
ಯಕ್ಷಗಾನ ಕಲಾರಂಗ ಐ.ವೈ.ಸಿ. ಕಟ್ಟಡದ ಎರಡನೆ ಮಹಡಿಯಲ್ಲಿ ಶ್ರೀಮತಿ ಪ್ರಭಾ ವಿ. ಶೆಣೈ ಮತ್ತು ಶ್ರೀ ಯು. ವಿಶ್ವನಾಥ್ ಶೆಣೈ ದಂಪತಿ ನೆರವಿನಿಂದ ನವೀಕರಣಗೊಂಡ ಪ್ರತಿಧ್ವನಿಮುಕ್ತ, ಹವಾನಿಯಂತ್ರಿತ ‘ವಿಶ್ವಪ್ರಭಾ ಸಭಾಂಗಣ’ ಇಂದು (13-11-26) ಲೋಕಾರ್ಪಣೆಗೊಂಡಿತು. ಜ್ಯೋತಿ ಬೆಳಗಿಸಿ ಉದ್ಘಾಟಿಸಿದ ಶೆಣೈ ದಂಪತಿಗಳು ದಾನ ಮಾಡುವಲ್ಲಿ ನಾವು ಸಂತೋಷವನ್ನು ಕಂಡಿದ್ದೇವೆ. ಕಷ್ಟದಿಂದ ಆರ್ಜಿಸಿದ ಎಲ್ಲಾ ಸಂಪತ್ತು ಸಮಾಜಕ್ಕೆ ಸಮರ್ಪಿತವಾಗಬೇಕೆಂಬುದು ನಮ್ಮ ಆಶಯ.
ನಾವು ಯಕ್ಷಗಾನ ಕಲಾರಂಗಕ್ಕೆ ನೀಡಿದ ಹಣ ಸಮಾಜಕ್ಕೆ ಸಲ್ಲುತ್ತದೆ ಎಂಬುದು ನಮ್ಮ ಅನುಭವದ ಸತ್ಯ. ಇರುವವರೆಗೆ ಸಂಪತ್ತನ್ನು ಸತ್ಪಾತ್ರರಿಗೆ ನೀಡಿ ನಿಧನಾನಂತರ ಈ ದೇಹವನ್ನು ದಾನ ಮಾಡಲು ನಿರ್ಣಯಿಸಿದ್ದೇವೆ ಎಂದರು. ಅಧ್ಯಕ್ಷತೆ ವಹಿಸಿದ್ದ ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ. ಎಚ್. ಎಸ್. ಬಲ್ಲಾಳರು ಮಾತನಾಡಿ ವಿಶ್ವನಾಥ್ ಶೆಣೈ- ಪ್ರಭಾ ವಿ. ಶೆಣೈ ನಿಜಾರ್ಥದ ಆದರ್ಶ ದಂಪತಿಗಳು.
ದಾನ ಮಾಡುವಲ್ಲಿ ಅವರಿಗಿರುವ ಸಂತೋಷ ಅವರ ಕೃತಿಯಲ್ಲೂ,ಇಂದು ಅವರಾಡಿದ ಮಾತುಗಳಲ್ಲಿಯೂ ವೇದ್ಯವಾಗಿದೆ. ಕಲಾರಂಗ ಒಳ್ಳೆಯ ಕೆಲಸವನ್ನು ಮಾಡುತ್ತಿದೆ.ಈ ಸಂಸ್ಥೆಗೆ ಮಾಹೆಯ ಸಹಕಾರ ನಿರಂತರ ಮುಂದುವರಿಯುತ್ತದೆ ಎಂದರು. ನಾಡೋಜ ಡಾ.ಕೆ. ಪಿ. ರಾವ್ ದಾನದ ಮಹತ್ವವನ್ನು ತಿಳಿಸಿ ಶೆಣೈ ದಂಪತಿಗಳನ್ನು ಅಭಿನಂದಿಸಿದರು. ವೇದಿಕೆಯಲ್ಲಿ ಉಪಾಧ್ಯಕ್ಷ ವಿ.ಜಿ.ಶೆಟ್ಟಿ, ಕೋಶಾಧಿಕಾರಿ ಪ್ರೊ.ಕೆ.ಸದಾಶಿವ ರಾವ್ ಉಪಸ್ಥಿತರಿದ್ದರು.
ಉಡುಪಿಯ ಬೇರೆ ಬೇರೆ ಸಂಘಟನೆಗಳ ಮುಖ್ಯಸ್ಥರು, ಗಣ್ಯರು ಮತ್ತು ಸಂಸ್ಥೆಯ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ಸಂಸ್ಥೆಯ ವತಿಯಿಂದ ವಿಶ್ವನಾಥ್ ಶೆಣೈ ದಂಪತಿಗಳನ್ನು ಅಭಿನಂದಿಸಲಾಯಿತು. ಅಧ್ಯಕ್ಷ ಎಂ.ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಪ್ರಾಸ್ತಾವಿಕ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದ ಕಾರ್ಯದರ್ಶಿ ಮುರಲಿ ಕಡೆಕಾರ್, ಶೆಣೈ ಅವರ ಈ ಕೊಡುಗೆಯ ಪ್ರಯೋಜನ ಉಡುಪಿಯ ಎಲ್ಲಾ ಸಾಂಸ್ಕೃತಿಕ ಸಂಘಟನೆ ಮತ್ತು ಶ್ರೋತೃಗಳಿಗೆ; ಕಲಾರಂಗದ ಕಾರ್ಯಕರ್ತರಿಗೆ ಅದರ ನಿರ್ವಹಣೆಯ ಜವಾಬ್ದಾರಿ ಮಾತ್ರ. ಎಲ್ಲರೂ ನೆಮ್ಮದಿಯಿಂದ ಕಾರ್ಯಕ್ರಮ ನಡೆಸಿಕೊಂಡು ಹೋಗಬೇಕೆಂಬುದೇ ನಮ್ಮ ಆಶಯ ಎಂದರು. ಆರಂಭದಲ್ಲಿ ರವಿರಾಜ್ ಎಚ್. ಪಿ. ನಿರ್ದೇಶಿಸಿದ, ವಿಶ್ವನಾಥ್ ಶೆಣೈ ಅವರ ಕುರಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು.

