ಪುತ್ತೂರು : ಬೆಳ್ಳಾರೆ ಪೊಲೀಸ್ ಠಾಣಾ ವ್ಯಾಪ್ತಿಯ ಎಡಮಂಗಲ ಗ್ರಾಮದ ವಸಂತಿ (26) ಎಂಬ ಯುವತಿ ಕೆಲಸಕ್ಕೆಂದು ಮಂಗಳೂರಿಗೆ ತೆರಳಿದ ಬಳಿಕ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ. ಈ ಸಂಬಂಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಸಂತಿ ಅವರು ಕಳೆದ ಎರಡು ವರ್ಷಗಳಿಂದ ಮಂಗಳೂರಿನ ಕೆಎಫ್ಡಿಸಿ (KFDC) ಮೀನು ಸಂಸ್ಕರಣಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಂಪನಿಯ ವಸತಿಗೃಹದಲ್ಲಿ ವಾಸವಾಗಿದ್ದರು. ತಿಂಗಳಿಗೊಮ್ಮೆ ಮನೆಗೆ ಬಂದು ಹೋಗುತ್ತಿದ್ದ ಅವರು, ಅಕ್ಟೋಬರ್ 10ರಂದು ಮನೆಗೆ ಬಂದಿದ್ದರು. ಬಳಿಕ ಅಕ್ಟೋಬರ್ 13ರಂದು ಬೆಳಿಗ್ಗೆ ಕೆಲಸಕ್ಕೆಂದು ಮಂಗಳೂರಿಗೆ ತೆರಳಿದ್ದರು.
ಅಕ್ಟೋಬರ್ 27ರಂದು ಮನೆಯವರು ವಸಂತಿ ಅವರಿಗೆ ದೂರವಾಣಿ ಕರೆ ಮಾಡಿದಾಗ ಸಂಪರ್ಕಕ್ಕೆ ಸಿಗದ ಹಿನ್ನೆಲೆಯಲ್ಲಿ ಆತಂಕಗೊಂಡಿದ್ದಾರೆ. ಬಳಿಕ ಅವರು ಕೆಲಸ ಮಾಡುತ್ತಿದ್ದ ಕಂಪನಿಗೆ ತೆರಳಿ ವಿಚಾರಿಸಿದಾಗ, ಅಕ್ಟೋಬರ್ 10ರಂದು ರಜೆಗಾಗಿ ಮನೆಗೆ ತೆರಳಿದ್ದ ವಸಂತಿ ಅವರು ನಂತರ ಕೆಲಸಕ್ಕೆ ಹಾಜರಾಗಿಲ್ಲ ಎಂದು ಕಂಪನಿಯ ಮೇಲ್ವಿಚಾರಕರು ತಿಳಿಸಿದ್ದಾರೆ.
ಇದರಿಂದ ಮತ್ತಷ್ಟು ಆತಂಕಗೊಂಡ ಕುಟುಂಬಸ್ಥರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಯುವತಿಯ ಪತ್ತೆಗಾಗಿ ತನಿಖೆ ಹಾಗೂ ಶೋಧ ಕಾರ್ಯ ಕೈಗೊಂಡಿದ್ದಾರೆ.
ನಾಪತ್ತೆಯಾಗಿರುವ ವಸಂತಿ ಅವರ ಬಗ್ಗೆ ಯಾರಿಗಾದರೂ ಮಾಹಿತಿ ದೊರೆತಲ್ಲಿ ಸಮೀಪದ ಪೊಲೀಸ್ ಠಾಣೆಗೆ ಅಥವಾ ಬೆಳ್ಳಾರೆ ಪೊಲೀಸರಿಗೆ ಮಾಹಿತಿ ನೀಡುವಂತೆ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

