ನ.22ರಿಂದ ಮಂಗಳೂರಿನಲ್ಲಿ 7 ದಿನಗಳ ಯಕ್ಷಗಾನ ತಾಳಮದ್ದಳೆ ಸಪ್ತಾಹ: 14ನೇ ವರ್ಷದ ನುಡಿಹಬ್ಬದಲ್ಲಿ ಗಣ್ಯರಿಗೆ ಪ್ರಶಸ್ತಿ ಪ್ರದಾನ

0
5

ಮಂಗಳೂರು: ‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ–ಮಂಥನ ಮತ್ತು ಪ್ರದರ್ಶನ ವೇದಿಕೆಯ ವತಿಯಿಂದ 14ನೇ ವರ್ಷದ ನುಡಿಹಬ್ಬ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2026’ ನವೆಂಬರ್ 22ರಿಂದ 28ರವರೆಗೆ ಮಂಗಳೂರಿನ ಹಂಪನಕಟ್ಟೆಯ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಲಿದೆ.

ಮಂಗಳೂರು ವಿಶ್ವವಿದ್ಯಾನಿಲಯದ ಡಾ. ದಯಾನಂದ ಪೈ ಮತ್ತು ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಹಾಗೂ ಕರ್ನಾಟಕ ಯಕ್ಷಭಾರತಿ ಪುತ್ತೂರು ಇವರ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಆಯೋಜಿಸಲಾಗುತ್ತಿರುವ ಈ ಬಾರಿಯ ಸಪ್ತಾಹಕ್ಕೆ ‘ಸಂಘಟನಾಪರ್ವ’ ಎಂದು ಹೆಸರಿಡಲಾಗಿದೆ. ಜಿಲ್ಲೆಯ ವಿವಿಧ ಯಕ್ಷಗಾನ ಸಂಘಗಳ ಸಹಕಾರದೊಂದಿಗೆ ಏಳು ದಿನಗಳ ಕಾಲ ವೈವಿಧ್ಯಮಯ ತಾಳಮದ್ದಳೆ ಕಾರ್ಯಕ್ರಮಗಳು ನಡೆಯಲಿವೆ.

ನ.22ರಂದು ಉದ್ಘಾಟನೆ

ನವೆಂಬರ್ 22ರಂದು ಅಪರಾಹ್ನ 2 ಗಂಟೆಗೆ ಉದ್ಯಮಿ ಎ.ಕೆ. ಜಯರಾಮ ಶೇಖ ಅವರಿಂದ ನಾಂದಿ ದೀಪೋಜ್ವಲನ ನಡೆಯಲಿದ್ದು, ‘ಬಂಗಾರ್ದ ಉರೆ’ ತುಳು ತಾಳಮದ್ದಳೆಯೊಂದಿಗೆ ಸಪ್ತಾಹಕ್ಕೆ ಚಾಲನೆ ದೊರೆಯಲಿದೆ.

ಅಂದು ಸಂಜೆ 4.30ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಯಕ್ಷಾಂಗಣದ ಗೌರವಾಧ್ಯಕ್ಷ ಡಾ. ಎ.ಜೆ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ.ಎಲ್. ಧರ್ಮ ಸಪ್ತಾಹ ಉದ್ಘಾಟಿಸಲಿದ್ದಾರೆ.

ಸಮಾರಂಭದಲ್ಲಿ ಮುಂಬೈಯ ಉದ್ಯಮಿ, ಕಲಾಪೋಷಕ ಹಾಗೂ ಬಜ್ಪೆ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ ಎಲ್. ಶೆಟ್ಟಿ ಥಾಣೆ ಅವರಿಗೆ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ನೀಡಿ ಗೌರವಿಸಲಾಗುವುದು. ಭಾರತೀಯ ಸೇನೆಯ ನಿವೃತ್ತ ಸೇನಾನಿ ಕ್ಯಾಪ್ಟನ್ ಶರತ್ ಭಂಡಾರಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಏಳು ದಿನ ಏಳು ವಿಭಿನ್ನ ತಾಳಮದ್ದಳೆ ಪ್ರಸಂಗಗಳು

ನವೆಂಬರ್ 22ರಂದು ಸಂಜೆ 5.30ಕ್ಕೆ ಶ್ರೀ ಕಾಳಿಕಾಂಬಾ ಯಕ್ಷ ಕಲಾ ಪ್ರತಿಷ್ಠಾನ ಉಪ್ಪಿನಂಗಡಿ ವತಿಯಿಂದ ‘ಚಂದ್ರವಂಶೋದಯ’ ತಾಳಮದ್ದಳೆ ನಡೆಯಲಿದೆ.

ನವೆಂಬರ್ 23ರಿಂದ 28ರವರೆಗೆ ಪ್ರತಿದಿನ ಸಂಜೆ 4 ಗಂಟೆಗೆ ವಿವಿಧ ಯಕ್ಷಗಾನ ತಂಡಗಳ ಸಂಯೋಜನೆಯಲ್ಲಿ ತಾಳಮದ್ದಳೆಗಳು ನಡೆಯಲಿವೆ.

