ಉಡುಪಿ ಜಿಲ್ಲೆಯಲ್ಲಿ ಆಟೋ ಮೀಟರ್ ದರ ಪರಿಷ್ಕರಣೆಗೆ ಆಗ್ರಹ : ಕನಿಷ್ಠ ದರ 60 ರೂ., ರನ್ನಿಂಗ್ ದರ 30 ರೂ. ನಿಗದಿಗೆ ಮನವಿ

0
4

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಆಟೋ ರಿಕ್ಷಾ ಮೀಟರ್ ದರ ಪರಿಷ್ಕರಣೆ ಮಾಡದೆ ಸುಮಾರು ಐದು ವರ್ಷಗಳು ಕಳೆದಿರುವ ಹಿನ್ನೆಲೆಯಲ್ಲಿ, ಕೂಡಲೇ ಆಟೋ ಮೀಟರ್ ದರ ಪರಿಷ್ಕರಣೆ ಮಾಡುವಂತೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆ ಉಡುಪಿ ಜಿಲ್ಲೆ, ಜಯಕರ್ನಾಟಕ ಆಟೋ ಸಂಘಟನೆ ಕಾರ್ಕಳ ತಾಲೂಕು ಹಾಗೂ ಆಶ್ರಯದಾತ ಆಟೋ ಯೂನಿಯನ್ ಉಡುಪಿ ಜಿಲ್ಲೆ ವತಿಯಿಂದ ನವೆಂಬರ್ 4ರಂದು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.

ಜಯಕರ್ನಾಟಕ ಸಂಘಟನೆಯ ಉಡುಪಿ ಜಿಲ್ಲಾ ಗೌರವಾಧ್ಯಕ್ಷರು, ಪದಾಧಿಕಾರಿಗಳು, ಸರ್ವ ಸದಸ್ಯರು ಹಾಗೂ ಜಯಕರ್ನಾಟಕ ಆಟೋ ಸಂಘಟನೆ ಕಾರ್ಕಳ ತಾಲೂಕು ಮತ್ತು ಆಶ್ರಯದಾತ ಆಟೋ ಯೂನಿಯನ್ ಉಡುಪಿ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡಬೆಟ್ಟು ಅವರ ನೇತೃತ್ವದಲ್ಲಿ ಈ ಮನವಿ ಸಲ್ಲಿಸಲಾಯಿತು.

ಉಡುಪಿ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ಆಟೋ ಮೀಟರ್ ದರದಲ್ಲಿ ಯಾವುದೇ ಪರಿಷ್ಕರಣೆ ಆಗಿಲ್ಲ. ದಿನನಿತ್ಯದ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ ಹಾಗೂ ವಾಹನಗಳ ನಿರ್ವಹಣಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಆಟೋ ಚಾಲಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಆದ್ದರಿಂದ ಆಟೋ ರಿಕ್ಷಾಗಳ ಕನಿಷ್ಠ ಪ್ರಯಾಣ ದರವನ್ನು 60 ರೂಪಾಯಿ ಹಾಗೂ ಪ್ರತಿ ರನ್ನಿಂಗ್ ದರವನ್ನು 30 ರೂಪಾಯಿಗೆ ನಿಗದಿಪಡಿಸಿ, ಕೂಡಲೇ ಹೊಸ ದರ ಜಾರಿಗೆ ತರಬೇಕು ಎಂದು ಸಂಘಟನೆಗಳು ಮನವಿಯಲ್ಲಿ ಒತ್ತಾಯಿಸಿವೆ.

ನಂತರ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಮನವಿಯ ಕುರಿತು ಚರ್ಚಿಸಿದಾಗ, ಅವರು ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆರ್‌ಟಿಒ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಶಾಸಕರೊಂದಿಗೆ ಸಭೆ ನಡೆಸಿ, ಉಡುಪಿ ಜಿಲ್ಲೆಯಲ್ಲಿ ಆಟೋ ಮೀಟರ್ ದರವನ್ನು ಶೀಘ್ರದಲ್ಲೇ ಪರಿಷ್ಕರಣೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸಂಘಟನೆಯ ಪದಾಧಿಕಾರಿಗಳು ತಿಳಿಸಿದ್ದಾರೆ.

ಆಟೋ ಚಾಲಕರ ಬಹುದಿನಗಳ ಬೇಡಿಕೆಗೆ ಜಿಲ್ಲಾಡಳಿತ ಸ್ಪಂದಿಸಿರುವುದು ಚಾಲಕರಲ್ಲಿ ಆಶಾಭಾವನೆ ಮೂಡಿಸಿದೆ. ಶೀಘ್ರದಲ್ಲೇ ದರ ಪರಿಷ್ಕರಣೆ ಜಾರಿಯಾಗುವ ನಿರೀಕ್ಷೆಯನ್ನು ಸಂಘಟನೆಗಳು ವ್ಯಕ್ತಪಡಿಸಿವೆ.

ಮನವಿ ಸಲ್ಲಿಕೆಯಲ್ಲಿ ಜಯಕರ್ನಾಟಕ ಸಂಘಟನೆ ಉಡುಪಿ ಜಿಲ್ಲೆ, ಜಯಕರ್ನಾಟಕ ಆಟೋ ಸಂಘಟನೆ ಕಾರ್ಕಳ ತಾಲೂಕು ಹಾಗೂ ಆಶ್ರಯದಾತ ಆಟೋ ಯೂನಿಯನ್ (ರಿ.) ಉಡುಪಿ ಜಿಲ್ಲೆಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.