ಮಲ್ಪೆ: ‘ಉಡುಪಿಗೆ ಬನ್ನಿ’ ನೇತೃತ್ವದಲ್ಲಿ ನವೆಂಬರ್ 15 ರಂದು ನಡೆದ 4ನೇ ‘ಬರ್ಡ್ ವಾಕ್’ ಪಕ್ಷಿ ವೀಕ್ಷಣೆ ಕಾರ್ಯಕ್ರಮದಲ್ಲಿ ಒಟ್ಟು 45 ಪ್ರಬೇಧಗಳ 225 ಹಕ್ಕಿಗಳನ್ನು ಪಟ್ಟಿ ಮಾಡಲಾಯಿತು. ಬೆಳಿಗ್ಗೆ 6.30ಕ್ಕೆ ಆರಂಭವಾದ ಕಾರ್ಯಕ್ರಮದಲ್ಲಿ ಪರಿಸರಾಸಕ್ತರು ಸುಮಾರು ಒಂದೂವರೆ ಗಂಟೆಗಳ ಕಾಲ ಸುತ್ತಮುತ್ತಲಿನ ಪದೇಶಗಳಲ್ಲಿ ಕಾಲ್ನಡಿಗೆಯ ಮೂಲಕ ‘ಇ-ಬರ್ಡ್’ ಮತ್ತು ಮರ್ಲಿನ್ ಆಪ್ ಸಹಾಯದಲ್ಲಿ 45 ಪ್ರಬೇಧಗಳ 225 ಹಕ್ಕಿಗಳನ್ನು ಪಟ್ಟಿ ಮಾಡಿದರು.
ಲಿಟಲ್ ರಿಂಗ್ಡ್ ಪ್ಲೋವರ್, ಶಿಕ್ರಾ (ಬಿಜ್ಜು) ಬ್ರೌನ್ ಶ್ರೈಕ್ (ಕಂದು ಕಳಿಂಗ), ವೈಟ್ ಬ್ರೌವ್ಡ್ ಬುಲ್ಬುಲ್ (ಬಿಳಿ ಹುಬ್ಬಿನ ಪಿಕಳಾರ), ಬಾಯಾ ವೀವರ್ (ಗೀಜಗ), ವೈಟ್ ಬ್ರೌಡ್ ವ್ಯಾಗ್ ಟೈಲ್ (ಕಪ್ಪು ಬಿಳಿ ಸಿಪಿಲೆ), ಪೇಲ್ ಬಿಲ್ಡ್ ಫ್ಲವರ್ ಪೆಕ್ಕರ್ (ಕೊಕ್ಕಿನ ಹೂಕಡಿಕ), ಗ್ರೀನಿಶ್ ವಾರ್ಬ್ಲರ್ (ಹಸಿರು ಎಲೆ ಉಲಿಯಕ್ಕಿ), ಪ್ಲೈನ್ ಪ್ರೀನಿಯಾ (ಬಯಲು ಉಲಿಯಕ್ಕಿ), ರೇಕೆಟ್ ಟೈಲ್ಡ್ ಡ್ರೋಂಗೋ (ಭೀಮರಾಜ) ಬ್ಲಾಕ್ ಹೂಡೆಡ್ ಓರಿಯೋಲ್ (ಕಪ್ಪು ತಲೆ ಹೊನ್ನಕ್ಕಿ), ಸ್ಪಾಟೆಡ್ ಡೌವ್ (ಚುಕ್ಕೆ ಬೆಳವ), ರೆಡ್ ವ್ಯಾಟ್ಲಡ್ ಲ್ಯಾಪ್ ವಿಂಗ್ (ಕೆಂಪು ಟಿಟ್ಟಿಭ), ಗ್ರೀನ್ ಬೀ ಈಟರ್ (ಸಣ್ಣ ಕಳ್ಳಿಪೀರ), ಬ್ಲೂ ಟೈಲ್ಡ್ ಬೀ ಈಟರ್ (ನೀಲಿಬಾಲದ ಕಳ್ಳಿಪೀರ), ಬ್ಲಾಕ್ ರಂಪ್ಡ್ ಫ್ಲೇಮ್ ಬ್ಯಾಕ್ (ಹೊಂಬೆನ್ನಿನ ಮರಕುಟಿಗ), ರೋಸ್ ರಿಂಗ್ಡ್ ಪ್ಯಾರಾಕೀಟ್ (ಗುಲಾಬಿ ಕೊರಳಿನ ಗಿಳಿ), ರೂಫಸ್ ಟ್ರೀಪೈ (ಮಟಪಕ್ಷಿ), ಆಶಿ ಪ್ರೀನಿಯಾ (ಬೂದು ಉಲಿಯಕ್ಕಿ), ಸ್ಕೇಲಿ ಬ್ರೆಸ್ಟೆಡ್ ಮುನಿಯಾ (ಚುಕ್ಕ ರಾಟವಾಳ) ಸೇರಿದಂತೆ ಒಟ್ಟು 45 ಪ್ರಬೇಧಗಳ ಹಕ್ಕಿಗಳನ್ನು ಪಟ್ಟಿ ಮಾಡಲಾಯಿತು. ತಂಡದಲ್ಲಿ ಡಾ. ಗಣೇಶ್ ಪ್ರಸಾದ್ ಜಿ. ನಾಯಕ್, ರಾಘವೇಂದ್ರ ಪ್ರಭು ಕರ್ವಾಲು, ಪ್ರಭಾಕರ್, ಮೇಧಾ ಗಣೇಶ್, ಸಾವನ್, ಸಾಯೀಶ್ ಮುಂತಾದವರು ಉಪಸ್ಥಿತರಿದ್ದರು.
ಹಕ್ಕಿಗಳು ಸೂರ್ಯೋದಯಕ್ಕಿಂತ ಕೆಲವು ನಿಮಿಷಗಳ ಮೊದಲು ಆಹಾರ ಹುಡುಕಾಟ ಮಾಡುವುದರಿಂದ ಸೂರ್ಯೋದಯದಿಂದ ಸುಮಾರು 2 ಗಂಟೆಗಳ ಕಾಲ ಬಹಳ ಕ್ರಿಯಾಶೀಲರಾಗಿದ್ದು ಹೆಚ್ಚು ಸಂಖ್ಯೆಯಲ್ಲಿ ಕಂಡುಬರುತ್ತವೆ. ಜನರಿಗೆ ಹಕ್ಕಿಗಳ ಬಗ್ಗೆ ಅರಿವು, ಅವುಗಳ ಸಂರಕ್ಷಣೆಯ ಕುರಿತು ಜಾಗೃತಿ, ಯುವಜನರಿಗೆ ಉತ್ತಮ ಹವ್ಯಾಸದಲ್ಲಿ ತೊಡಗಿಸಿಕೊಳ್ಳಲು ವೇದಿಕೆ, ಬೆಳಗಿನ ವಾತಾವರಣದಲ್ಲಿ ವಾಯುವಿಹಾರದಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯದಲ್ಲಿ ವೃದ್ಧಿ, ವಿಟಮಿನ್ ಡಿ ಹೇರಳ ಪ್ರಮಾಣದಲ್ಲಿ ಸಿಗುವಂತೆ ಮಾಡುವುದು ‘ಬರ್ಡ್ ವಾಕ್’ ಉದ್ದೇಶವಾಗಿದೆ ಎಂದು ಕಾರ್ಯಕ್ರಮ ಸಂಯೋಜಕ ಡಾ. ಗಣೇಶ್ ಪ್ರಸಾದ್ ಹೇಳಿದ್ದಾರೆ.

