ಬೆಂಗಳೂರು: ಹೂಡಿಕೆ ವೃತ್ತಿಪರರ ಜಾಗತಿಕ ಸಂಸ್ಥೆಯಾದ, ದಕ್ಷಿಣ ಭಾರತದ ಮೊದಲ ಹಾಗೂ ಅತಿದೊಡ್ಡ ಪ್ರಾದೇಶಿಕ ಫೈನಾನ್ಸ್ ಇಂಡಸ್ಟ್ರಿ ನೆಟ್ವರ್ಕ್ (ಎಫ್ಐಎನ್) ಅಧಿವೇಶನವನ್ನು ನವೆಂಬರ್ 17ರಂದು ಬೆಂಗಳೂರಿನಲ್ಲಿ ಅತ್ಯಂತ ಯಶಸ್ವಿಯಾಗಿ ಆಯೋಜಿಸಿತ್ತು.ಈ ಮಹತ್ವದ ಕಾರ್ಯಕ್ರಮದಲ್ಲಿ ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ನ ವಿವಿಧ ವಿಶ್ವವಿದ್ಯಾಲಯಗಳ ಡೀನ್ಗಳು, ಪ್ರಾಧ್ಯಾಪಕರು ಹಾಗೂ ಶೈಕ್ಷಣಿಕ ನಾಯಕರು ಸೇರಿದಂತೆ 40ಕ್ಕೂ ಹೆಚ್ಚು ಗಣ್ಯರು ಭಾಗವಹಿಸಿದ್ದರು. ಈ ಹಿಂದೆ ಕೇವಲ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಈ ಫಿನ್ ಯೋಜನೆಯನ್ನು ಇದೀಗ ದಕ್ಷಿಣ ಭಾರತದ ಮಟ್ಟಿಗೆ ವಿಸ್ತರಿಸಲಾಗಿದೆ. ಉದ್ಯಮದ ನಾಯಕರು ಹಾಗೂ ಶಿಕ್ಷಣ ತಜ್ಞರು ಒಗ್ಗೂಡಿ ಹಣಕಾಸು ಶಿಕ್ಷಣವು ಉದ್ಯಮದ ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಹೇಗೆ ಬದಲಾಗಬೇಕು ಎಂಬುದರ ಕುರಿತು ಇಲ್ಲಿ ವಿಸ್ತೃತ ಚರ್ಚೆ ನಡೆಸಿದರು.
“ಉದ್ಯಮ ಮತ್ತು ಶೈಕ್ಷಣಿಕ ವಲಯಗಳ ಬೆಸೆಯುವಿಕೆ – ಹಣಕಾಸಿನ ಭವಿಷ್ಯಕ್ಕಾಗಿ ವಿದ್ಯಾರ್ಥಿಗಳನ್ನು ಸಿದ್ಧಪಡಿಸುವುದು” ಎಂಬ ವಿಷಯದಡಿ ಈ ಬಾರಿಯ ಅಧಿವೇಶನ ನಡೆಯಿತು. ವಿದ್ಯಾರ್ಥಿಗಳು ಕೇವಲ ಪುಸ್ತಕದ ಬದನೆಕಾಯಿಗೆ ಸೀಮಿತವಾಗದೆ, ತಾಂತ್ರಿಕ ಜ್ಞಾನ, ಪ್ರಾಯೋಗಿಕ ಕೌಶಲ್ಯ ಹಾಗೂ ವೃತ್ತಿಪರ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದೊಂದಿಗೆ ಉದ್ಯೋಗ ಮಾರುಕಟ್ಟೆಯನ್ನು ಪ್ರವೇಶಿಸುವುದನ್ನು ಖಚಿತಪಡಿಸಿಕೊಳ್ಳಲು ವಿಶ್ವವಿದ್ಯಾಲಯಗಳು ಹೇಗೆ ಕಾರ್ಯನಿರ್ವಹಿಸಬೇಕು ಎಂಬುದರ ಕುರಿತು ಇಲ್ಲಿ ಗಂಭೀರ ಚರ್ಚೆ ನಡೆಯಿತು. ವಿಶೇಷವಾಗಿ, ಕೃತಕ ಬುದ್ಧಿಮತ್ತೆ (ಎಐ) ಮತ್ತು ಉದಯೋನ್ಮುಖ ತಂತ್ರಜ್ಞಾನಗಳು ಹಣಕಾಸು ವಲಯದ ಉದ್ಯೋಗಗಳನ್ನು ಹೇಗೆ ಮರುರೂಪಿಸುತ್ತಿವೆ ಎಂಬ ಬಗ್ಗೆಯೂ ಮಂಥನ ನಡೆಯಿತು.
