
ಬಂಟ್ವಾಳ : ಪಣೋಲಿಬೈಲು ಶ್ರೀ ಕಲ್ಲುರ್ಟಿ ದೈವಸ್ಥಾನದ ವರ್ಷಾವಧಿ ಕೋಲ ಹಾಗೂ ನೂತನ ಅನ್ನಛತ್ರ ಕಟ್ಟಡದ ಲೋಕಾರ್ಪಣೆ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ನವೆಂಬರ್ 22ರಿಂದ 25ರವರೆಗೆ ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಕಾರ್ಯಕ್ರಮಗಳಲ್ಲಿ ಧಾರ್ಮಿಕ ವಿಧಿವಿಧಾನಗಳು, ಭಜನಾ ಸಂಕೀರ್ತನೆ, ಯಕ್ಷಗಾನ ಬಯಲಾಟ ಹಾಗೂ ತುಳು ನಾಟಕ ಪ್ರದರ್ಶನಗಳು ನಡೆಯಲಿವೆ.
ನವೆಂಬರ್ 22, ಆದಿತ್ಯವಾರ
ಸಂಜೆ 6 ಗಂಟೆಯಿಂದ ಸಾಮೂಹಿಕ ಪ್ರಾರ್ಥನೆ, ಕಟ್ಟಡ ಪರಿಗ್ರಹ, ಸ್ವಸ್ತಿ ಪುಣ್ಯಾಹ, ರಕ್ಷೋಘ್ನ ಹೋಮ, ವಾಸ್ತು ಪೂಜೆ, ಸುದರ್ಶನ ಹೋಮ, ವಾಸ್ತು ಬಲಿ, ಪ್ರಸನ್ನ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.
ನವೆಂಬರ್ 23, ಸೋಮವಾರ
ಬೆಳಗ್ಗೆ 7 ಗಂಟೆಯಿಂದ ಆದ್ಯ ಗಣಯಾಗ, ಶ್ರೀ ಸತ್ಯನಾರಾಯಣ ವ್ರತ ಕಥಾಪೂಜೆ ಹಾಗೂ ಕೊಪ್ಪರಿಗೆ ಮುಹೂರ್ತ ನೆರವೇರಲಿದೆ. ಬೆಳಗ್ಗೆ 10.30ಕ್ಕೆ ಕುಂಭ ಲಗ್ನದಲ್ಲಿ ನೂತನ ಅನ್ನಛತ್ರ ಕಟ್ಟಡದ ಲೋಕಾರ್ಪಣೆ ನಡೆಯಲಿದೆ. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪಲ್ಲಪೂಜೆ, ಪ್ರಸಾದ ವಿತರಣೆ ಹಾಗೂ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ.
ಸಂಜೆ 6 ಗಂಟೆಗೆ ದೀಪೋಜ್ವಲನ ಹಾಗೂ ಪಣೋಲಿಬೈಲು ಶ್ರೀ ಕೃಷ್ಣ ಭಜನಾ ಮಂದಿರದವರಿಂದ ಕುಣಿತ ಭಜನೆ ನಡೆಯಲಿದೆ. ಸಂಜೆ 6.30ರಿಂದ ಶಿವರಂಜಿನಿ ಕಲಾ ಕೇಂದ್ರ (ರಿ.) ಪೊಳಲಿ ವತಿಯಿಂದ ಸ್ವರ ತರಂಗ ಕಾರ್ಯಕ್ರಮ ಹಾಗೂ ಕುಮಾರಿ ಲಿಖಿತ ಪಣೋಲಿಬೈಲು ಮತ್ತು ಬಳಗದವರಿಂದ ವಯೋಲಿನ್ ವಾದನ ನಡೆಯಲಿದೆ.
ರಾತ್ರಿ 8 ಗಂಟೆಯಿಂದ ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾಕುಂಭ ಕಲಾವಿದೆರ್ ಕುಳಾಯಿ ಕುಡ್ಲ ತಂಡದಿಂದ ತುಳು ರಂಗಭೂಮಿಯಲ್ಲಿ ಪ್ರಥಮ ಬಾರಿಗೆ ಡಿಜಿಟಲ್ ಲೈಟ್ಸ್ ಅನಾವರಣದೊಂದಿಗೆ ‘ಅಣಿ ಅರದಲ ತಿರಿ ನೇಮದಾಂತಿ’ ಎಂಬ ನಾಟಕ ಪ್ರದರ್ಶನಗೊಳ್ಳಲಿದೆ. ಪರಮಾತ್ಮೆ ಪಂಜುರ್ಲಿ ಕಥಾವಸ್ತುವಿನ ಈ ನಾಟಕ ಕಲಾಭಿಮಾನಿಗಳಿಗೆ ವಿಶೇಷ ಆಕರ್ಷಣೆಯಾಗಲಿದೆ. ರಾತ್ರಿ 8.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.
