2.55 ಮಿಲಿಯನ್ ಪ್ರಯಾಣಿಕರ ನಿರ್ವಹಣೆ | ಎಸಿಐನಿಂದ ಜಾಗತಿಕ ಮಟ್ಟದ ಪ್ರಶಸ್ತಿ, ಗ್ರಾಹಕ ಅನುಭವಕ್ಕೆ ಲೆವೆಲ್ 5 ಮಾನ್ಯತೆ
ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ವಾಣಿಜ್ಯ ಕಾರ್ಯಾಚರಣೆ ಆರಂಭಿಸಿ ಆರು ವರ್ಷ ಪೂರೈಸಿದ್ದು, ಜಾಗತಿಕ ಮನ್ನಣೆ ಹಾಗೂ ಸುಸ್ಥಿರ ಬೆಳವಣಿಗೆಯ ಸಾಧನೆಗಳೊಂದಿಗೆ ಆರನೇ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದೆ.

2020ರ ಅಕ್ಟೋಬರ್ 31ರಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಆಡಳಿತಾತ್ಮಕ ಮತ್ತು ಕಾರ್ಯಾಚರಣೆಯ ನಿರ್ವಹಣೆಯನ್ನು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ (MgIAL) ವಹಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅಕ್ಟೋಬರ್ 31ರಂದು ಆರನೇ ವಾಣಿಜ್ಯ ಕಾರ್ಯಾಚರಣೆ ದಿನದ ವಾರ್ಷಿಕೋತ್ಸವವನ್ನು ಪ್ರಯಾಣಿಕರು ಹಾಗೂ ವಿವಿಧ ಪಾಲುದಾರರ ಸಮ್ಮುಖದಲ್ಲಿ ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು. ದುಬೈ–ಮಂಗಳೂರು ಮತ್ತು ಮುಂಬೈ–ಮಂಗಳೂರು ವಿಮಾನಗಳಲ್ಲಿ ಆಗಮಿಸಿದ ಪ್ರಯಾಣಿಕರಿಗೆ ಉಡುಗೊರೆಗಳನ್ನೂ ವಿತರಿಸಲಾಯಿತು.
ಕಳೆದ ಆರ್ಥಿಕ ವರ್ಷದಲ್ಲಿ ವಿಮಾನ ನಿಲ್ದಾಣವು 2.55 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವ ಮೂಲಕ ದಾಖಲೆಯ ಪ್ರಯಾಣಿಕರ ಸಂಚಾರ ಸಾಧಿಸಿದೆ. ಕಳೆದ ಒಂದು ವರ್ಷದ ಅವಧಿಯಲ್ಲಿ ಪ್ರಯಾಣಿಕರ ಅನುಭವ, ಸುಸ್ಥಿರತೆ, ಸುರಕ್ಷತೆ ಹಾಗೂ ಕಾರ್ಯಾಚರಣೆಯ ದಕ್ಷತೆಯಲ್ಲಿ ಹಲವು ಮಹತ್ವದ ಮೈಲಿಗಲ್ಲುಗಳನ್ನು ತಲುಪಿದೆ.
ಪ್ರಯಾಣಿಕರ ಅನುಭವಕ್ಕೆ ಸಂಬಂಧಿಸಿದಂತೆ ಏರ್ಪೋರ್ಟ್ಸ್ ಕೌನ್ಸಿಲ್ ಇಂಟರ್ನ್ಯಾಷನಲ್ (ACI) ಸಂಸ್ಥೆಯಿಂದ ಪ್ರತಿಷ್ಠಿತ ಲೆವೆಲ್ 5 ಏರ್ಪೋರ್ಟ್ ಕಸ್ಟಮರ್ ಎಕ್ಸ್ಪೀರಿಯನ್ಸ್ ಅಕ್ರೆಡಿಟೇಶನ್ ಮಾನ್ಯತೆ ಲಭಿಸಿದೆ. ಜಾಗತಿಕ ಮಟ್ಟದಲ್ಲಿ ಆಯ್ದ ವಿಮಾನ ನಿಲ್ದಾಣಗಳಿಗೆ ಮಾತ್ರ ದೊರೆಯುವ ಈ ಮಾನ್ಯತೆಯನ್ನು ಪಡೆದ ಭಾರತದ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ಮಂಗಳೂರು ವಿಮಾನ ನಿಲ್ದಾಣವೂ ಒಂದಾಗಿದೆ.

