ಬೈಲೂರು ಶ್ರೀನಿವಾಸ ದೇವಸ್ಥಾನದ ರಸ್ತೆಗೆ ಶೀಘ್ರ ಡಾಂಬರೀಕರಣ : ಮಾಜಿ ನಗರಸಭಾ ಸದಸ್ಯ ರಮೇಶ್ ಕಾಂಚನ್ ಮನವಿ

0
11

ಉಡುಪಿ ನಗರದ 31ನೇ ಬೈಲೂರು ವಾರ್ಡ್‌ನ ಶ್ರೀನಿವಾಸ ದೇವಸ್ಥಾನದ ಮುಖ್ಯರಸ್ತೆಯಿಂದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದವರೆಗೆ ರಸ್ತೆಯನ್ನು ಸಂಪೂರ್ಣ ಡಾಂಬರೀಕರಣಗೊಳಿಸುವಂತೆ ಆಗ್ರಹಿಸಿ ಮಾಜಿ ನಗರಸಭಾ ಸದಸ್ಯ ರಮೇಶ್ ಕಾಂಚನ್ ನೇತೃತ್ವದಲ್ಲಿ ನಗರಸಭೆ ಪೌರಾಯುಕ್ತ ಮಹಾಂತೇಶ್ ಹಂಗರಗಿ ಅವರಿಗೆ ಮನವಿ ಸಲ್ಲಿಸಲಾಯಿತು.

ವಾಯ್ಸ್:ಶ್ರೀನಿವಾಸ ದೇವಸ್ಥಾನದಿಂದ ಪಿಪಿಸಿ ಕಾಲೇಜಿನ ಕಡೆಗೆ ಸಾಗುವ ಮುಖ್ಯರಸ್ತೆಯಲ್ಲಿ ಸಣ್ಣ ಗಾತ್ರದ ಒಳಚರಂಡಿ ಪೈಪ್‌ಲೈನ್ ಅಳವಡಿಸಿದ್ದರಿಂದ ಕಳೆದ 13 ವರ್ಷಗಳಿಂದ ಕೊಳಚೆ ನೀರು ರಸ್ತೆಯಲ್ಲೇ ಹರಿಯುತ್ತಿತ್ತು. ಇದರಿಂದ ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದರು. ಸಮಸ್ಯೆ ಪರಿಹಾರಕ್ಕಾಗಿ ನಗರಸಭೆ ₹97 ಲಕ್ಷ ಅನುದಾನ ಮೀಸಲಿಟ್ಟು, ದೊಡ್ಡ ಗಾತ್ರದ ಒಳಚರಂಡಿ ಪೈಪ್‌ಲೈನ್ ಅಳವಡಿಕೆ ಹಾಗೂ ರಸ್ತೆಯ ಸಂಪೂರ್ಣ ಡಾಂಬರೀಕರಣಕ್ಕೆ ಯೋಜನೆ ರೂಪಿಸಿತ್ತು.

ಒಳಚರಂಡಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಪಿಪಿಸಿ ಕಾಲೇಜಿನ ಕಡೆಗೆ ಸಾಗುವ ರಸ್ತೆಯಲ್ಲಿ ಕಾಮಗಾರಿ ನಡೆಸುವ ವೇಳೆ ಬಂಡೆ ಎದುರಾಗಿತ್ತು. ವಸತಿ ಪ್ರದೇಶವಾಗಿರುವುದರಿಂದ ಸ್ಫೋಟಕ ಬಳಸಿ ಬಂಡೆ ಒಡೆಯಲು ಸಾಧ್ಯವಾಗದೆ, ಯಂತ್ರದ ಮೂಲಕ ಕತ್ತರಿಸುವ ಅನಿವಾರ್ಯತೆ ಎದುರಾಗಿತ್ತು. ಮಳೆಗಾಲದಲ್ಲಿ ಈ ಪ್ರಕ್ರಿಯೆಗೆ ಹೆಚ್ಚು ಸಮಯ ಬೇಕಾದ ಕಾರಣ ಕಾಮಗಾರಿ ವಿಳಂಬವಾಗಿತ್ತು.

ಇದೀಗ ಶ್ರೀನಿವಾಸ ದೇವಸ್ಥಾನದ ಮುಖ್ಯರಸ್ತೆಯಿಂದ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದವರೆಗಿನ ಒಳಚರಂಡಿ ಕಾಮಗಾರಿ ಪೂರ್ಣಗೊಂಡಿದೆ. ಡಾಮರ್ ಪ್ಲಾಂಟ್ ಆರಂಭಗೊಂಡ ತಕ್ಷಣ ರಸ್ತೆ ಡಾಂಬರೀಕರಣ ಕಾಮಗಾರಿಯನ್ನೂ ಪೂರ್ಣಗೊಳಿಸಲಾಗುವುದು ಎಂದು ಪೌರಾಯುಕ್ತರು ತಿಳಿಸಿದ್ದಾರೆ ಎಂದು ರಮೇಶ್ ಕಾಂಚನ್ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಡಾಮರ್ ಪ್ಲಾಂಟ್‌ಗಳು ಈಗಾಗಲೇ ಪುನರಾರಂಭಗೊಂಡಿರುವುದರಿಂದ ನಗರಸಭೆ ಅಧಿಕಾರಿಗಳು ವಿಳಂಬ ಮಾಡದೆ ತಕ್ಷಣ ರಸ್ತೆ ಡಾಂಬರೀಕರಣ ಕಾಮಗಾರಿ ಕೈಗೆತ್ತಿಕೊಳ್ಳಬೇಕು. ಕಾಮಗಾರಿ ವಿಳಂಬದಿಂದ ಸ್ಥಳೀಯರು ಹಾಗೂ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ಈ ಸಂದರ್ಭದಲ್ಲಿ ನಗರಸಭೆ ಮಾಜಿ ಸದಸ್ಯ ವಿಜಯ ಪೂಜಾರಿ, ನಾಮನಿರ್ದೇಶಿತ ಸದಸ್ಯ ಮೊಹಮ್ಮದ್, ಗಣೇಶ್ ನೆರ್ಗಿ, ಚಂದ್ರಮೋಹನ್ ಚಿಟ್ಪಾಡಿ, ಸತೀಶ್ ಕುಮಾರ್ ಮಂಚಿ, ಸತೀಶ್ ಕೊಡವೂರು, ಮೊಹಮ್ಮದ್ ಶೀಶ್, ಸ್ಥಳೀಯರಾದ ಮ್ಯಾಕ್ಸಿಮ್ ಡಿ’ಸೋಜಾ, ಅನಂತಕೃಷ್ಣ ಪ್ರಭು, ಕೃಷ್ಣಾನಂದ ಪೈ, ಪ್ರೀತಿ ಸಾಲಿನ್ಸ್, ಶಹನವಾಜ್, ಕ್ರಿಸ್ಟಿನಾ ಬಂಗೇರ, ಗೀತಾ ರವಿ, ಶೋಭಾ ಭಂಡಾರಿ, ಯಶಸ್ವಿನಿ, ಸಂಜಯ್ ಆಚಾರ್ಯ, ಪ್ರಜ್ವಲ್ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.