ನವೆಂಬರ್ 24, ಮಂಗಳವಾರ
ಸಂಜೆ 7.30ರಿಂದ 8 ಗಂಟೆಯವರೆಗೆ ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ನಡೆಯಲಿದ್ದು, ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ರಾತ್ರಿ 8 ಗಂಟೆಯಿಂದ ‘ಯಕ್ಷಧ್ರುವ’ ಶ್ರೀ ಪಟ್ಲ ಸತೀಶ್ ಶೆಟ್ಟಿ ಅವರ ಸಾರಥ್ಯದಲ್ಲಿ ‘ದೇವಿ ಲಲಿತೋಪಾಖ್ಯಾನ’ ಎಂಬ ಪುಣ್ಯಕಥಾಭಾಗವನ್ನು ಯಕ್ಷಗಾನ ಬಯಲಾಟದ ರೂಪದಲ್ಲಿ ಪ್ರದರ್ಶಿಸಲಾಗುವುದು.
ನವೆಂಬರ್ 25, ಬುಧವಾರ
ಬೆಳಗ್ಗೆ 8 ಗಂಟೆಯಿಂದ ನವಕ ಕಲಶ ಪ್ರಧಾನ ಹಾಗೂ 12 ತೆಂಗಿನಕಾಯಿ ಗಣಹೋಮ ನಡೆಯಲಿದ್ದು, ಬೆಳಗ್ಗೆ 10 ಗಂಟೆಯಿಂದ ನಾಗತಂಬಿಲ ನೆರವೇರಲಿದೆ. ಮಧ್ಯಾಹ್ನ 12.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ಜರುಗಲಿದೆ.
ಬಳಿಕ ಭಜನಾ ಸಂಕೀರ್ತನೆ ನಡೆಯಲಿದ್ದು, ಮಧ್ಯಾಹ್ನ 2ರಿಂದ 3.30ರವರೆಗೆ ಶ್ರೀ ಅಯ್ಯಪ್ಪ ಬಯಲಾಟ ಸೇವಾ ಸಮಿತಿ, ಪಣೋಲಿಬೈಲು ಇವರಿಂದ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 3.30ರಿಂದ 5ರವರೆಗೆ ಬಂಟ್ವಾಳದ ಯಕ್ಷ ಕಾವ್ಯತರಂಗಿಣಿ ತಂಡದಿಂದ ಯಕ್ಷಗಾನ ಸಂಬಂಧಿತ ಕಾರ್ಯಕ್ರಮ ನಡೆಯಲಿದೆ.
ಸಂಜೆ 5ರಿಂದ 6.30ರವರೆಗೆ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಭಜನಾ ಮಂಡಳಿ, ನಂದಾವರ ಇವರಿಂದ ಭಜನಾ ಸಂಕೀರ್ತನೆ ನಡೆಯಲಿದೆ. ಸಂಜೆ 5ರಿಂದ 5.45ರವರೆಗೆ ಪಣೋಲಿಬೈಲು ಶ್ರೀ ಕೃಷ್ಣ ಮಂದಿರದಲ್ಲಿ ಭಜನಾ ಸಂಕೀರ್ತನೆ ನಡೆಸಿ, ಬಳಿಕ ಅಲ್ಲಿಂದ ಶ್ರೀ ಕ್ಷೇತ್ರಕ್ಕೆ ಮೆರವಣಿಗೆ ಮೂಲಕ ತೆರಳಲಾಗುತ್ತದೆ.
ಸಂಜೆ 6 ಗಂಟೆಯಿಂದ ಶ್ರೀ ಗೆಜ್ಜೆಗಿರಿ ಮೇಳ, ಬಡಗನ್ನೂರು, ಪುತ್ತೂರು ಇವರಿಂದ ‘ಗಜೇಂದ್ರ ಮೋಕ್ಷ – ರಕ್ತರಾತ್ರಿ’ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ. ಸಂಜೆ 7.30ಕ್ಕೆ ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ.
ರಾತ್ರಿ 10 ಗಂಟೆಯಿಂದ ಲಕುಮಿ ತಂಡದ ಕುಸಾಲ್ದ ಕಲಾವಿದೆರ್ ಅಭಿನಯದ ‘ಚಂದ್ರಾವತಿ’ ಎಂಬ ತುಳು ನಾಟಕ ಪ್ರದರ್ಶನಗೊಳ್ಳಲಿದೆ. ರಾತ್ರಿ 10.30ಕ್ಕೆ ಭಂಡಾರದ ಮನೆಯಿಂದ ದೈವಗಳ ಭಂಡಾರವನ್ನು ತರುವ ಧಾರ್ಮಿಕ ವಿಧಿವಿಧಾನ ನಡೆಯಲಿದ್ದು, ರಾತ್ರಿ 11 ಗಂಟೆಗೆ ವರ್ಷಾವಧಿ ಕೋಲ ಜರುಗಲಿದೆ.
ನಾಲ್ಕು ದಿನಗಳ ಕಾಲ ನಡೆಯಲಿರುವ ಈ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೈವದ ಗಂಧಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾಗುವಂತೆ ದೈವಸ್ಥಾನದ ವತಿಯಿಂದ ವಿನಂತಿಸಲಾಗಿದೆ.
