ಮನುಷ್ಯ ಸಂಬಂಧ ಹೆಚ್ಚಿಸುವ ಶಿಕ್ಷಣದ ಅಗತ್ಯವಿದೆ- ಡಾ ನಾ. ಮೊಗಸಾಲೆ

0
7

ಮೂಡುಬಿದಿರೆ ಕೋ ಆಪರೇಟಿವ್ ಸರ್ವಿಸ್ ಸೊಸೈಟಿಯ ಸಹಕಾರ ಸಪ್ತಾಹ ಸಂಭ್ರಮ 2026 ಸಪ್ತ ಸಂಧ್ಯಾ ಸಹಕಾರಿ ಚಿಂತನದ ನಾಲ್ಕನೇ ದಿನದ ಸಾಹಿತ್ಯ ಮತ್ತು ಸಹಕಾರದ ಅಧ್ಯಕ್ಷ ಪೀಠದಿಂದ ಕಾಂತಾವರ ಕನ್ನಡ ಸಂಘದ ಕಾರ್ಯಾಧ್ಯಕ್ಷ ಡಾ ನಾ ಮೊಗಸಾಲೆ ಮಾತನಾಡಿ ಎಂಸಿಎಸ್ ಸೊಸೈಟಿಯು ಮನೆಯ ಪ್ರೀತಿ, ಸಹಕಾರ, ವಿಶ್ವಾಸದ ನಗುಮುಖದ ಸ್ವಾಗತವನ್ನು ನೀಡಿ ಜನರ ನಡುವೆ ಸಂಬಂಧವನ್ನು ಬೆಸೆದುಕೊಂಡಿದೆ. ಸಾಂಸ್ಕೃತಿಕ ಸೊಸೈಟಿಯಾಗಿಯೂ ಬೆಳೆದಿದೆ. ಸಂಸ್ಕೃತಿಕ ಎಚ್ಚರದಿಂದ ಎಲ್ಲ ವಿಭಾಗಗಳನ್ನು ಸೇವಿಸಿಕೊಂಡು ಸಾಮಾನ್ಯ ಜನರಿಗೆ ಬದುಕಿಗೆ ಬೇಕಾದ ಮಾರ್ಗದರ್ಶನವನ್ನು ಒದಗಿಸುತ್ತಿದೆ. ಜೀವನ ಪ್ರೀತಿಯ ಸನ್ಮಾನ, ನೈತಿಕತೆಗಳನ್ನು ಬೆಳೆಸಿ ಮುಂದುವರಿಯುತ್ತಿರುವುದು ಅತ್ಯಪೂರ್ವ ಸಂಗತಿಯಾಗಿದೆ ಎಂದು ಮೆಚ್ಚಿಕೊಂಡರು. ಇಂದಿನ ಕಾಲದಲ್ಲಿ ಮನುಷ್ಯ ಸಂಬಂಧ ಹೆಚ್ಚಿಸುವ ಶಿಕ್ಷಣದ ಅಗತ್ಯವನ್ನು ಅವರು ಒತ್ತಿ ಹೇಳಿದರು.

ನಾ ನಿನಗಿದ್ದರೆ ನೀ ನನಗೆ ಎಂಬ ಸಹಕಾರ ತತ್ವದ ಮೂಲ ಆಶಯವನ್ನು ಎಳೆ ಎಳೆಯಾಗಿ ಉಪನ್ಯಾಸ ಟಿ ಎ ಎನ್ ಖಂಡಿಗೆ ತೆರೆದಿಟ್ಟರು. ನಿಜವಾಗಿರುವುದೇ ಸತ್ಯ. ಋತಸತ್ಯ ಅರ್ಥ ಮಾಡಿಕೊಂಡು ಬದುಕುವುದೇ ಧರ್ಮ ಎಂಬ ವಿಚಾರವನ್ನು ತಿಳಿಸಿದರು. ಕನ್ನಡ ಸಾಹಿತ್ಯ ಪರಿಷತ್ ಮೂಡುಬಿದಿರೆ ಘಟಕ ಅಧ್ಯಕ್ಷ ವೇಣುಗೋಪಾಲ ಶೆಟ್ಟಿ, ಹಲ್ಮಿಡಿ ಶಾಸನದಲ್ಲಿ, ಕೆರೆಗೆ ಹಾರ ಇತ್ಯಾದಿಗಳಲ್ಲಿ ಕಂಡುಬರುವ ಸಹಕಾರ ತತ್ವದ ಜೀವನ ವಿಧಾನಗಳನ್ನು ತಿಳಿಸಿದರು. ಸಹಕಾರದಿಂದ ಬದುಕು ಸುಗಮಗೊಳ್ಳಲು ಸಾಧ್ಯವಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ವಿರುಪಾಕ್ಷಪ್ಪ ತಿಳಿಸಿದರು.

ಇದೇ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಯನ್ನು ಗೈದ ವಸಂತ ಕೋಟ್ಯಾನ್ ಹಾಗೂ ಪುಷ್ಪರಾಜ ಹೆಗ್ಡೆ ಅವರನ್ನು ಸನ್ಮಾನಿಸಲಾಯಿತು. ಮೂಡುಬಿದರೆ ಸಹಕಾರಿ ತರಬೇತಿ ಸಂಸ್ಥೆಯಲ್ಲಿ ರ್ಯಾಂಕ್ ವಿಜೇತ ಆರು ಮಂದಿ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ವೇದಿಕೆಯಲ್ಲಿ ಜಗದೀಶ್ ಅಧಿಕಾರಿ, ನಿರ್ದೇಶಕ, ಮಾಜಿ ಸಚಿವ ಅಭಯಚಂದ್ರ ಜೈನ್ ಹಾಜರಿದ್ದರು. ವಿಶೇಷ ಕಾರ್ಯನಿರ್ವಹಣಾ ಅಧಿಕಾರಿ ಚಂದ್ರಶೇಖರ್ ಎಂ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳಲ್ಲಿ ಸೊಸೈಟಿಯ ಮಾಹಿತಿಯನ್ನು ನೀಡಿದರು. ಚೇತನ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿದರು. ನಿರ್ದೇಶಕಿ ಅನಿತಾ ಪಿ ಶೆಟ್ಟಿ ವಂದಿಸಿದರು.
.