ಸಿಎಫ್ಎ ಕಾರ್ಯಕ್ರಮದ ಹಿರಿಯ ಮುಖ್ಯಸ್ಥೆ ಆನ್ ಫಾಲ್ಗ್ರೆನ್ ಅವರು ಶೈಕ್ಷಣಿಕ ಸಹಯೋಗದ ಕುರಿತು ಸಂಸ್ಥೆಯ ದೃಷ್ಟಿಕೋನವನ್ನು ಹಂಚಿಕೊಂಡರು. ನಂತರ ನಡೆದ ಪ್ಯಾನಲ್ ಚರ್ಚೆಯಲ್ಲಿ ಸಿಎಫ್ಎ ಇನ್ಸ್ಟಿಟ್ಯೂಟ್ನ ಶಿಕ್ಷಣ ವಿಭಾಗದ ಎಂಡಿ ಕ್ರಿಸ್ ವೀಸ್, ಸ್ಟೇಟ್ ಸ್ಟ್ರೀಟ್ ಇನ್ವೆಸ್ಟ್ಮೆಂಟ್ ಮ್ಯಾನೇಜ್ಮೆಂಟ್ ಇಂಡಿಯಾದ ಕ್ವಾಂಟಿಟೇಟಿವ್ ರಿಸರ್ಚ್ & ಸೊಲ್ಯೂಷನ್ಸ್ ಮುಖ್ಯಸ್ಥ ಲೋಕೇಶ್ ಮೃಗ್ ಹಾಗೂ ಅಕ್ಯೂಟಿ ಅನಾಲಿಟಿಕ್ಸ್ನ ಜಾಗತಿಕ ಪ್ರತಿಭಾ ವಿಭಾಗದ ಹಿರಿಯ ನಿರ್ದೇಶಕ ಮನೀಶ್ ಜೈನ್ ಪಾಲ್ಗೊಂಡಿದ್ದರು. ನಾರ್ದರ್ನ್ ಟ್ರಸ್ಟ್ನ ಗ್ಲೋಬಲ್ ರಿಸ್ಕ್ ವಿಭಾಗದ ಹಿರಿಯ ಉಪಾಧ್ಯಕ್ಷೆ ರಿಂಡಾ ಲಕ್ಷ್ಮಿ ಚರ್ಚಾಗೋಷ್ಠಿಯನ್ನು ಮುನ್ನಡೆಸಿದರು.
ಸಿಎಫ್ಎ ಇನ್ಸ್ಟಿಟ್ಯೂಟ್ನ ಶಿಕ್ಷಣ ವಿಭಾಗದ ಎಂಡಿ ಕ್ರಿಸ್ ವೀಸ್ ಅವರು ಮಾತನಾಡಿ, “ಹಣಕಾಸು ವಲಯದಲ್ಲಿ ಯಶಸ್ವಿಯಾಗಲು ಅಗತ್ಯವಿರುವ ಕೌಶಲ್ಯಗಳು ವೇಗವಾಗಿ ಬದಲಾಗುತ್ತಿವೆ. ಹಾಗಾಗಿ ಶೈಕ್ಷಣಿಕ ಹಾಗೂ ಉದ್ಯಮ ವಲಯದ ನಡುವಿನ ಸಂಪರ್ಕ ಎಂದಿಗಿಂತಲೂ ಈಗ ಹೆಚ್ಚು ಅಗತ್ಯವಾಗಿದೆ. ಬಲವಾದ ತಾಂತ್ರಿಕ ಜ್ಞಾನದ ಜೊತೆಗೆ, ವಿದ್ಯಾರ್ಥಿಗಳಿಗೆ ತಾವು ಕಲಿತಿದ್ದನ್ನು ಅನ್ವಯಿಸುವ ಹಾಗೂ ಕೆಲಸದ ಸ್ಥಳದಲ್ಲಿ ಬೇಕಾಗುವ ಪ್ರಾಯೋಗಿಕ ಕೌಶಲ್ಯಗಳನ್ನು ಬೆಳೆಸಿಕೊಳ್ಳುವ ಅವಕಾಶಗಳ ಅಗತ್ಯವಿದೆ. ಶಿಕ್ಷಣತಜ್ಞರು ಮತ್ತು ಉದ್ಯಮದ ನಾಯಕರನ್ನು ಒಂದೇ ವೇದಿಕೆಗೆ ತರುವ ಮೂಲಕ, ವಿದ್ಯಾರ್ಥಿಗಳನ್ನು ಅವರ ಮೊದಲ ಉದ್ಯೋಗಕ್ಕೆ ಮಾತ್ರವಲ್ಲದೆ, ಭವಿಷ್ಯದ ವೃತ್ತಿಜೀವನಕ್ಕೂ ಸಜ್ಜುಗೊಳಿಸಲು ಸಾಧ್ಯವಾಗುತ್ತದೆ” ಎಂದು ಅಭಿಪ್ರಾಯಪಟ್ಟರು.