ಮಕ್ಕಳ ದಿನಾಚರಣೆ ಸಂಭ್ರಮ – ಸೇಕ್ರೆಡ್ ಹಾರ್ಟ್ ಹಿ.ಪ್ರಾ. ಶಾಲೆ, ಅಮ್ಮುಂಜೆ

0
22

ಅಮ್ಮುಂಜೆ : ಸೇಕ್ರೆಡ್ ಹಾರ್ಟ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನವೆಂಬರ್ 14ರಂದು ಮಕ್ಕಳ ದಿನಾಚರಣೆಯನ್ನು ಸಂಭ್ರಮ ಹಾಗೂ ಸಡಗರದಿಂದ ಆಚರಿಸಲಾಯಿತು.

ಕಾರ್ಯಕ್ರಮವನ್ನು ಶಾಲಾ ಶಿಕ್ಷಕರ ಪ್ರಾರ್ಥನೆಯೊಂದಿಗೆ ಆರಂಭಿಸಲಾಯಿತು. ಮುಖ್ಯ ಶಿಕ್ಷಕಿ ಉಷಾ ಟೀಚರ್ ಗಣ್ಯರನ್ನು ಸ್ವಾಗತಿಸಿದರು. ಬಳಿಕ ಗಣ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ರೋಟರಿಯನ್ ವಿಜಯ್ ಮಾಯಾಡಿ, ತುಳುನಾಡ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸತೀಶ್ ಪೂಜಾರಿ, ಅಂಗನವಾಡಿ ಕಾರ್ಯಕರ್ತೆ ಸುಜಾತಾ ಟೀಚರ್ ಹಾಗೂ ಅಂಗನವಾಡಿ ಸಹಾಯಕಿ ಆಶಾ ಉಪಸ್ಥಿತರಿದ್ದರು.

ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಮಕ್ಕಳ ದಿನಾಚರಣೆಯ ಮಹತ್ವವನ್ನು ತಿಳಿಸಿದರು. ರೋಟರಿಯನ್ ವಿಜಯ್ ಮಾಯಾಡಿ ಹಾಗೂ ಸುಜಾತಾ ಟೀಚರ್ ಅವರು ಮಕ್ಕಳಿಗೆ ಹಿತನುಡಿಗಳನ್ನಾಡಿ ಶುಭ ಹಾರೈಸಿದರು.

ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಫ್ರ್ಯಾಂಕಿ ಡಿಸೋಜ, ವಿಜಯ್ ಮಾಯಾಡಿ, ಸುಜಾತಾ ಟೀಚರ್, ಆಶಾ ಹಾಗೂ ಎಸ್.ಡಿ.ಎಂ.ಸಿ ಸದಸ್ಯೆ ರಾಜೀವಿ ಅವರು ಬಹುಮಾನ ವಿತರಿಸಿದರು. ಇದೇ ಸಂದರ್ಭದಲ್ಲಿ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ಅವರು ಶಾಲೆಯ ಎಲ್ಲ ಮಕ್ಕಳಿಗೂ ಕಲಿಕಾ ಸಾಮಗ್ರಿಗಳನ್ನು ವಿತರಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಫ್ರ್ಯಾಂಕಿ ಡಿಸೋಜ ಕೊಳಲಗಿರಿ, ಭಾರತದ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಮಕ್ಕಳನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯಾಗಿ ಆಚರಿಸಲಾಗುತ್ತದೆ. ಮಕ್ಕಳು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಬೇಕು. ತಂದೆ-ತಾಯಿ, ಗುರು-ಹಿರಿಯರ ಮಾತುಗಳನ್ನು ಪಾಲಿಸಿ ಉತ್ತಮ ಶಿಕ್ಷಣ ಪಡೆದು ಉಜ್ವಲ ಭವಿಷ್ಯವನ್ನು ನಿರ್ಮಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮಕ್ಕೆ ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಹರೀಶ್ ಅಮ್ಮುಂಜೆ (ಸ್ಟುಡಿಯೋ, ಉಪ್ಪೂರು), ವಿಲ್ಸನ್ ಅಮ್ಮುಂಜೆ ಹಾಗೂ ಚರ್ಚ್ ಆಡಳಿತ ಮಂಡಳಿಯ ಉಪಾಧ್ಯಕ್ಷ ಡಾನ್ ಸಹಕರಿಸಿದರು. ಆಶಾ (ಅಮ್ಮುಂಜೆ), ಹಳೆಯ ವಿದ್ಯಾರ್ಥಿಗಳಾದ ಸಾವಿತ್ರಿ, ಅಂಗಾರ, ಸತೀಶ್ ಪೂಜಾರಿ ಹಾಗೂ ವಿಜಯ್ ಮಾಯಾಡಿ ಅವರು ಸಿಹಿತಿಂಡಿ ವಿತರಣೆಗೆ ಸಹಕಾರ ನೀಡಿದರು.

ಮಮತಾ ಟೀಚರ್ ಕಾರ್ಯಕ್ರಮ ನಿರೂಪಿಸಿದರು. ಸುಜಾತಾ ಟೀಚರ್ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರು. ಸಂಗೀತ ಟೀಚರ್ ವಂದನಾರ್ಪಣೆ ಸಲ್ಲಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.