ಸಮಾರೋಪ ಕಾರ್ಯಕ್ರಮ

0
5

ಪಕ್ಷಕ್ಕೆ ಕಾನೂನು ಮಾರ್ಗದರ್ಶನ ನೀಡುವಲ್ಲಿ ಕಾನೂನು ಪ್ರಕೋಷ್ಠ ಪ್ರಮುಖ ಪಾತ್ರ: ಕೃಷ್ಣ ಜೆ. ಪಾಲೆಮಾರ್

ಕಾನೂನು ಪ್ರಕೋಷ್ಠವು ಪಕ್ಷಕ್ಕೆ ಹಾಗೂ ಸಮಾಜಕ್ಕೆ ಕಾನೂನುಬದ್ಧವಾಗಿ ಮಾರ್ಗದರ್ಶನ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಹೇಳಿದರು.

ಬಿಜೆಪಿ ದ.ಕ. ಜಿಲ್ಲಾ ಕಾನೂನು ಪ್ರಕೋಷ್ಠದ ವತಿಯಿಂದ ಕೊಡಿಯಾಲಬೈಲಿನ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಳ್ಳಲಾದ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ 2026ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ವಕೀಲರನ್ನು ಒಳಗೊಂಡ ಕಾನೂನು ಪ್ರಕೋಷ್ಠದ ಜನರಿಗೆ ಅಪಾರ ನಂಬಿಕೆ ಮತ್ತು ಗೌರವವಿದೆ. ಬೇರೆ ಯಾರಿಗೂ ಹೇಳಲಾಗದಂತಹ ವಿಷಯ ಮತ್ತು ದೂರುಗಳನ್ನು ಕಾನೂನು ಪ್ರಕೋಷ್ಠದ ವಕೀಲ ಸದಸ್ಯರ ಬಳಿ ಜನರು ಬಂದು ಮುಕ್ತವಾಗಿ ಹೇಳುವಂತಾಗುತ್ತದೆ. ಹಾಗಾಗಿ ಇದು ಸಮಾಜಕ್ಕೂ ಪ್ರಯೋಜನ ಸಿಗುವಂತಾಗುತ್ತದೆ. ಇಂದು ಕಾನೂನು ಪ್ರಕೋಷ್ಠ ಸಂಘಟನಾತ್ಮಕವಾಗಿ ಬಲಿಷ್ಟವಾಗಿದೆ ಎಂದರು.

ಶಾಸಕ ವೇದವ್ಯಾಸ್ ಕಾಮತ್, ಅಭ್ಯಾಸ ವರ್ಗದಿಂದ ಪಡೆದ ಜ್ಞಾನವನ್ನು ಸಂಘಟನೆಗಾಗಿ ಹಾಗೂ ಜನರ ಸೇವೆಗಾಗಿ ಬಳಸಿಕೊಳ್ಳಬೇಕು ಎಂದರು.
ವಿಧಾನ ಪರಿಷತ್ತಿನ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಶಿಸ್ತು, ಸಮಯಪ್ರಜ್ಞೆ ಮತ್ತು ಕಾನೂನಿನ ಅರಿವು ಕಾರ್ಯಕರ್ತರಿಗೆ ಅತ್ಯಂತ ಅವಶ್ಯಕ ಎಂದರು.
ರಾಜ್ಯ ಕಾನೂನು ಪ್ರಕೋಷ್ಠದ ಸಂಚಾಲಕ ವಸಂತ್ ಕುಮಾರ್ ಮಾತನಾಡಿ, ರಾಜ್ಯಾದ್ಯಂತ ಕಾನೂನು ಪ್ರಕೋಷ್ಠವನ್ನು ಬಲಪಡಿಸುವ ನಿಟ್ಟಿನಲ್ಲಿ ಕೈಗೊಳ್ಳಲಾಗುತ್ತಿರುವ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.

ಹೈಕೋರ್ಟ್ ವಕೀಲ ಹಾಗೂ ಮಂಗಳೂರು ಎಸ್ಐಆರ್ ನ ವಿಭಾಗ ಪ್ರಭಾರಿ ಅಯ್ಯಪ್ಪಉಪಸ್ಥಿತರಿದ್ದರು. ಪ್ರಕೋಷ್ಠದ ಜಿಲ್ಲಾ ಸಂಚಾಲಕ ಶ್ರೀಧರ್ ಶೆಟ್ಟಿ ಪುಳಿಂಚ ಗೌರವಿಸಿದರು.

ಜಿಲ್ಲಾ ಕಾನೂನು ಪ್ರಕೋಷ್ಠದ ಸಹಸಂಚಾಲಕ ಪ್ರಮೋದ್ ಪೂಜಾರಿ ಕೆರ್ವಾಸೆ ಸ್ವಾಗತಿಸಿ, ಜಿಲ್ಲಾ ಸಮಿತಿ ಸದಸ್ಯ ಪುರುಷೋತ್ತಮ್ ಭಟ್ ವಂದಿಸಿದರು. ಬಂಟ್ವಾಳ ಮಂಡಲ ಸಂಚಾಲಕ ವೀರೇಂದ್ರ ಎಂ.ಸಿದ್ದಕಟ್ಟೆ ನಿರೂಪಿಸಿದರು.

ಪ್ರಶಿಕ್ಷಣ ವರ್ಗದಲ್ಲಿ ಜಿಲ್ಲೆಯ ವಿವಿಧ ಮಂಡಲಗಳಿಂದ ವಕೀಲರು ಹಾಗೂ ಕಾನೂನು ಪ್ರಕೋಷ್ಠದ ಪದಾಧಿಕಾರಿಗಳು ಭಾಗವಹಿಸಿದ್ದರು.