾತ್ಮಕ ಬೆಳವಣಿಗೆಗೆ ಅಗತ್ಯವಾದ ಅಂಶಗಳನ್ನು ಕಲಿಸಿಕೊಡುತ್ತಿತ್ತು. ಆದರೆ ಇಂದಿನ ಶಿಕ್ಷಣ ವ್ಯವಸ್ಥೆಯಲ್ಲಿ ಸಂಸ್ಕಾರಭರಿತ ವಿದ್ಯೆ ಮತ್ತು ಜೀವನ ಮೌಲ್ಯಗಳ ಬೋಧನೆಗೆ ಹೆಚ್ಚಿನ ಒತ್ತು ನೀಡಬೇಕಾದ ಅಗತ್ಯವಿದೆ. ವಿದ್ಯಾರ್ಥಿ ಜೀವನದಲ್ಲಿ ದೊರೆಯುವ ಅನುಭವಗಳು ಮುಂದೆ ಜೀವನದ ವಿವಿಧ ಹಂತಗಳಲ್ಲಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ನೆರವಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಲೆಕ್ಕ ಪರಿಶೋಧಕರು ಹಾಗೂ ಕಾಲೇಜಿನ ಹಿರಿಯ ವಿದ್ಯಾರ್ಥಿ ಸಿ.ಎ. ದೀಪಕ್ ಮಾತನಾಡಿ, ವಿದ್ಯಾರ್ಥಿಗಳ ಓದು ಅವರ ಜೀವನವನ್ನು ರೂಪಿಸುವ ಮಾರ್ಗದರ್ಶನವಾಗಬೇಕೇ ಹೊರತು ಕೇವಲ ಪರೀಕ್ಷೆಗಳಲ್ಲಿ ಅಂಕ ಗಳಿಸುವುದಕ್ಕೆ ಸೀಮಿತವಾಗಬಾರದು ಎಂದರು. ಆಧುನಿಕ ಯುಗದಲ್ಲಿ ತಾಂತ್ರಿಕತೆ ಮತ್ತು ಕೌಶಲ್ಯಗಳನ್ನು ಸಮರ್ಥವಾಗಿ ಬಳಸಿಕೊಂಡಾಗ ಹೆಚ್ಚಿನ ಅವಕಾಶಗಳು ಲಭಿಸುತ್ತವೆ. ಆದರೆ ತಂತ್ರಜ್ಞಾನವನ್ನು ಮಿತಿಮೀರಿ ಅವಲಂಬಿಸದೆ, ತಮ್ಮ ಸ್ವಂತಿಕೆ ಮತ್ತು ಸೃಜನಶೀಲತೆಯನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಆಡಳಿತ ಮಂಡಳಿಯ ನಿರ್ದೇಶಕ ಡಾ. ಕೆ.ಎನ್. ಸುಬ್ರಹ್ಮಣ್ಯ ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮವೇ ಮೂಲಾಧಾರವಾಗಿದೆ. ಪರಿಶ್ರಮದೊಂದಿಗೆ ನಿರ್ದಿಷ್ಟ ಗುರಿ ಮತ್ತು ಸಕಾರಾತ್ಮಕ ಚಿಂತನೆ ಇರಬೇಕು. ಜೀವನದಲ್ಲಿ ಸವಾಲುಗಳು ಎದುರಾದಾಗ ಧೈರ್ಯಗುಂದದೆ ಮುನ್ನಡೆಯುವ ಮನೋಭಾವವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾಲೇಜಿನ ಹಿರಿಯ ವಿದ್ಯಾರ್ಥಿ ಸಿ.ಎ. ದೀಪಕ್ ಅವರನ್ನೂ ಗೌರವಿಸಲಾಯಿತು.
ಸಭಾ ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೇಶಕ ಭರತ್ ಪೈ ಹಾಗೂ ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷೆ ಶಶಿಕಲಾ ಎಂ.ಕೆ. ಉಪಸ್ಥಿತರಿದ್ದು ಶುಭ ಹಾರೈಸಿದರು.
ಕಾಲೇಜಿನ ಪ್ರಾಂಶುಪಾಲ ದೇವಿಚರಣ್ ರೈ. ಎಂ. ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಉಪನ್ಯಾಸಕಿ ಶೀತಲಾ ವಂದಿಸಿದರು. ಪವಿತ್ರ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

