ಮಂಗಳೂರು ಸಂಪುಟ ಸಭೆಯಲ್ಲಿ ಘೋಷಿಸಿದ ಅನುದಾನ ಇನ್ನೂ ಬಂದಿಲ್ಲ -ಆಮ್ ಆದ್ಮಿ ಪಕ್ಷ ಆಕ್ರೋಶ

0
7

ಉಡುಪಿ: ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಘೋಷಣೆ ಮಾಡಲಾದ ಅನುದಾನ ಇನ್ನೂ ಬಿಡುಗಡೆಯಾಗಿಲ್ಲ. ಉಡುಪಿ ಜಿಲ್ಲೆಗೆ ಯಾವುದೇ ಅನುದಾನ ದೊರೆತಿಲ್ಲ ಎಂದು ಆಮ್ ಆದ್ಮಿ ಪಕ್ಷದ ಮುಖಂಡ ವಿವೇಕಾನಂದ ಸಾಲಿನ್ಸ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅವಕಾಶಗಳಿವೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಹೇಳುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಪೂರಕವಾದ ವಾತಾವರಣ ಇಲ್ಲವಾಗಿದೆ. ಪ್ರವಾಸೋದ್ಯಮ ಇಲಾಖೆಯಿಂದ ಅನುಮತಿ ಪಡೆಯಲು ಹಲವು ಇಲಾಖೆಗಳ ಕ್ಲಿಯರೆನ್ಸ್ ಪಡೆಯಬೇಕಿದ್ದು, ಇದಕ್ಕಾಗಿ ತಿಂಗಳುಗಟ್ಟಲೆ ಸರಕಾರಿ ಕಚೇರಿಗಳಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಸರಕಾರಿ ಕಚೇರಿಗಳಲ್ಲಿ ಲಂಚ ನೀಡದೆ ಕೆಲಸಗಳು ನಡೆಯುತ್ತಿಲ್ಲ. ಕಂದಾಯ ಇಲಾಖೆಯಲ್ಲಿಯೂ ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ ಕಚೇರಿಗಳಿಗೆ ಅಲೆದಾಡಬೇಕಾದ ಸ್ಥಿತಿ ಇದೆ. ಇಂತಹ ಆಡಳಿತಾತ್ಮಕ ಸಮಸ್ಯೆಗಳಿಂದಾಗಿ ಜಿಲ್ಲೆಯ ಅಭಿವೃದ್ಧಿಗೆ ಹಿನ್ನಡೆಯಾಗುತ್ತಿದೆ ಎಂದು ಅವರು ದೂರಿದ್ದಾರೆ.
ಈ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಅವರು ಗಂಭೀರವಾಗಿ ಗಮನಹರಿಸಬೇಕು. ಜಿಲ್ಲಾಧಿಕಾರಿಗಳೂ ಸಹ ಸರಕಾರಿ ಕಚೇರಿಗಳಲ್ಲಿನ ವಿಳಂಬ ಹಾಗೂ ಭ್ರಷ್ಟಾಚಾರದ ಆರೋಪಗಳನ್ನು ಪರಿಶೀಲಿಸಿ, ಸಾರ್ವಜನಿಕರ ಕೆಲಸಗಳು ಸುಗಮವಾಗಿ ನಡೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ವಿವೇಕಾನಂದ ಸಾಲಿನ್ಸ್ ಒತ್ತಾಯಿಸಿದ್ದಾರೆ.