ಉಡುಪಿ: ಜಿಲ್ಲಾಸ್ಪತ್ರೆಯ ಶವಗಾರದಲ್ಲಿ ವಾರಸುದಾರರಿಗಾಗಿ ಕಾಯ್ದಿರಿಸಲಾಗಿದ್ದ, ಅಪರಿಚಿತ ಮೃತದೇಹದ ವಾರಸುದಾರರು ಪತ್ತೆಯಾಗದ ಹಿನ್ನೆಲೆಯಲ್ಲಿ, ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ, ಕಾಪುವಿನ ಪಕೀರ್ಣಕಟ್ಟೆ ರುದ್ರಭೂಮಿಯಲ್ಲಿ ಗೌರವಯುತವಾಗಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಇಲಾಖೆಯ ಮನವಿಗೆ ಸ್ಪಂದಿಸಿ ಮೃತದೇಹದ ಅಂತ್ಯಸಂಸ್ಕಾರ ಕಾರ್ಯವನ್ನು ಗೌರವಯುತವಾಗಿ ನೆರವೇರಿಸಿದರು. ಕಾಪು ಪೊಲೀಸ್ ಠಾಣೆಯ ಮುಖ್ಯ ಆರಕ್ಷಕ ಅರುಣ್ ಉಪ್ಪೂರು ಹಾಗೂ ಸಿಬ್ಬಂದಿ ಶಿವ ನಾಯಕ್ ಅವರು ಅಗತ್ಯ ಕಾನೂನು ಪ್ರಕ್ರಿಯೆಗಳನ್ನು ನಡೆಸಿಕೊಟ್ಟರು. ಅಂತ್ಯಸಂಸ್ಕಾರ ಕಾರ್ಯದಲ್ಲಿ ಫ್ಲವರ್ ವಿಷ್ಣು ಹಾಗೂ ಕಾಪು ಪುರಸಭೆಯ ದಿನೇಶ್ ಗೊಲ್ಲ, ಕಾರ್ಮಿಕರು ಸಹಕರಿಸಿದರು.
ಕೆಲವು ದಿನಗಳ ಹಿಂದೆ ಪಾಂಗಾಳ ರಾಷ್ಟ್ರೀಯ ಹೆದ್ದಾರಿ 66ರ ಬದಿಯಲ್ಲಿರುವ ಅಂಗಡಿಯೊಂದರ ಒಳಗೆ ಅಪರಿಚಿತ ವ್ಯಕ್ತಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ವ್ಯಕ್ತಿ ಮೃತಪಟ್ಟು ಸುಮಾರು ಹತ್ತು ದಿನಗಳಾಗಿರಬಹುದು ಎಂದು ಶಂಕಿಸಲಾಗಿತ್ತು.ಒಳಕಾಡು ಕೊಳೆತ ಮೃತ ವ್ಯಕ್ತಿಯನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದರು.ವ್ರತ ವ್ಯಕ್ತಿಯ ಹೆಸರು ಹಾಗೂ ವಿಳಾಸದ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ.
ಮೃತರ ವಾರಸುದಾರರು ಕಾಪು ಪೊಲೀಸ್ ಠಾಣೆಯ ನಾಗರಿಕ ಸಹಾಯ ಕೇಂದ್ರವನ್ನು ಸಂಪರ್ಕಿಸುವಂತೆ ಸೂಚಿಸಲಾಗಿತ್ತು. ಆದರೆ, ಹಲವು ದಿನಗಳು ಕಳೆದರೂ ಯಾರೂ ಸಂಪರ್ಕಿಸದ ಹಿನ್ನೆಲೆಯಲ್ಲಿ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