  • ನ.23: ಹವ್ಯಾಸಿ ಬಳಗ ಕದ್ರಿ – ‘ರಾಜಾ ಸೌದಾಸ’
  • ನ.24: ಶ್ರೀ ವಾಣೀ ವಿಲಾಸ ಯಕ್ಷಗಾನ ಬಳಗ, ಶಿರಂಕಲ್ಲು ಕಟೀಲು – ‘ಭಾರ್ಗವರಾಮ’
  • ನ.25: ಅಂಬುರುಹ ಯಕ್ಷಸದನ ಪ್ರತಿಷ್ಠಾನ, ಬೊಟ್ಟಿಕೆರೆ – ‘ವಿಷ್ಣು ಮಾಯೆ’
  • ನ.26: ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘ, ಕೂಡ್ಲು ಕಾಸರಗೋಡು – ‘ಶಲ್ಯ ಸಾರಥ್ಯ’
  • ನ.27: ಶ್ರೀ ಸುಬ್ರಹ್ಮಣ್ಯ ಯಕ್ಷ ಬಳಗ, ಸೂಡ – ‘ದಾನಕೋಟಿ ದಾಮಾಜಿ’ (ತುಳು)
  • ನ.28: ಕರ್ನಾಟಕ ಯಕ್ಷಭಾರತಿ ಪುತ್ತೂರು – ‘ರಾಜಾ ಯಯಾತಿ’

ಡಾ. ಸದಾಶಿವ ಭಟ್ ಅವರಿಗೆ ಯಕ್ಷಾಂಗಣ ಗೌರವ ಪ್ರಶಸ್ತಿ

ನವೆಂಬರ್ 28ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಅಹಮದ್‌ನಗರದ ಉದ್ಯಮಿ ಹಾಗೂ ಮುಂಡಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಕೆ.ಕೆ. ಶೆಟ್ಟಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ದೀಪ ಪ್ರಜ್ವಲನೆ ಮಾಡಲಿದ್ದಾರೆ.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ಅವರು 94 ವರ್ಷದ ಬಹುಶ್ರುತ ವಿದ್ವಾಂಸ ಹಾಗೂ ಬಹುಭಾಷಾ ಪ್ರಸಂಗಕರ್ತ ಡಾ. ಡಿ. ಸದಾಶಿವ ಭಟ್ ಪಳ್ಳು ಅವರಿಗೆ 2026ನೇ ಸಾಲಿನ ‘ಯಕ್ಷಾಂಗಣ ಗೌರವ ಪ್ರಶಸ್ತಿ’ ಪ್ರದಾನ ಮಾಡಲಿದ್ದಾರೆ.

ಹಿರಿಯ ಯಕ್ಷಗಾನ ಸಾಧಕರ ಸ್ಮರಣೆ, ಕಲಾವಿದರಿಗೆ ಗೌರವ

ಸಪ್ತಾಹದ ಏಳು ದಿನಗಳಲ್ಲೂ ಯಕ್ಷಗಾನ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡಿದ ಕೀರ್ತಿಶೇಷ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ, ಪಳ್ಳಿ ರಮಾನಾಥ ಹೆಗ್ಡೆ, ವಿದ್ವಾನ್ ಕೆ. ಕಾಂತರೈ ಮೂಡುಬಿದಿರೆ, ಎ.ಕೆ. ನಾರಾಯಣ ಶೆಟ್ಟಿ, ಎ.ಕೆ. ಮಹಾಬಲ ಶೆಟ್ಟಿ ಫರಂಗಿಪೇಟೆ, ಕೆ. ಗೋವಿಂದ ಭಟ್ ಸೂರಿಕುಮೇರು ಹಾಗೂ ಶಂಭು ಶರ್ಮ ವಿಟ್ಲ ಅವರ ಸಂಸ್ಮರಣೆ ನಡೆಯಲಿದೆ.

ಹಿರಿಯ ಯಕ್ಷಗಾನ ಕಲಾವಿದ ಹಾಗೂ ಪ್ರಸಂಗಕರ್ತ ಡಾ. ತಾರಾನಾಥ ವರ್ಕಾಡಿ ಅವರಿಗೆ ಹಾಸ್ಯಪಟು ದಿ. ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸ್ಮೃತಿಗೌರವ ನೀಡಲಾಗುವುದು.

ಸಪ್ತಾಹದ ಎಲ್ಲ ಕಾರ್ಯಕ್ರಮಗಳಿಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ ಎಂದು ಯಕ್ಷಾಂಗಣದ ಕಾರ್ಯಾಧ್ಯಕ್ಷ ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಯಕ್ಷಾಂಗಣದ ಉಪಾಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ, ಪ್ರಧಾನ ಸಂಚಾಲಕ ರವೀಂದ್ರ ರೈ ಕಲ್ಲಿಮಾರು, ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್, ಕಾರ್ಯದರ್ಶಿಗಳಾದ ಕೆ. ಲಕ್ಷ್ಮೀನಾರಾಯಣ ರೈ ಹರೇಕಳ ಮತ್ತು ಸುಮಾ ಪ್ರಸಾದ್ ಉಪಸ್ಥಿತರಿದ್ದರು.