ಮಂಗಳೂರು: ಮಂಗಳೂರು ಅಂದ್ರೆ ಬರೀ ಕಡಲ ಸೌಂದರ್ಯವಷ್ಟೇ ಇಲ್ಲ, ಬದುಕಿನ ಕರಾಳ ಮುಖಗಳೂ ಇವೆ. ಶಿವಮೊಗ್ಗದಿಂದ ಬಂದು ನಂದಿಕೂರಿನಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗಾಡ್ತಿರೋ ಮುಗ್ದ ಬಾಲಕ ಗಣೇಶನ ಕಥೆ ಕೇಳಿದ್ರೆ ನಿಜಕ್ಕೂ ಬೇಜಾರಾಗುತ್ತೆ.
ಶಾಲೆಯ ಬಿಡುವಿನ ವೇಳೆಯಲ್ಲಿ ಕೈಯಲ್ಲಿ ಬುಕ್, ಪೆನ್ ಹಿಡಿದು ದೇವಸ್ಥಾನ, ಮಾರ್ಕೆಟ್ ಅಲೆದು ಮಾರಿ, ತಂದೆ-ತಾಯಿಯ ಸಂಕಷ್ಟಕ್ಕೆ ಆಸರೆಯಾಗಬೇಕು ಅಂತ ಹೊರಟ ಆ ಹುಡುಗನ ಬದುಕು ಅದೆಂಥಾ ಕಠೋರ ನೋವಿನಲ್ಲಿದೆ ಅನ್ನೋದಕ್ಕೆ ಸಾಕ್ಷಿ ಈ ಕಣ್ಣೀರ ಕಥನ.

ಹೌದು ಕಷ್ಟದ ಸುಳಿಯಲ್ಲಿದ್ದ ಗಣೇಶನ ಕಣ್ಣೀರೊರೆಸಲು ಬಂದಿದ್ದು “ಮೀಡಿಯಾ ಮನಸುಗಳು” ಬಳಗ. ಪತ್ರಕರ್ತ ಸಾಮಾಜಿಕ ಕಾರ್ಯಕರ್ತರೂ ಆಗಿರುವ ಶಶಿ ಬೆಳ್ಳಾಯರು ಸಾಮಾಜಿಕ ಜಾಲತಾಣದಲ್ಲಿ ಈ ಬಾಲಕನ ನೋವನ್ನು ಬಿಚ್ಚಿಟ್ಟಾಗ ಮನುಷ್ಯತ್ವ ಇನ್ನೂ ಸತ್ತಿಲ್ಲ ಅನ್ನೋದು ಸಾಬೀತಾಯ್ತು. ಕೇವಲ ಒಂದೇ ದಿನಕ್ಕೆ ದಾನಿಗಳು 20,000ಕ್ಕೂ ಹೆಚ್ಚು ಹಣವನ್ನು ಬಾಲಕನ ತಾಯಿಯ ಖಾತೆಗೆ ವರ್ಗಾಯಿಸಿ ಕೈಲಾದ ಸಹಾಯ ಮಾಡಿದರು.
ಆದರ ಆ ಬಡವರ ಮುಗ್ಧತೆಯೇ ಅವರಿಗೆ ಮುಳುವಾಯ್ತು. ಜನರ ಕರುಣೆಯ ಹಣದ ಮೇಲೆ ಕಣ್ಣಿಟ್ಟ ನೀಚ ವಂಚಕರು, “ಮಂತ್ರಾಲಯ ಟ್ರಸ್ಟ್” ಹೆಸರನ್ನೇ ದುರ್ಬಳಕೆ ಮಾಡಿಕೊಂಡು ಆ ಬಾಲಕನ ಹೆತ್ತವರ ಖಾತೆಯಲ್ಲಿದ್ದ ಹಣವನ್ನು ಪೂರ್ತಿ ದೋಚಿಕೊಂಡರು. ಕೈ ಸೇರಿದ್ದ ಕಾಸು ಒಂದೇ ರಾತ್ರಿಯಲ್ಲಿ ಕರಗಿಹೋದಾಗ ಆ ಕುಟುಂಬ ಪಟ್ಟ ಪಾಡು ಹೇಳತೀರದು. ಕಣ್ಣೀರಿನ ಕಡಲಲ್ಲಿ ಆ ಮುಗ್ದ ಜೀವಗಳು ನೊಂದು ಗೋಗರೆದವು.
