ಉಡುಪಿ: ಸಂಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದ ಒಂಟಿ ಮಹಿಳೆಯೊಬ್ಬರಿಗೆ ಸ್ವಂತ ಮನೆಯ ಕನಸು ನನಸಾಗಿಸುವ ಮೂಲಕ ಸಾಮಾಜಿಕ ಕಾರ್ಯಕರ್ತ ವಿಶು ಶೆಟ್ಟಿ ಅಂಬಲಪಾಡಿ ಮಾನವೀಯತೆ ಮೆರೆದಿದ್ದಾರೆ. ಕಳೆದ ಆರು ವರ್ಷಗಳಿಂದ ಸ್ವಂತ ಮನೆಗಾಗಿ ಹೋರಾಡುತ್ತಿದ್ದ ಮಹಿಳೆಗೆ ದೀಪಾವಳಿ ಹಬ್ಬದ ಸಂದರ್ಭದಲ್ಲಿ ರೂ.5 ಲಕ್ಷ ಮೀರದಂತೆ ಮನೆ ನಿರ್ಮಿಸಿಕೊಡುವ ಸಂಕಲ್ಪ ಮಾಡಿದ್ದು, ಅವರ ಬದುಕಿನಲ್ಲಿ ಹೊಸ ಆಶಾಕಿರಣ ಮೂಡಿಸಿದ್ದಾರೆ.
ಸುಮಾರು 35 ವರ್ಷದ ಈ ಮಹಿಳೆ ಮೂಲತಃ ಅಂಬಲಪಾಡಿಯವರಾಗಿದ್ದು, ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿದ್ದಾರೆ. ಅವರು ವಾಸಿಸುತ್ತಿದ್ದ ಗುಡಿಸಲು ಕೂಡ ನೆಲಸಮವಾಗಿತ್ತು. ಇದರಿಂದಾಗಿ ಅಸಹಾಯಕ ಸ್ಥಿತಿಗೆ ತಲುಪಿದ ಮಹಿಳೆ ದೂರದ ಪ್ರದೇಶವೊಂದರಲ್ಲಿ ಸಣ್ಣ ಬಾಡಿಗೆ ಮನೆಯಲ್ಲಿ ಆಶ್ರಯ ಪಡೆದಿದ್ದರು.
ತಿಂಗಳಿಗೆ ಕೇವಲ ರೂ.5,000 ದುಡಿಮೆಯನ್ನು ಹೊಂದಿದ್ದ ಮಹಿಳೆ, ಅದೇ ಆದಾಯದಲ್ಲಿ ದಿನನಿತ್ಯದ ಖರ್ಚು ಹಾಗೂ ಮನೆ ಬಾಡಿಗೆ ಭರಿಸಿ ಜೀವನ ಸಾಗಿಸುತ್ತಿದ್ದರು. ಸ್ವಂತ ಮನೆ ನಿರ್ಮಿಸಿಕೊಳ್ಳುವ ಕನಸಿನೊಂದಿಗೆ ಕಳೆದ ಆರು ವರ್ಷಗಳಿಂದ ಪ್ರಯತ್ನ ನಡೆಸಿದರೂ ಆರ್ಥಿಕ ಸಂಕಷ್ಟದಿಂದಾಗಿ ಸಾಧ್ಯವಾಗದೆ ಕೈಚೆಲ್ಲಿದ್ದರು.
ಸಹೋದರನ ಸ್ಥಾನದಲ್ಲಿ ನಿಂತು ಮನೆ ನಿರ್ಮಾಣದ ಹೊಣೆ ಹೊತ್ತ ವಿಶು ಶೆಟ್ಟಿ ಮಹಿಳೆಯ ಸಂಕಷ್ಟಕ್ಕೆ ಸ್ಪಂದಿಸಿದ ವಿಶು ಶೆಟ್ಟಿ ಅವರು ಮನೆ ನಿರ್ಮಾಣಕ್ಕಾಗಿ ಆರಂಭಿಕವಾಗಿ ರೂ.50,000 ನೆರವು ನೀಡಿದ್ದಾರೆ. ಆದರೆ ತನ್ನಿಂದ ಹಣ ಒಟ್ಟುಗೂಡಿಸಿ ಮನೆ ನಿರ್ಮಿಸಲು ಸಾಧ್ಯವಿಲ್ಲ ಎಂದು ಮಹಿಳೆ ಅಳಲು ತೋಡಿಕೊಂಡಾಗ, ಸಹೋದರನ ಸ್ಥಾನದಲ್ಲಿ ನಿಂತು ಸಂಪೂರ್ಣ ಮನೆ ನಿರ್ಮಾಣದ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡಿದ್ದಾರೆ.
ಮನೆ ನಿರ್ಮಾಣಕ್ಕೆ ಅಗತ್ಯವಿರುವ ಸಾಮಗ್ರಿಗಳನ್ನು ದಾನಿಗಳು ನೀಡುವ ಮೂಲಕ ಸಹಕರಿಸಬೇಕೆಂದು ವಿಶು ಶೆಟ್ಟಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಮನೆ ನಿರ್ಮಾಣಕ್ಕೆ ಜಾಗದ ಮಾಲೀಕರ ಒಪ್ಪಿಗೆ ಮನೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಾಗದ ಮಾಲೀಕರಾಗಿರುವ ಅಂಬಲಪಾಡಿ ನಗರಸಭಾ ಸದಸ್ಯ ಹರೀಶ್ ಶೆಟ್ಟಿ ಅವರು ಒಪ್ಪಿಗೆ ನೀಡಿದ್ದಾರೆ. ಆದಷ್ಟು ಬೇಗ ಮನೆ ನಿರ್ಮಾಣ ಕಾರ್ಯ ಆರಂಭವಾಗಿ ಮಹಿಳೆಯ ಬಹುದಿನಗಳ ಕನಸು ನನಸಾಗಲು ದಾನಿಗಳು ಸಹಕರಿಸಬೇಕೆಂದು ಆಶಿಸಿದ್ದಾರೆ.
ಸಮಾಜದಲ್ಲಿ ಉತ್ತಮ ಅಭಿಪ್ರಾಯ ಹೊಂದಿರುವ ಈ ಮಹಿಳೆ ಅನಿವಾರ್ಯ ಪರಿಸ್ಥಿತಿಯಿಂದಾಗಿ ದೂರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರ ಭವಿಷ್ಯ ಹಾಗೂ ವಿಶೇಷವಾಗಿ ಸುರಕ್ಷತೆಯ ದೃಷ್ಟಿಯಿಂದ ಸ್ವಂತ ಮನೆ ನಿರ್ಮಿಸಿಕೊಡುವುದು ಅತ್ಯಂತ ಅಗತ್ಯವಾಗಿದೆ ಎಂದು ವಿಶು ಶೆಟ್ಟಿ ಅಂಬಲಪಾಡಿ ತಿಳಿಸಿದ್ದಾರೆ.
ದೀಪಾವಳಿಯ ಬೆಳಕಿನೊಂದಿಗೆ ಒಂಟಿ ಮಹಿಳೆಯ ಬದುಕಿಗೂ ಹೊಸ ಭರವಸೆ ಮೂಡಿಸಿರುವ ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

