‘ಮಣ್ಣ ಘಮದ ಸಾಹಿತ್ಯ ಸಂಭ್ರಮ’ ದೃಶ್ಯಗೀತೆ ನ.22ರಂದು ಪುತ್ತೂರಿನಲ್ಲಿ ಬಿಡುಗಡೆ

0
2

ಪುತ್ತೂರು: ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ನೇತೃತ್ವದಲ್ಲಿ, ಪಾರ್ಥವಿ ಕ್ರಿಯೇಷನ್ಸ್ ಅರ್ಪಿಸುವ ಹಾಗೂ ಮಿತ್ರಂಪಾಡಿ ಜಯರಾಮ್ ರೈ (ಅಬುಧಾಬಿ) ನಿರ್ಮಾಣದ ‘ಮಣ್ಣ ಘಮದ ಸಾಹಿತ್ಯ ಸಂಭ್ರಮ’ ದೃಶ್ಯಗೀತೆಯ ಬಿಡುಗಡೆ ಸಮಾರಂಭ ನವೆಂಬರ್ 22ರಂದು ಪುತ್ತೂರಿನಲ್ಲಿ ನಡೆಯಲಿದೆ.
ಚಿಗುರೆಲೆ ಸಾಹಿತ್ಯ ಬಳಗ ಪುತ್ತೂರು ಇದರ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ದೃಶ್ಯಗೀತೆಗೆ ನಾರಾಯಣ ಕುಂಬ್ರ ಸಾಹಿತ್ಯ ರಚಿಸಿದ್ದಾರೆ. ಗ್ರಾಮ ಸಾಹಿತ್ಯ ಸಂಭ್ರಮದ ಆಶಯ ಹಾಗೂ ಗ್ರಾಮೀಣ ಸಾಹಿತ್ಯದ ಸೊಗಡನ್ನು ಸಾರುವ ಉದ್ದೇಶದಿಂದ ಈ ದೃಶ್ಯಗೀತೆ ರೂಪುಗೊಂಡಿದೆ.
ನವೆಂಬರ್ 22ರ ಭಾನುವಾರ ಬೆಳಿಗ್ಗೆ 10.30ಕ್ಕೆ ಪುತ್ತೂರಿನ ದರ್ಬೆಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಬಿಡುಗಡೆ ಸಮಾರಂಭ ನಡೆಯಲಿದೆ.ದೃಶ್ಯಗೀತೆಯನ್ನು ಹಿರಿಯ ಸಾಹಿತಿ ಮತ್ತು ಸಾಹಿತ್ಯ ಪರಿಚಾರಕರಾದ ಡಾ. ಕೊಳ್ಚಪ್ಪೆ ಗೋವಿಂದ ಭಟ್ ಬಿಡುಗಡೆಗೊಳಿಸಲಿದ್ದು,
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಪುತ್ತೂರು ತಾಲೂಕು ಘಟಕದ ಅಧ್ಯಕ್ಷರಾದ ಪುತ್ತೂರು ಉಮೇಶ್ ನಾಯಕ್ ವಹಿಸಲಿರುವರು. ಮುಖ್ಯ ಅತಿಥಿಗಳಾಗಿ ಶ್ರೀ ಕುಂಬ್ರ ದುರ್ಗಾಪ್ರಸಾದ್ ರೈ ಮತ್ತು ಶ್ರೀ ಗಣೇಶ ಪಾಲೆಚ್ಚಾರು ಭಾಗವಹಿಸಲಿರುವರು. ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರು,ಪದಾಧಿಕಾರಿಗಳು ಹಾಗೂ ಚಿಗುರೆಲೆ ಸಾಹಿತ್ಯ ಬಳಗದ ಅಧ್ಯಕ್ಷರು, ನಿರ್ವಾಹಕರು ಮತ್ತು ಸರ್ವ ಸದಸ್ಯರು ಸಾಹಿತ್ಯಾಸಕ್ತರು ಹಾಗೂ ಸಾರ್ವಜನಿಕರನ್ನು ಆತ್ಮೀಯವಾಗಿ ಆಹ್ವಾನಿಸಿದ್ದಾರೆ.