ಆದರೆ ಅಲ್ಲಿಗೆ ಎಲ್ಲವೂ ಮುಗೀಲಿಲ್ಲ ಬಿಡಿ. ನೋವಿಗೆ ಸ್ಪಂದಿಸುವ ಜೀವಗಳು ಇನ್ನು ಜೀವಂತವಿವೆ ಅನ್ನೋದನ್ನ ಸಾಧಿಸಿ ತೋರಿಸಲು “ಮೀಡಿಯಾ ಮನಸುಗಳು” ತಂಡದ ಗೆಳೆಯರು ಮತ್ತೆ ನಿಂತರು. ಅನಿ ಮಂಗಳೂರು, ಚಂದನ ಅರುಣ್ ಶೆಟ್ಟಿ ಹಾಗೂ ಟೀಮ್ ಕಾಲಭೈರವ ಮಂಗಳೂರು ತಂಡಗಳು ಇವರ ಜೊತೆ ಕೈಜೋಡಿಸಿ, ಸಂಗ್ರಹವಾದ ಆರ್ಥಿಕ ಸಹಾಯದ ಜೊತೆಗೆ ಎರಡು ತಿಂಗಳಿಗೆ ಸಾಕಾಗುವಷ್ಟು ರೇಷನ್ ಸಾಮಗ್ರಿಗಳನ್ನು ಹೊತ್ತುಕೊಂಡು ನೇರವಾಗಿ ಆ ಬಾಲಕನ ಮನೆ ಬಾಗಿಲಿಗೇ ಹೋದರು.
ತಾವೇ ಸ್ವತಃ ಸಾಮಗ್ರಿಗಳನ್ನು ಒಯ್ದು ಗಣೇಶನ ಕೈಗಿಟ್ಟಾಗ, ಆ ಬಡವರ ಗುಡಿಸಲಿನಲ್ಲಿ ನೆಲೆಸಿದ್ದ ಕತ್ತಲು ಕರಗಿ ಅಲ್ಪಮಟ್ಟಿನ ನಗು ಮೂಡಿತು.
ಈ ಮಾನವೀಯ ಕಾರ್ಯದಲ್ಲಿ ಶಶಿ ಬೆಳ್ಳಾಯರು, ರಜನ್ ಕುಮಾರ್ ಕಾವೂರು, ಶಿವು ಕುಲಾಲ್ ಮತ್ತು ಅನಿ ಮಂಗಳೂರು ಸಾಥ್ ನೀಡಿ ನಿಜವಾದ ಕಾಳಜಿ ಮೆರೆದರು.
“ಮೀಡಿಯಾ ಮನಸುಗಳ ಸಮಾಜಮುಖಿ ಕಾರ್ಯ ನಮಗೆಲ್ಲಾ ಸ್ಫೂರ್ತಿ“
-ಅನಿ ಮಂಗಳೂರು, ಸಾಮಾಜಿಕ ಕಾರ್ಯಕರ್ತೆ
”ನಾನು ಸಾಮಾಜಿಕ ಜಾಲತಾಣಗಳಲ್ಲಿ ಗಣೇಶನ ಕುಟುಂಬದ ವಿಡಿಯೋ ನೋಡಿದಂದಿನಿಂದ ಅವನನ್ನು ಭೇಟಿ ಮಾಡಲು ನಿರ್ಧರಿಸಿದ್ದೆ. ಅದಕ್ಕಾಗಿ ಮೀಡಿಯಾ ಮನಸುಗಳು ಸಂಘಟನೆಯನ್ನು ಸಂಪರ್ಕಿಸಿ ಅವರ ಜೊತೆಗೆ ಬಂದಿದ್ದೇನೆ. ನಿಜಕ್ಕೂ ಇದು ಅತ್ಯಂತ ಖುಷಿಯ ಕಾರ್ಯಕ್ರಮ. ಮೀಡಿಯಾ ಮನಸುಗಳ ಸಾಮಾಜಿಕ ಕಾರ್ಯಗಳು ನಮಗೆ ಸ್ಫೂರ್ತಿ. ಇಂತಹ ಕಾರ್ಯಗಳು ಇನ್ನಷ್ಟು ನಡೆಯಲಿ, ನಾವು ಅವರ ಜೊತೆ ಸದಾ ನಿಲ್ಲುತ್ತೇವೆ“

