ಉಡುಪಿ : ಸಿಬಿಐ ಹಾಗೂ ದೆಹಲಿ ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡು ವ್ಯಕ್ತಿಯೊಬ್ಬರನ್ನು ಬಂಧಿಸುವುದಾಗಿ ಬೆದರಿಸಿ ಬರೋಬ್ಬರಿ 15,98,976.40 ರೂ. ವಂಚಿಸಿರುವ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ. ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ನಡೆದಿರುವ ಈ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯ ಶೇಷಾಚಲ ಎಂಬವರಿಗೆ 2026ರ ಅಕ್ಟೋಬರ್ 18ರಂದು ಬೆಳಿಗ್ಗೆ ಸುಮಾರು 11.25ಕ್ಕೆ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದಾನೆ. ಹಿಂದಿ ಭಾಷೆಯಲ್ಲಿ ಮಾತನಾಡಿದ ಆತ, ದೆಹಲಿಯಲ್ಲಿ ನಿಮ್ಮ ಹೆಸರಿನ ಐಸಿಐಸಿಐ ಬ್ಯಾಂಕ್ ಪಾಸ್ಬುಕ್ ಪತ್ತೆಯಾಗಿದ್ದು, ಪಂಕಜ್ ಶರ್ಮಾ ಎಂಬಾತನ ವಿರುದ್ಧ ದಾಖಲಾಗಿರುವ ಮನಿ ಲಾಂಡರಿಂಗ್, ಮಾದಕ ವಸ್ತುಗಳ ಸಾಗಾಟ ಹಾಗೂ ಮಕ್ಕಳ ಅಪಹರಣ ಪ್ರಕರಣದಲ್ಲಿ ನಿಮ್ಮ ಹೆಸರೂ ಇದೆ ಎಂದು ತಿಳಿಸಿದ್ದಾನೆ. ಅಲ್ಲದೆ, ನಿಮ್ಮನ್ನು ಬಂಧಿಸಲು ನ್ಯಾಯಾಲಯದಿಂದ ಆದೇಶ ಬಂದಿದೆ ಎಂದು ಬೆದರಿಸಿದ್ದಾನೆ.
ತಕ್ಷಣ ದೆಹಲಿಗೆ ಬರಬೇಕು ಅಥವಾ ವಿಡಿಯೋ ಕಾಲ್ ಮೂಲಕ ತನಿಖೆಗೆ ಸಹಕರಿಸಬೇಕು ಎಂದು ಸೂಚಿಸಿದ್ದಾನೆ. ಹಿಂದಿ ಭಾಷೆ ಅರ್ಥವಾಗದ ಕಾರಣ ಶೇಷಾಚಲ ಅವರು ತಮ್ಮ ಪತ್ನಿಯ ಮೊಬೈಲ್ ಸಂಖ್ಯೆಯನ್ನು ನೀಡಿದ್ದು, ಬಳಿಕ ಆಕೆಗೆ ವಿಡಿಯೋ ಕರೆ ಬಂದಿದೆ. ಈ ವೇಳೆ ಪೊಲೀಸ್ ಸಮವಸ್ತ್ರ ಧರಿಸಿದ್ದ ವ್ಯಕ್ತಿಯೊಬ್ಬ ತಾನು ದೆಹಲಿ ಪೊಲೀಸ್ ಇಲಾಖೆಯ ತನಿಖಾಧಿಕಾರಿ ಎಂದು ಪರಿಚಯಿಸಿಕೊಂಡಿದ್ದಾನೆ. ಮತ್ತೊಂದು ಮೊಬೈಲ್ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ನಕಲಿ ದಾಖಲೆಗಳನ್ನು ತೋರಿಸಿ ಶೇಷಾಚಲ ಅವರ ಹೆಸರಿನಲ್ಲಿ ಪ್ರಕರಣ ದಾಖಲಾಗಿದೆ ಎಂದು ನಂಬಿಸಿದ್ದಾನೆ.
ಬಳಿಕ ತನಿಖೆಯ ನೆಪದಲ್ಲಿ ಶೇಷಾಚಲ ಅವರ ಹಣ, ಚಿನ್ನಾಭರಣ ಹಾಗೂ ಬ್ಯಾಂಕ್ ಖಾತೆಗಳ ವಿವರಗಳನ್ನು ಪಡೆದುಕೊಂಡ ಆರೋಪಿತರು, ಆರ್ಬಿಐ ತನಿಖೆಯ ಭಾಗವಾಗಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸುವಂತೆ ಸೂಚಿಸಿದ್ದಾರೆ. ಇದನ್ನು ನಂಬಿದ ಶೇಷಾಚಲ ಅವರು ಅಕ್ಟೋಬರ್ 31ರಂದು ತಮ್ಮ ಬ್ಯಾಂಕ್ ಖಾತೆಯಿಂದ 11 ಲಕ್ಷ ರೂ.ಗಳನ್ನು ಆರೋಪಿತರು ನೀಡಿದ ಯೆಸ್ ಬ್ಯಾಂಕ್ ಖಾತೆಗೆ ಆರ್ಟಿಜಿಎಸ್ ಮೂಲಕ ವರ್ಗಾಯಿಸಿದ್ದಾರೆ.
ಇದಾದ ಬಳಿಕ ನವೆಂಬರ್ 5ರಂದು ಮತ್ತೊಂದು ಬ್ಯಾಂಕ್ ಆಫ್ ಇಂಡಿಯಾ ಖಾತೆಗೆ 4,98,976 ರೂ.ಗಳನ್ನು ಆರ್ಟಿಜಿಎಸ್ ಮೂಲಕ ಜಮಾ ಮಾಡಿದ್ದಾರೆ. ಹೀಗೆ ಬಂಧನದ ಭಯ ಹುಟ್ಟಿಸಿ ಪೊಲೀಸ್ ಅಧಿಕಾರಿಗಳೆಂದು ನಂಬಿಸಿ ಒಟ್ಟು 15,98,976.40 ರೂ.ಗಳನ್ನು ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ಶೇಷಾಚಲ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 37/2026ರಂತೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಕಲಂ 66(d) ಹಾಗೂ ಭಾರತೀಯ ನ್ಯಾಯ ಸಂಹಿತೆಯ ಕಲಂ 318(4), 319(2), 308(2)ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಸಾರ್ವಜನಿಕರು ಎಚ್ಚರಿಕೆ: ಪೊಲೀಸ್, ಸಿಬಿಐ, ಇಡಿ ಅಥವಾ ಇತರ ತನಿಖಾ ಸಂಸ್ಥೆಗಳ ಹೆಸರಿನಲ್ಲಿ ವಿಡಿಯೋ ಕರೆ ಮಾಡಿ ಬಂಧನದ ಬೆದರಿಕೆ ಹಾಕಿ ಹಣ ವರ್ಗಾಯಿಸುವಂತೆ ಕೇಳಿದರೆ ಎಚ್ಚರಿಕೆ ವಹಿಸಬೇಕು. ಯಾವುದೇ ತನಿಖೆಯ ಹೆಸರಿನಲ್ಲಿ ಅಪರಿಚಿತರು ಸೂಚಿಸಿದ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾಯಿಸಬಾರದು.

