ಅಸಹಾಯಕ ವೃದ್ಧೆಗೆ ಹೊಸಬೆಳಕು ಆಶ್ರಮದ ಆಸರೆ

0
13

ಉಡುಪಿ: ಅಸಹಾಯಕ ಸ್ಥಿತಿಯಲ್ಲಿ ಪತ್ತೆಯಾಗಿ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತಮಿಳುನಾಡು ಮೂಲದ ವೃದ್ಧೆಯೊಬ್ಬರಿಗೆ ಕಾರ್ಕಳದ ಹೊಸಬೆಳಕು ಆಶ್ರಮವು ಪುನರ್ವಸತಿ ಕಲ್ಪಿಸಿದೆ.

ವೃದ್ಧೆ ಗುಣಮುಖರಾದ ಹಿನ್ನೆಲೆಯಲ್ಲಿ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಜಿಲ್ಲಾಸ್ಪತ್ರೆಯಿಂದ ಬಿಡುಗಡೆಗೊಳಿಸಿ, ಅಂಬುಲೆನ್ಸ್ ಮೂಲಕ ಕಾರ್ಕಳದ ಹೊಸಬೆಳಕು ಆಶ್ರಮಕ್ಕೆ ಕರೆದೊಯ್ದು ದಾಖಲಿಸಿದ್ದಾರೆ. ಈ ಕಾರ್ಯಕ್ಕೆ ಆಶ್ರಮದ ಸಂಚಾಲಕರಾದ ತನುಲಾ ತರುಣ್ ಹಾಗೂ ಗೌರೀಶ್ ಸಹಕರಿಸಿದ್ದಾರೆ.

ಅಪರಿಚಿತ ವೃದ್ಧೆ ತಮಿಳುನಾಡಿನ ತಿರುವಳ್ಳುವೂರು ಮೂಲದವರೆಂದು ತಿಳಿದುಬಂದಿದೆ. ವೃದ್ಧೆಯನ್ನು ಅವರ ಕುಟುಂಬದವರೊಂದಿಗೆ ಸೇರಿಸುವ ನಿಟ್ಟಿನಲ್ಲಿ ನಿತ್ಯಾನಂದ ಒಳಕಾಡು ಅವರು ತಮಿಳುನಾಡಿನ ರಾಜಕೀಯ ಮುಖಂಡರು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸುವ ಪ್ರಯತ್ನ ಮುಂದುವರಿಸಿದ್ದಾರೆ.

ಕಳೆದ ಸೆಪ್ಟೆಂಬರ್ 26ರಂದು ಬ್ರಹ್ಮಾವರದಲ್ಲಿ ಹೆತ್ತ ತಾಯಿಯನ್ನೇ ಮಕ್ಕಳು ಅಪರಿಚಿತ ಸ್ಥಳದಲ್ಲಿ ಬಿಟ್ಟುಹೋದ ಘಟನೆ ನಡೆದಿತ್ತು. ಬ್ರಹ್ಮಾವರದ ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಶಾಲೆಯ ಸಮೀಪ ವೃದ್ಧೆಯೊಬ್ಬರು ದಿಕ್ಕು ತೋಚದೆ ಪರದಾಡುತ್ತಿರುವುದನ್ನು ಶಾಲಾ ಬಸ್ ಚಾಲಕರೊಬ್ಬರು ಗಮನಿಸಿದ್ದರು. ಬಳಿಕ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರಿಗೆ ಮಾಹಿತಿ ನೀಡಿದ್ದರು. ತಕ್ಷಣ ಸ್ಪಂದಿಸಿದ ಒಳಕಾಡು ಅವರು 112 ತುರ್ತು ಪೊಲೀಸ್ ಸಹಾಯವಾಣಿಯ ಸಿಬ್ಬಂದಿಗಳ ನೆರವಿನಿಂದ ವೃದ್ಧೆಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು.

ಆಸ್ಪತ್ರೆಗೆ ದಾಖಲಿಸುವ ಸಂದರ್ಭದಲ್ಲಿ ವೃದ್ಧೆ ತನ್ನ ಹೆಸರು ಸರಸ್ವತಿ (70) ಎಂದು ಹಾಗೂ ತಮಿಳುನಾಡಿನ ತಿರುವಳ್ಳುವೂರು ನಿವಾಸಿ ಎಂದು ತಿಳಿಸಿದ್ದರು. ತನ್ನ ಮಗ ಕಾರಿನಲ್ಲಿ ಕರೆತಂದು ಅಪರಿಚಿತ ಸ್ಥಳದಲ್ಲಿ ಬಿಟ್ಟು ಹೋಗಿದ್ದಾನೆ ಎಂದು ಹೇಳಿಕೊಂಡಿದ್ದರು. ಈ ಕುರಿತು ಅಂದೇ ಒಳಕಾಡು ಅವರು ಮಹಿಳಾ ಪೊಲೀಸ್ ಠಾಣೆ ಹಾಗೂ ಹಿರಿಯ ನಾಗರಿಕರ ಸಹಾಯವಾಣಿಗೆ ಮೌಖಿಕವಾಗಿ ಮಾಹಿತಿ ನೀಡಿದ್ದರು. ಸದ್ಯ ಹೊಸಬೆಳಕು ಆಶ್ರಮದಲ್ಲಿ ಆಶ್ರಯ ಪಡೆದಿರುವ ವೃದ್ಧೆಯನ್ನು ಅವರ ಕುಟುಂಬದವರೊಂದಿಗೆ ಮತ್ತೆ ಸೇರಿಸುವ ಪ್ರಯತ್ನ ಮುಂದುವರಿದಿದೆ.