ಗಡಿಪಾರು ಆದೇಶಕ್ಕೆ ಒಳಗಾದ ನರಸಿಂಹ ಮಾಣಿ ಮನೆಗೆ ಶಾಸಕ ಹರೀಶ್ ಪೂಂಜಾ ಭೇಟಿ

0
4


ತಾಯಿ ಮತ್ತು ತಂಗಿಗೆ ಧೈರ್ಯ ತುಂಬಿ ಆತ್ಮಸ್ಥೈರ್ಯ ನೀಡಿದ ಬೆಳ್ತಂಗಡಿ ಶಾಸಕ

ಮಾಣಿ: ಹಿಂದೂ ಜಾಗರಣ ವೇದಿಕೆಯ ದಕ್ಷಿಣ ಕನ್ನಡ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಅವರಿಗೆ ಗಡಿಪಾರು ಆದೇಶ ಜಾರಿಗೊಳಿಸುವ ಪ್ರಕ್ರಿಯೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರು ಮಾಣಿಯಲ್ಲಿರುವ ಅವರ ಮನೆಗೆ ಭೇಟಿ ನೀಡಿ, ಕುಟುಂಬದವರೊಂದಿಗೆ ಮಾತುಕತೆ ನಡೆಸಿ ಧೈರ್ಯ ತುಂಬಿದರು.
ನರಸಿಂಹ ಮಾಣಿ ಅವರಿಗೆ ಗಡಿಪಾರು ಆದೇಶಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಲು ಪೊಲೀಸರು ಹಲವು ಬಾರಿ ಪ್ರಯತ್ನಿಸಿದರೂ ಅವರು ಲಭ್ಯವಾಗದ ಹಿನ್ನೆಲೆಯಲ್ಲಿ ಮೊನ್ನೆ ಸಂಜೆ ಮಾಣಿ ಪರಿಸರದಲ್ಲಿ ಡಂಗುರ ಸಾರುವ ಮೂಲಕ ಮೈಕ್‌ನಲ್ಲಿ ಸಾರ್ವಜನಿಕ ಪ್ರಕಟಣೆ ಮಾಡಿದ್ದರು. ಈ ವಿಚಾರ ಸಾಮಾಜಿಕ ಜಾಲತಾಣಗಳ ಮೂಲಕ ತಮ್ಮ ಗಮನಕ್ಕೆ ಬಂದ ತಕ್ಷಣ ಶಾಸಕ ಹರೀಶ್ ಪೂಂಜಾ ಅವರು ನರಸಿಂಹ ಮಾಣಿ ಅವರ ಮನೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮನೆಯಲ್ಲಿದ್ದ ಅವರ ತಾಯಿ ಹಾಗೂ ತಂಗಿಯನ್ನು ಭೇಟಿಯಾಗಿ ಮಾತುಕತೆ ನಡೆಸಿ, ಪ್ರಸ್ತುತ ಬೆಳವಣಿಗೆಗಳಿಂದ ಕುಟುಂಬದವರು ಆತಂಕಕ್ಕೊಳಗಾಗಬಾರದು, ಧೈರ್ಯದಿಂದ ಇರಬೇಕು ಎಂದು ಆತ್ಮಸ್ಥೈರ್ಯ ತುಂಬಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜಾ ಅವರು, ನರಸಿಂಹ ಮಾಣಿಯವರು ಹಲವು ವರ್ಷಗಳಿಂದ ಹಿಂದೂ ಸಮಾಜದ ಪರವಾಗಿ ಹಾಗೂ ಸಂಘಟನೆಯ ಮೂಲಕ ನಿರಂತರವಾಗಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡು ಬಂದವರು. ಸಮಾಜದಲ್ಲಿ ಯಾರಿಗಾದರೂ ಅನ್ಯಾಯವಾದಾಗ, ದೌರ್ಜನ್ಯಕ್ಕೊಳಗಾದಾಗ ಅವರ ನೆರವಿಗೆ ಧಾವಿಸಿ ನಿಲ್ಲುವ ಗುಣ ಹೊಂದಿರುವ ಕಾರ್ಯಕರ್ತರಾಗಿದ್ದಾರೆ. ಸಮಾಜದ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡ ಸಂದರ್ಭದಲ್ಲಿ ಅವರ ವಿರುದ್ಧ ವಿವಿಧ ಪ್ರಕರಣಗಳು ದಾಖಲಾಗಿರಬಹುದು. ಆದರೆ ಅವರು ಯಾವುದೇ ದೇಶವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಗಡಿಪಾರು ಆದೇಶಕ್ಕೆ ಒಳಗಾದವರಲ್ಲ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿ, ಕುಟುಂಬದವರಿಗೆ ಸಮಾಧಾನ ಹೇಳಿದರು.
ಸಾರ್ವಜನಿಕ ಜೀವನದಲ್ಲಿ ಹಾಗೂ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವ್ಯಕ್ತಿಗಳ ಬದುಕಿನಲ್ಲಿ ಇಂತಹ ಸವಾಲಿನ ಸಂದರ್ಭಗಳು ಎದುರಾಗಬಹುದು. ಆದರೆ ಇಂತಹ ಬೆಳವಣಿಗೆಗಳಿಂದ ಕುಟುಂಬದವರು ಧೈರ್ಯ ಕಳೆದುಕೊಳ್ಳಬಾರದು. ನರಸಿಂಹ ಮಾಣಿಯವರ ತಾಯಿ ಹಾಗೂ ತಂಗಿ ಯಾವುದೇ ಆತಂಕಕ್ಕೆ ಒಳಗಾಗದೆ ಧೈರ್ಯದಿಂದ ಇರಬೇಕು ಎಂದು ತಿಳಿಸಿದರು.
ನರಸಿಂಹ ಮಾಣಿಯವರ ಗಡಿಪಾರು ಆದೇಶದ ಬೆಳವಣಿಗೆಯು ಅವರ ಕುಟುಂಬದವರಲ್ಲಿ ಸಹಜವಾಗಿಯೇ ಆತಂಕ ಮೂಡಿಸಿದ್ದು, ಈ ಸಂದರ್ಭದಲ್ಲಿ ಜನಪ್ರತಿನಿಧಿಯಾಗಿ ಮನೆಗೆ ಭೇಟಿ ನೀಡಿ ಕುಟುಂಬದವರೊಂದಿಗೆ ಮಾತನಾಡಿ ಧೈರ್ಯ ತುಂಬಿರುವುದು ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ಪ್ರಾಂತ ಕಾರ್ಯಕಾರಿಣಿ ಸದಸ್ಯ ಪ್ರಶಾಂತ್ ಕೆಂಪುಗುಡ್ಡ, ಸುಬ್ರಮಣ್ಯ ದೇವಸ್ಥಾನ ಮಾಜಿ ಟ್ರಸ್ಟಿ ಪ್ರಸನ್ನ ದರ್ಬೆ ಯುವ ಉದ್ಯಮಿ ಸಹಜ್ ರೈ ,ಹಿಂದೂ ಜಾಗರಣ ವೇದಿಕೆಯ ಮುಖಂಡ ಅಜಿತ್ ರೈ ಹೊಸಮನೆ ಸೇರಿದಂತೆ ಸಂಘಟನೆಯ ಪ್ರಮುಖರು ಹಾಗೂ ನೂರಾರು ಕಾರ್ಯತರು ಉಪಸ್ಥಿತರಿದ್ದರು.