ಅವಿಭಜಿತ ಕುಟುಂಬ ಮೌಲ್ಯಗಳ ಪ್ರತಿಪಾದಕ, ಪುರೋಹಿತ ಸಮುದಾಯದ ಧ್ವನಿ: ‘ವಿಶ್ವ ಜಾಗೃತ ಪುರೋಹಿತರತ್ನ’ ಡಾ. ಬಿ.ಎನ್. ಮಹೇಶ್ ಕುಮಾರ್

0
5

-ಮಂದಾರ ರಾಜೇಶ್ ಭಟ್

​
ಸಮಾಜ ಸೇವೆಯನ್ನು ಭಗವಂತನ ಪೂಜೆಯೆಂದೇ ಭಾವಿಸಿ, ಯಾವುದೇ ಪ್ರಚಾರದ ಹಂಬಲವಿಲ್ಲದೆ ‘ಎಲೆಮರೆಯ ಕಾಯಿ’ಯಂತೆ ನಿಸ್ವಾರ್ಥ ಸೇವೆಯಲ್ಲಿ ತೊಡಗಿಸಿಕೊಂಡಿರುವ ಮಹಾನ್ ಚೇತನ ವೇದಬ್ರಹ್ಮ ಡಾ. ಬಿ.ಎನ್. ಮಹೇಶ್ ಕುಮಾರ್.

ಪೌರೋಹಿತ್ಯವನ್ನೇ ತಮ್ಮ ವೃತ್ತಿ ಜೀವನವಾಗಿಸಿಕೊಂಡು ವೈದಿಕ ಪರಂಪರೆಯ ಶ್ರೇಷ್ಠತೆಯನ್ನು ಎತ್ತಿಹಿಡಿಯುತ್ತಿರುವ ಇವರು, “ಭಗವಂತನ ಅನುಗ್ರಹ ನಮ್ಮ ಕಾಯಕ ” ಎಂಬ ಪವಿತ್ರ ಧ್ಯೇಯದೊಂದಿಗೆ ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ನಿರಂತರವಾಗಿ ಕಾರ್ಯಾಚರಿಸುತ್ತಿದ್ದಾರೆ.

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್ಎಸ್) ಕಟ್ಟಾ ಸ್ವಯಂಸೇವಕರಾಗಿ ಹಾಗೂ ಸಂಸ್ಕೃತ ಭಾಷಾಭಿಮಾನಿಯಾಗಿ ಸಮಾಜದ ನಾನಾ ರಂಗಗಳಲ್ಲಿ ತಮ್ಮದೇ ಆದ ಅನನ್ಯ ಛಾಪನ್ನು ಮೂಡಿಸಿದ್ದಾರೆ.

​ಚಾರಿತ್ರಿಕ ಅಯೋಧ್ಯೆ ರಾಮ ಜನ್ಮಭೂಮಿ ಹೋರಾಟ ಹಾಗೂ ಭವ್ಯ ಮಂದಿರ ನಿರ್ಮಾಣದ ಕಾಯಕದಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿದ ಕನ್ನಡಿಗರಲ್ಲಿ ಡಾ. ಮಹೇಶ್ ಕುಮಾರ್ ಕೂಡ ಒಬ್ಬರು

ರಾಮಮಂದಿರ ಚಳವಳಿಯ ಸಂದರ್ಭದಲ್ಲಿ ದೇಶಾದ್ಯಂತದಿಂದ ಆಗಮಿಸಿದ್ದ ಲಕ್ಷಾಂತರ ರಾಮಸೇವಕರಿಗೆ ಆಹಾರ ಪೂರೈಕೆಯ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡು ತನ್ಮೂಲಕ ತಮ್ಮ ಸಂಘಟನಾ ಕೌಶಲ ಮೆರೆದಿದ್ದರು.

ಕೇವಲ ಧಾರ್ಮಿಕ ಕಾರ್ಯಗಳಿಗಷ್ಟೇ ಸೀಮಿತವಾಗದೆ, ಕರೋನಾ ಮಹಾಮಾರಿ ಹಾಗೂ ನಾನಾ ಪ್ರಾಕೃತಿಕ ವಿಕೋಪಗಳ ಭೀಕರ ಪರಿಸ್ಥಿತಿಯಲ್ಲಿ ಸಾರ್ವಜನಿಕರ ಸಂಕಷ್ಟಕ್ಕೆ ಮಿಡಿದ ಇವರು, ಸ್ವತಃ ಅಂಗಳಕ್ಕಿಳಿದು ಸಾವಿರಾರು ಕುಟುಂಬಗಳಿಗೆ ನೆರವಾಗಿದ್ದಾರೆ.