ಅಲ್ಲದೆ, ಎಸಿಐ ಏರ್ಪೋರ್ಟ್ ಸರ್ವಿಸ್ ಕ್ವಾಲಿಟಿ ಅವಾರ್ಡ್ಸ್ 2025ರಲ್ಲಿ ಜಾಗತಿಕ ಮಟ್ಟದಲ್ಲಿ ‘ಬೆಸ್ಟ್ ಏರ್ಪೋರ್ಟ್ ಅಟ್ ಅರೈವಲ್ಸ್’ ಪ್ರಶಸ್ತಿಯನ್ನು ಸತತ ಎರಡನೇ ವರ್ಷ ತನ್ನದಾಗಿಸಿಕೊಂಡಿದೆ. ಇದು ಆಗಮಿಸುವ ಪ್ರಯಾಣಿಕರಿಗೆ ಒದಗಿಸುತ್ತಿರುವ ಗುಣಮಟ್ಟದ ಸೇವೆ ಮತ್ತು ಅನುಭವಕ್ಕೆ ದೊರೆತ ಅಂತರಾಷ್ಟ್ರೀಯ ಮನ್ನಣೆಯಾಗಿದೆ.
ಸುಸ್ಥಿರ ಅಭಿವೃದ್ಧಿಯ ಕ್ಷೇತ್ರದಲ್ಲಿಯೂ ವಿಮಾನ ನಿಲ್ದಾಣ ಗಮನಾರ್ಹ ಸಾಧನೆ ಮಾಡಿದೆ. ಶೇ.99ಕ್ಕಿಂತ ಹೆಚ್ಚಿನ ತ್ಯಾಜ್ಯವನ್ನು ಭೂಭರ್ತಿಗೆ ಕಳುಹಿಸುವುದನ್ನು ತಡೆಯುವ ಮೂಲಕ ಭಾರತೀಯ ಕೈಗಾರಿಕಾ ಒಕ್ಕೂಟದಿಂದ (CII) ‘ಝೀರೋ ವೇಸ್ಟ್ ಟು ಲ್ಯಾಂಡ್ಫಿಲ್ ಪ್ಲಾಟಿನಂ–ಕ್ಲಾಸ್ 1’ ಪ್ರಮಾಣೀಕರಣ ಪಡೆದುಕೊಂಡಿದೆ.
ವಿಮಾನಯಾನ ಸುರಕ್ಷತೆ ಮತ್ತು ಕಾರ್ಯಾಚರಣೆಯ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ರನ್ವೇ 24ಕ್ಕೆ ಪ್ರಿಸಿಷನ್ ಅಪ್ರೋಚ್ ಲೈಟಿಂಗ್ (PAL) ಕ್ಯಾಟಗರಿ 1 ವ್ಯವಸ್ಥೆಯನ್ನು ಅಳವಡಿಸಿ ಕಾರ್ಯಾರಂಭ ಮಾಡಲಾಗಿದೆ. ಇದರಿಂದ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಲ್ಲಿಯೂ ವಿಮಾನಗಳ ಇಳಿಯುವಿಕೆಯ ನಿಖರತೆ ಮತ್ತು ಸುರಕ್ಷತೆ ಹೆಚ್ಚಲಿದೆ.
75 ವರ್ಷಗಳ ಇತಿಹಾಸ ಹೊಂದಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು 583.77 ಎಕರೆ ಪ್ರದೇಶದಲ್ಲಿ ವಿಸ್ತರಿಸಿಕೊಂಡಿದ್ದು, ಕರ್ನಾಟಕದ ಪ್ರಮುಖ ವಿಮಾನಯಾನ ಕೇಂದ್ರಗಳಲ್ಲಿ ಒಂದಾಗಿದೆ. ದಿನಕ್ಕೆ 40ಕ್ಕೂ ಅಧಿಕ ವಿಮಾನ ಸಂಚಾರಗಳನ್ನು ನಿರ್ವಹಿಸುತ್ತಿರುವ ಈ ವಿಮಾನ ನಿಲ್ದಾಣವು ವರ್ಷಕ್ಕೆ 5,600 ಮೆಟ್ರಿಕ್ ಟನ್ಗೂ ಅಧಿಕ ವಾಯು ಸರಕು ಸಾಗಣೆಯನ್ನೂ ನಿರ್ವಹಿಸುತ್ತಿದೆ.
ಏಳನೇ ವರ್ಷದ ಕಾರ್ಯಾಚರಣೆಯತ್ತ ಮುನ್ನಡೆಯುತ್ತಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸುರಕ್ಷಿತ, ಸುಸ್ಥಿರ ಹಾಗೂ ಪ್ರಯಾಣಿಕ ಕೇಂದ್ರಿತ ಸೇವೆಗಳನ್ನು ಒದಗಿಸುವುದರ ಜೊತೆಗೆ ಸಂಪರ್ಕ ವ್ಯವಸ್ಥೆಯನ್ನು ಬಲಪಡಿಸಿ, ಕರಾವಳಿ ಭಾಗದ ಆರ್ಥಿಕ ಬೆಳವಣಿಗೆಗೆ ಮತ್ತಷ್ಟು ಕೊಡುಗೆ ನೀಡುವ ಗುರಿ ಹೊಂದಿದೆ.

