ನಮ್ಮ ಹಿರಿಯರು ಆಚರಿಸಿಕೊಂಡು ಬಂದಿರುವ ಆಚಾರ-ವಿಚಾರ, ಸಂಪ್ರದಾಯ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಬಿಜೆಪಿ ಉಡುಪಿ ಜಿಲ್ಲಾ ಪ್ರಕೋಷ್ಠದ ವತಿಯಿಂದ ದೀಪಾವಳಿಯ ಶುಭ ಸಂದರ್ಭದಲ್ಲಿ ಉಡುಪಿಯ ರಾಜಾಂಗಣದ ಧಾರ್ಮಿಕ ಪರಿಸರದಲ್ಲಿ ಸಾಂಪ್ರದಾಯಿಕ ಗೂಡು ದೀಪ ಹಾಗೂ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಯಿತು.
ಶಿರೂರು ಮಠದ ಪರ್ಯಾಯ ಶ್ರೀ ಶ್ರೀ ವೇದವರ್ಧನ ಸ್ವಾಮೀಜಿಯವರ ಶುಭಾಶೀರ್ವಾದದೊಂದಿಗೆ, ಲಯನ್ಸ್ ಕ್ಲಬ್ ಪರ್ಕಳ ಹಾಗೂ ಚಿತ್ರಕಲಾ ಸಂಘಟನೆ ಉಡುಪಿ (ರಿ.) ಇವರ ಜಂಟಿ ಆಶ್ರಯದಲ್ಲಿ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮವನ್ನು ಮಾನ್ಯ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿಯವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕೆ. ವಿಜಯ ಕೊಡವೂರು ಅವರು, “ಇದು ನಮ್ಮ ಹತ್ತನೇ ಕಾರ್ಯಕ್ರಮ , ಈ ವೇದಿಕೆಯ ಮೂಲಕ ಚಿತ್ರಕಲಾವಿದರು ಸೇರಿದಂತೆ ವಿವಿಧ ಕಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿರುವ ಕಲಾವಿದರನ್ನು ಗುರುತಿಸಿ ಗೌರವಿಸುವ ಕಾರ್ಯ ನಡೆಯುತ್ತಿದೆ.
ಈ ಬಾರಿ ಬಿಜೆಪಿ ಉಡುಪಿ ಜಿಲ್ಲಾ ಪ್ರಕೋಷ್ಠದ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತೋಷದ ವಿಚಾರ. ಬಿಜೆಪಿ ಪ್ರಕೋಷ್ಠ ಎಂದರೆ ಕೇವಲ ರಾಜಕೀಯ ಚಟುವಟಿಕೆಗಳಿಗೆ ಸೀಮಿತವಾದ ತಂಡವಲ್ಲ. ಸಮಾಜದ ಎಲ್ಲಾ ಆಯಾಮಗಳನ್ನು, ವಿವಿಧ ಕ್ಷೇತ್ರಗಳನ್ನು ಮತ್ತು ವಿವಿಧ ವರ್ಗದ ಜನರನ್ನು ತಲುಪಿ, ಅವರ ಕ್ಷೇತ್ರಗಳಿಗೆ ಸೂಕ್ತ ಗೌರವ ಹಾಗೂ ನ್ಯಾಯ ಒದಗಿಸುವ ಮೂಲಕ ಅವರಲ್ಲಿ ದೇಶಪ್ರೇಮ, ಧರ್ಮಪ್ರಜ್ಞೆ ಮತ್ತು ಸಂಸ್ಕೃತಿಯ ಅಭಿಮಾನವನ್ನು ಬೆಳೆಸುವ ನಿಸ್ವಾರ್ಥ ಸೇವಾ ತಂಡವಾಗಿದೆ.
ಸಮಾಜದ ಪ್ರತಿಯೊಂದು ಕ್ಷೇತ್ರದ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದರೊಂದಿಗೆ, ಮುಂದಿನ ದಿನಗಳಲ್ಲಿ ಅವರು ದೇಶದ ಅಭಿವೃದ್ಧಿ ಮತ್ತು ರಾಷ್ಟ್ರಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ಪ್ರೇರಣೆ ನೀಡುವುದೇ ಪ್ರಕೋಷ್ಠದ ಪ್ರಮುಖ ಉದ್ದೇಶವಾಗಿದೆ” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್ ಪರ್ಕಳದ ಮಾಜಿ ಜಿಲ್ಲಾ ಗವರ್ನರ್ ಸುರೇಶ್, ಉಡುಪಿ ಜಿಲ್ಲಾ ಬಿಜೆಪಿ ಪ್ರಕೋಷ್ಠದ ಸಂಚಾಲಕರಾದ ದಿಲೇಶ್ ಶೆಟ್ಟಿ ಬೈರಂಪಳ್ಳಿ, ರಾಧಾಕೃಷ್ಣ ಮೆಂಡನ್ ಹಾಗೂ ಚಿತ್ರಕಲಾವಿದರ ಸಂಘಟನೆ ಉಡುಪಿಯ ಅಧ್ಯಕ್ಷರಾದ ಶಿವಪ್ರಸಾದ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ನಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಕಲಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಈ ಕಾರ್ಯಕ್ರಮವು ಅರ್ಥಪೂರ್ಣವಾಗಿ ಮೂಡಿಬಂತು.