​ಭಾರತೀಯ ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಮಾಡಲು ಅವಿಭಜಿತ (ಸಂಯುಕ್ತ) ಕುಟುಂಬ ವ್ಯವಸ್ಥೆಯು ಅತ್ಯಗತ್ಯ ಎಂದು ಪ್ರತಿಪಾದಿಸುವ ಇವರು, ಇಂದಿನ ನಗರೀಕರಣದ ಯುಗದಲ್ಲೂ ಸನಾತನ ಕುಟುಂಬ ಮೌಲ್ಯಗಳು, ಹಿರಿಯರ ಗೌರವ ಹಾಗೂ ಪರಸ್ಪರ ಪ್ರೀತಿಯ ಬಾಂಧವ್ಯಗಳನ್ನು ಉಳಿಸಿ ಬೆಳೆಸುವ ಬಗ್ಗೆ ಸದಾ ಕಾಳಜಿ ವಹಿಸಿ ಜಾಗೃತಿ ಮೂಡಿಸುತ್ತಿದ್ದಾರೆ.

ಇದರೊಂದಿಗೆ ಸ್ವದೇಶಿ ಜಾಗೃತಿ ಅಭಿಯಾನದ ಸಕ್ರಿಯ ಯೋಧರಾಗಿ, ಭಾರತೀಯ ಉತ್ಪನ್ನಗಳ ಬಳಕೆ ಮತ್ತು ರಾಷ್ಟ್ರೀಯ ಸ್ವಾವಲಂಬನೆಯ ಮಹತ್ವವನ್ನು ಜನಮಾನಸಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

​ಅಸಂಘಟಿತ ವಲಯದಲ್ಲಿ ಶ್ರಮಿಸುತ್ತಿರುವ ಪುರೋಹಿತ ಪರವಾಗಿ ಧ್ವನಿಯೆತ್ತಿರುವ ಇವರು, ‘ ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕರ ಫೆಡರೇಶನ್'( ರಿ) ಇದರ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಜೊತೆಗೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ನಿರ್ದೇಶಕರಾಗಿ ಹಾಗೂ ಬೆಂಗಳೂರು ಜಿಲ್ಲಾ ಮುಜರಾಯಿ (ದತ್ತಿ) ಇಲಾಖೆಯ ವಿವಿಧ ಮಟ್ಟಗಳಲ್ಲಿ ನಿಪುಣತೆಯಿಂದ ಸೇವೆ ಸಲ್ಲಿಸಿ, ಧಾರ್ಮಿಕ ಸಂಸ್ಥೆಗಳ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ.

​ಇವರ ನಿರಂತರ ಧಾರ್ಮಿಕ ಚಿಂತನೆ, ನಿಸ್ವಾರ್ಥ ಸಮಾಜ ಸೇವೆ ಹಾಗೂ ವೈದಿಕ ಕ್ಷೇತ್ರದ ಅನನ್ಯ ಕೊಡುಗೆಯನ್ನು ಗುರುತಿಸಿ ಇವರಿಗೆ “ಗೌರವ ಡಾಕ್ಟರೇಟ್”, “ವಿಶ್ವ ಜಾಗೃತ ಪುರೋಹಿತರತ್ನ” ಹಾಗೂ “ಧಾರ್ಮಿಕ ಸೇವಾ ರತ್ನ” ಮುಂತಾದ ಪ್ರಶಸ್ತಿ-ಬಿರಿದುಗಳು ಒಲಿದು ಬಂದಿವೆ.

ಎಷ್ಟೇ ಗೌರವಗಳು ಅರಸಿ ಬಂದರೂ ಅತ್ಯಂತ ವಿನಮ್ರರಾಗಿ ಸೇವೆಯನ್ನೇ ತಮ್ಮ ಜೀವನ ಧರ್ಮವಾಗಿಸಿಕೊಂಡಿರುವ ಡಾ. ಬಿ.ಎನ್. ಮಹೇಶ್ ಕುಮಾರ್ ಅವರ ಜೀವಿತಾವಧಿ ಹಾಗೂ ಕೊಡುಗೆಗಳು ಇಂದಿನ ಯುವ ಪೀಳಿಗೆಗೆ ಪ್ರೇರಣಾದಾಯಕವಾಗಿವೆ.