ಕಾರ್ಯಕ್ರಮದ ಕೊನೆಯಲ್ಲಿ ಸಿಎಫ್ಎ ಇನ್ಸ್ಟಿಟ್ಯೂಟ್ ಪ್ರೈವೇಟ್ ಲಿಮಿಟೆಡ್ನ ಹಿರಿಯ ಕಂಟ್ರಿ ಹೆಡ್ ಆರತಿ ಪೋರ್ವಾಲ್ ನೇತೃತ್ವದಲ್ಲಿ “ಚರ್ಚೆಯಿಂದ ಕ್ರಿಯೆಯೆಡೆಗೆ” ಎಂಬ ಸಂವಾದ ನಡೆಯಿತು. ಉದ್ಯಮ ಹಾಗೂ ಶೈಕ್ಷಣಿಕ ವಲಯದ ಸಹಯೋಗವನ್ನು ಮತ್ತಷ್ಟು ಬಲಪಡಿಸಲು ತೆಗೆದುಕೊಳ್ಳಬೇಕಾದ ಮುಂದಿನ ಪ್ರಾಯೋಗಿಕ ಹೆಜ್ಜೆಗಳ ಕುರಿತು ಇಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಈ ಫಿನ್ ವೇದಿಕೆಯು ಕೌಶಲ್ಯದ ಕೊರತೆಯನ್ನು ನೀಗಿಸಲು, ಉದ್ಯೋಗಾರ್ಹತೆಯನ್ನು ಹೆಚ್ಚಿಸಲು ಹಾಗೂ ಶೈಕ್ಷಣಿಕ ವಲಯಕ್ಕೆ ಉದ್ಯಮದ ದೃಷ್ಟಿಕೋನಗಳನ್ನು ತರುವ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸುತ್ತಿದ್ದು, ಈ ಹಿಂದೆ ಪುಣೆ, ಬೆಂಗಳೂರು ಮತ್ತು ಹೈದರಾಬಾದ್ನಲ್ಲಿ ಇಂಥಹುದೇ ಕಾರ್ಯಕ್ರಮಗಳನ್ನು ಆಯೋಜಿಸಿತ್ತು.ಈ ಅಧಿವೇಶನದಲ್ಲಿ ದಕ್ಷಿಣ ಭಾರತದ ಪ್ರಮುಖ ಸಂಸ್ಥೆಗಳಾದ ಸೇಂಟ್ ಜೋಸೆಫ್ಸ್ ಕಾಲೇಜ್ ಆಫ್ ಕಾಮರ್ಸ್, ಕ್ರೈಸ್ಟ್ ಯೂನಿವರ್ಸಿಟಿ, ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್, ಸಿಂಬಯೋಸಿಸ್ (ಎಸ್ಐಬಿಎಂ-ಬೆಂಗಳೂರು), ಜೈನ್ ವಿವಿ, ವಾಕ್ಸೆನ್ ವಿವಿ, ಕ್ರೀಯಾ ಯೂನಿವರ್ಸಿಟಿ/ಐಎಫ್ಎಂಆರ್, ಟಿಎಪಿಎಂಐ, ಪಿಇಎಸ್ ಯೂನಿವರ್ಸಿಟಿ, ಎನ್ಎಂಐಎಂಎಸ್, ಗೀತಂ, ಜಗದೀಶ್ ಶೇಠ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್, ಶಿವ್ ನಾಡಾರ್ ಯೂನಿವರ್ಸಿಟಿ (ಚೆನ್ನೈ), ಐಎಂಟಿ ಹೈದರಾಬಾದ್, ಗ್ರೇಟ್ ಲೇಕ್ಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಚೆನ್ನೈ) ಮತ್ತು ಗಾರ್ಡನ್ ಸಿಟಿ ಯೂನಿವರ್ಸಿಟಿ ಸೇರಿದಂತೆ ಹಲವು ಪ್ರತಿಷ್ಠಿತ ವಿವಿಗಳ ಪ್ರತಿನಿಧಿಗಳು ಭಾಗವಹಿಸಿದ್ದರು.ಸಿಎಫ್ಎ ಇನ್ಸ್ಟಿಟ್ಯೂಟ್ ವಿಶ್ವಾದ್ಯಂತ 160 ಮಾರುಕಟ್ಟೆಗಳಲ್ಲಿ 2 ಲಕ್ಷಕ್ಕೂ ಅಧಿಕ ಚಾರ್ಟರ್ ಹೋಲ್ಡರ್ಗಳನ್ನು ಹಾಗೂ 157 ಸ್ಥಳೀಯ ಸೊಸೈಟಿಗಳನ್ನು ಹೊಂದಿರುವ ಜಾಗತಿಕ ಹೂಡಿಕೆ ವೃತ್ತಿಪರರ ಸಂಸ್ಥೆಯಾಗಿದೆ.

