ಚಿಕ್ಕಮಗಳೂರು : ಕರ್ತವ್ಯನಿಷ್ಠೆ ಮತ್ತು ಸಮಯಪ್ರಜ್ಞೆಗೆ ಸಾಕ್ಷಿಯಾಗುವ ಹೃದಯವಿದ್ರಾವಕ ಘಟನೆಯೊಂದು ಕೊಪ್ಪ ತಾಲೂಕಿನಲ್ಲಿ ನಡೆದಿದೆ. ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ವೇಳೆ ತೀವ್ರ ಹೃದಯಾಘಾತಕ್ಕೆ ಒಳಗಾದ 65 ವರ್ಷದ ಬಸ್ ಚಾಲಕರೊಬ್ಬರು, ತಮ್ಮ ಕೊನೆಯ ಕ್ಷಣದಲ್ಲೂ ಧೈರ್ಯ ಹಾಗೂ ಸಮಯಪ್ರಜ್ಞೆ ಮೆರೆದು ಬಸ್ಸಿನಲ್ಲಿದ್ದ ವಿದ್ಯಾರ್ಥಿಗಳ ಜೀವ ಉಳಿಸಿ ಮೃತಪಟ್ಟಿದ್ದಾರೆ.
ಮೃತರನ್ನು ತೀರ್ಥಹಳ್ಳಿ ತಾಲೂಕಿನ ಬಸವಾನಿ ನಿವಾಸಿ ಲಕ್ಷ್ಮಣ (65) ಎಂದು ಗುರುತಿಸಲಾಗಿದೆ.
ಕೊಪ್ಪ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 169ರ ಅಮ್ಮಡಿ ಗ್ರಾಮದ ಸಮೀಪ ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದಾಗ ಲಕ್ಷ್ಮಣ ಅವರಿಗೆ ಏಕಾಏಕಿ ತೀವ್ರ ಎದೆನೋವು ಕಾಣಿಸಿಕೊಂಡಿದೆ. ತಮಗೆ ಹೃದಯಾಘಾತವಾಗುತ್ತಿರುವುದನ್ನು ಅರಿತ ಅವರು, ತಾವು ಪ್ರಜ್ಞೆ ಕಳೆದುಕೊಂಡರೆ ಬಸ್ ನಿಯಂತ್ರಣ ತಪ್ಪಿ ಭಾರೀ ಅಪಘಾತ ಸಂಭವಿಸಬಹುದು ಎಂಬುದನ್ನು ಗ್ರಹಿಸಿದ್ದಾರೆ.
ತಕ್ಷಣವೇ ಕಾರ್ಯಪ್ರವೃತ್ತರಾದ ಅವರು, ಬಸ್ಸನ್ನು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆಸಿ ನಿಲ್ಲಿಸಿದ್ದಾರೆ. ಇದರಿಂದ ಬಸ್ಸು ನಿಯಂತ್ರಣ ತಪ್ಪಿ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ. ಬಸ್ಸನ್ನು ಸುರಕ್ಷಿತವಾಗಿ ನಿಲ್ಲಿಸಿದ ಬಳಿಕ ಚಾಲಕನ ಸೀಟಿನಲ್ಲೇ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ.
ಮಕ್ಕಳಿಗೆ ಸಣ್ಣಪುಟ್ಟ ಗಾಯ, ಪ್ರಾಣಾಪಾಯದಿಂದ ಪಾರು
ಲಕ್ಷ್ಮಣ ಅವರ ಸಮಯಪ್ರಜ್ಞೆಯಿಂದಾಗಿ ಬಸ್ಸಿನಲ್ಲಿದ್ದ ನೂರಾರು ವಿದ್ಯಾರ್ಥಿಗಳ ಜೀವ ಉಳಿದಿದೆ. ಘಟನೆಯಲ್ಲಿ ಕೆಲವು ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಅವರನ್ನು ಕೊಪ್ಪ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಎಲ್ಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.
ವಿಷಯ ತಿಳಿಯುತ್ತಿದ್ದಂತೆ ಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಮ್ಮ ಪ್ರಾಣವೇ ಅಪಾಯದಲ್ಲಿದ್ದರೂ ಬಸ್ಸಿನಲ್ಲಿದ್ದ ಮಕ್ಕಳ ಸುರಕ್ಷತೆಗೆ ಮೊದಲ ಆದ್ಯತೆ ನೀಡಿ ಕರ್ತವ್ಯ ಮೆರೆದ ಲಕ್ಷ್ಮಣ ಅವರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

