ಮೂಡುಬಿದಿರೆ : ಖಾಸಗಿ ಬಸ್‌ನ ಬ್ರೇಕ್ ಫೇಲ್

0
151

ಮೂಡುಬಿದಿರೆ : ಖಾಸಗಿ ಬಸ್‌ನ ಬ್ರೇಕ್ ಫೇಲ್ ಆದ ಪರಿಣಾಮ ರಸ್ತೆ ಬದಿಯ ಮೋರಿಗೆ ಬಸ್‌ನ ಚಕ್ರಗಳು ಸಿಲುಕಿಕೊಂಡ ಘಟನೆ ಸೋಮವಾರ ಬೆಳಗ್ಗೆ ಮೂಡುಬಿದಿರೆ ಸಮೀಪದ ಗಾಂಧಿನಗರದಲ್ಲಿ ನಡೆದಿದೆ. ಅದೃಷ್ಟವಶಾತ್ ಬಸ್‌ನಲ್ಲಿದ್ದ ಪ್ರಯಾಣಿಕರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ.

ಮುಲ್ಕಿ ಕಡೆಯಿಂದ ಮೂಡುಬಿದಿರೆ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ ಗಾಂಧಿನಗರದ ಮೂಲಕ ಸಾಗುತ್ತಿದ್ದ ವೇಳೆ ಏಕಾಏಕಿ ಬ್ರೇಕ್ ವೈಫಲ್ಯ ಸಂಭವಿಸಿದೆ. ಈ ಸಂದರ್ಭದಲ್ಲಿ ಚಾಲಕ ಬಸ್‌ನ ಮೇಲಿನ ನಿಯಂತ್ರಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿದ್ದು, ತಕ್ಷಣ ಬಸ್ ಅನ್ನು ನಿಯಂತ್ರಿಸಲು ಪ್ರಯತ್ನಿಸಿದ್ದಾರೆ. ಪರಿಣಾಮ ಬಸ್ ರಸ್ತೆ ಬದಿಯ ಮೋರಿಯತ್ತ ಚಲಿಸಿ, ಅದರ ಚಕ್ರಗಳು ಮೋರಿಯಲ್ಲಿ ಸಿಲುಕಿಕೊಂಡಿವೆ.

ಘಟನೆಯಿಂದಾಗಿ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆದರೆ ಚಾಲಕನ ಸಮಯಪ್ರಜ್ಞೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದಂತಾಗಿದೆ. ಬಸ್‌ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.