ಬಳ್ಕೂರು ಪಂಚಾಯತ್‌ನಲ್ಲಿ ಸಾಮಾಜಿಕ ಪರಿಶೋಧನಾ ಗ್ರಾಮಸಭೆ

0
8

ವಿ.ಬಿ.ಜಿ. ರಾಮ್ ಜೀ ಯೋಜನೆಯ ಸದುಪಯೋಗಕ್ಕೆ ಇಚ್ಛಾಶಕ್ತಿ ಮುಖ್ಯ: ಉಮೇಶ ಮುಂಡಳ್ಳಿ

ಹೊನ್ನಾವರ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಇದೀಗ ವಿ.ಬಿ.ಜಿ. ರಾಮ್ ಜೀ ಯೋಜನೆಯಾಗಿ ಬದಲಾಗಿದ್ದು, ಗ್ರಾಮೀಣ ಪ್ರದೇಶದ ದುಡಿಯುವ ವರ್ಗದ ಜನರಿಗೆ ವರದಾನವಿದ್ದಂತೆ. ಈ ಯೋಜನೆಯ ಸಮರ್ಪಕ ಅನುಷ್ಠಾನ ಹಾಗೂ ಸದುಪಯೋಗ ಪಡೆದುಕೊಳ್ಳುವಲ್ಲಿ ಜನರ ಇಚ್ಛಾಶಕ್ತಿ ಮತ್ತು ಸಕ್ರಿಯ ಪಾಲ್ಗೊಳ್ಳುವಿಕೆ ಬಹುಮುಖ್ಯವಾಗಿದೆ ಎಂದು ಭಟ್ಕಳ ತಾಲೂಕು ಸಾಮಾಜಿಕ ಪರಿಶೋಧನಾ ಕಾರ್ಯಕ್ರಮ ವ್ಯವಸ್ಥಾಪಕ ಉಮೇಶ ಮುಂಡಳ್ಳಿ ಹೇಳಿದರು.

ಅವರು ಹೊನ್ನಾವರ ತಾಲೂಕಿನ ಬಳ್ಕೂರು ಗ್ರಾಮ ಪಂಚಾಯತ್‌ನಲ್ಲಿ ಮಂಗಳವಾರ ನಡೆದ 2026-27ನೇ ಸಾಲಿನ ಸಾಮಾಜಿಕ ಪರಿಶೋಧನಾ ಗ್ರಾಮಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ವಿ.ಬಿ.ಜಿ. ರಾಮ್ ಜೀ ಯೋಜನೆಯಡಿ ಗ್ರಾಮೀಣ ಜನರು ಲಭ್ಯವಿರುವ ಸೌಲಭ್ಯಗಳು, ಉದ್ಯೋಗಾವಕಾಶಗಳು ಹಾಗೂ ವಿವಿಧ ಕಾಮಗಾರಿಗಳ ಕುರಿತು ಸಮರ್ಪಕ ಮಾಹಿತಿ ಪಡೆದುಕೊಂಡು ಯೋಜನೆಯ ಸಂಪೂರ್ಣ ಪ್ರಯೋಜನವನ್ನು ಪಡೆಯಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಸಾಮಾಜಿಕ ಪರಿಶೋಧನಾ ವರದಿಯನ್ನು ಮಂಡಿಸಿ, ಪರಿಶೋಧನೆಯಲ್ಲಿ ಕಂಡುಬಂದ ಅಂಶಗಳನ್ನು ಸಭೆಯ ಗಮನಕ್ಕೆ ತಂದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಶಿಕ್ಷಣ ಇಲಾಖೆಯ ದೈಹಿಕ ಶಿಕ್ಷಣ ಪರಿವೀಕ್ಷಕ ಗಣೇಶ ನಾಯ್ಕ ಮಾತನಾಡಿ, ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು ಶೇ.90ರಷ್ಟು ಕಾಮಗಾರಿಗಳು ಉತ್ತಮವಾಗಿ ನಡೆದಿರುವುದು ಸಾಮಾಜಿಕ ಪರಿಶೋಧನೆಯಿಂದ ತಿಳಿದುಬಂದಿದೆ. ಉಳಿದಂತೆ ಪರಿಶೋಧನೆಯಲ್ಲಿ ಕಂಡುಬಂದಿರುವ ಲೋಪದೋಷಗಳು ಹಾಗೂ ಇತರ ಅಂಶಗಳಿಗೆ ಸಂಬಂಧಿಸಿದಂತೆ ಕೂಡಲೇ ಸೂಕ್ತ ಅನುಪಾಲನಾ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಾಬುರಾಯ ನಾಯ್ಕ ಎಲ್ಲರನ್ನೂ ಸ್ವಾಗತಿಸಿ, ಕಾಮಗಾರಿಗಳ ಪಟ್ಟಿಯನ್ನು ಹಾಗೂ ಹಿಂದಿನ ಸಭೆಯ ನಡಾವಳಿಯನ್ನು ಓದಿದರು. ಪಂಚಾಯತ್ ಕಾರ್ಯದರ್ಶಿ ದೇವರಾಯ ನಾಯ್ಕ ವಂದಿಸಿದರು.

ಸಭೆಯಲ್ಲಿ ಗ್ರಾಮ ಪಂಚಾಯತ್ ಸಿಬ್ಬಂದಿಗಳಾದ ವಿಷ್ಣು ನಾಯ್ಕ, ಮಣಿಕಂಠ ನಾಯ್ಕ, ಶ್ವೇತಾ ನಾಯ್ಕ, ಗ್ರಾಮ ಸಂಪನ್ಮೂಲ ವ್ಯಕ್ತಿಗಳಾದ ಯಮುನಾ ನಾಯ್ಕ, ಶಿಲ್ಪಾ ನಾಯ್ಕ ಹಾಗೂ ಬಿ.ಎಫ್.ಟಿ. ಚಂದ್ರಕಲಾ ಮುಕ್ರಿ ಉಪಸ್ಥಿತರಿದ್ದರು.