ಮಾನವೀಯತೆಯಲ್ಲೇ ದೈವತ್ವದ ದರ್ಶನ ಮಾಡಿಸಿದ ನಾರಾಯಣಗುರು : ಮೋಹನ್ ಮಾಡೂರು

0
8

ಯುವವಾಹಿನಿ ಬಂಟ್ವಾಳ ಘಟಕದ ಆಶ್ರಯದಲ್ಲಿ ಗುರುತತ್ವವಾಹಿನಿ ಮಾಲಿಕೆ 85 : ಮಾನವೀಯತೆಯಲ್ಲೇ ದೈವತ್ವದ ದರ್ಶನ ಮಾಡಿಸಿದ ನಾರಾಯಣಗುರು : ಮೋಹನ್ ಮಾಡೂರು

ಮಂಗಳೂರು : ದೇವರನ್ನು ದೇವಾಲಯಗಳಲ್ಲಿ ಮಾತ್ರ ಹುಡುಕದೆ, ಮನುಷ್ಯನಲ್ಲಿರುವ ಪ್ರೀತಿ, ಕರುಣೆ, ಸಹಾನುಭೂತಿ ಮತ್ತು ಮಾನವೀಯತೆಯಲ್ಲಿಯೇ ದೈವತ್ವವನ್ನು ಕಾಣುವ ವಿಶಿಷ್ಟ ತತ್ವವನ್ನು ಜಗತ್ತಿಗೆ ಸಾರಿದವರು ಬ್ರಹ್ಮಶ್ರೀ ನಾರಾಯಣಗುರುಗಳು ಎಂದು ಯುವವಾಹಿನಿ (ರಿ.) ಕೊಲ್ಯ ಘಟಕದ ಮಾಜಿ ಅಧ್ಯಕ್ಷ ಮೋಹನ್ ಮಾಡೂರು ಹೇಳಿದರು.

ನಾರಾಯಣಗುರುಗಳ ಚಿಂತನೆ ಕೇವಲ ಧಾರ್ಮಿಕ ಸುಧಾರಣೆಗೆ ಸೀಮಿತವಾಗಿರದೆ, ಮನುಷ್ಯನ ಅಂತರಂಗದ ಪರಿವರ್ತನೆ ಹಾಗೂ ಸಮಾಜದ ಸಮಗ್ರ ಉನ್ನತಿಯನ್ನು ಗುರಿಯಾಗಿಸಿಕೊಂಡಿತ್ತುಜಾತಿ, ಮತ, ವರ್ಗಗಳ ಹೆಸರಿನಲ್ಲಿ ಮನುಷ್ಯರನ್ನು ವಿಭಜಿಸುವ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿದ ಗುರುಗಳು, ಪ್ರತಿಯೊಬ್ಬ ಮನುಷ್ಯನಿಗೂ ಸಮಾನ ಗೌರವ ಮತ್ತು ಘನತೆಯಿಂದ ಬದುಕುವ ಹಕ್ಕಿದೆ ಎಂಬುದನ್ನು ಪ್ರತಿಪಾದಿಸಿದರು.

ಶಿಕ್ಷಣದಿಂದ ಜ್ಞಾನ, ಸಂಘಟನೆಯಿಂದ ಶಕ್ತಿ ಹಾಗೂ ಉದ್ಯಮದಿಂದ ಆರ್ಥಿಕ ಸ್ವಾವಲಂಬನೆ ಸಾಧ್ಯ ಎಂಬ ದೂರದೃಷ್ಟಿಯ ಚಿಂತನೆಯನ್ನು ಸಮಾಜಕ್ಕೆ ನೀಡಿದರು. ಮನುಷ್ಯನಲ್ಲಿರುವ ಅಜ್ಞಾನ, ಅಹಂಕಾರ, ದ್ವೇಷ ಮತ್ತು ಮೌಢ್ಯಗಳನ್ನು ದೂರಮಾಡಿ ಪ್ರೀತಿ, ಸಹಬಾಳ್ವೆ ಹಾಗೂ ಪರಸ್ಪರ ಗೌರವವನ್ನು ಬೆಳೆಸುವುದೇ ನಿಜವಾದ ಆಧ್ಯಾತ್ಮಿಕ ಸಾಧನೆ ಎಂಬ ಸಂದೇಶವನ್ನು ತಮ್ಮ ಬದುಕು ಮತ್ತು ತತ್ವಗಳ ಮೂಲಕ ಸಾರಿದರು.

ಅವರು ನವೆಂಬರ್ 5, 2026ರಂದು ಮೂರ್ಜೆ ಮಾರಪ್ಪ ಪೂಜಾರಿಯವರ ನಂದನಿವಾಸದಲ್ಲಿ ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ನಡೆದ ಗುರುತತ್ವವಾಹಿನಿ ಮಾಲಿಕೆ 85ರಲ್ಲಿ ಗುರುಸಂದೇಶ ನೀಡಿದರು.

ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಭಜೊರೇ ಮಾರುತಿ ಕುಣಿತ ಭಜನಾ ತರಬೇತುದಾರರಾದ ಸಂದೇಶ್ ಮದ್ದಡ್ಕ, ಆಕಾಶ್ ಗುರುವಾಯನಕೆರೆ, ಯುವವಾಹಿನಿ ಬಂಟ್ವಾಳ ಘಟಕದ ಪ್ರಥಮ ಉಪಾಧ್ಯಕ್ಷರಾದ ನಿಕೇಶ್ ಕೋಟ್ಯಾನ್, ಕೋಶಾಧಿಕಾರಿ ಪ್ರಜಿತ್ ಅಮೀನ್ ಏರಮಲೆ , ನಿರ್ದೇಶಕರಾದ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ , ಶೇಖರ್ ಅಗಲ್ದೋಡಿ, ನವೀನ್ ಕುಡ್ಮೇರ್, ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಕೆ., ರಾಜೇಶ್ ಸುವರ್ಣ, ಶಿವಾನಂದ ಎಮ್, ಅರುಣ್ ಮಹಾಕಾಳಿ ಪಡ್ಪು , ನಾಗೇಶ್ ಪೊನ್ನೋಡಿ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸಾತ್ವಿಕ್ ದೇರಾಜೆ , ಕಾರ್ತಿಕ್ ದೇರಾಜೆ ಮತ್ತು ಭಜಕರಾದ ವಿನಯ್ ಆಚಾರ್ಯ ಸಂಗೀತದಲ್ಲಿ ಸಹಕರಿಸಿದರು

ಆತಿಥ್ಯ ವಹಿಸಿದ ಸರಿತಾ ರಮಾನಂದ ಇವರು ಆಗಮಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಯುವವಾಹಿನಿ ಬಂಟ್ವಾಳ ಘಟಕದ ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಮಹೇಶ್ ಬೊಳ್ಳಾಯಿ ವಂದಿಸಿದರು.
ಘಟಕದ ಅಧ್ಯಕ್ಷರಾದ ಕಿರಣ್ ಪೂಂಜರಕೊಡಿ ಕಾರ್ಯಕ್ರಮ ನಿರೂಪಿಸಿದರು.