ಜಾಲ್ಸೂರಿನಲ್ಲಿ 70ನೇ ವರ್ಷದ ಕನ್ನಡ ರಾಜ್ಯೋತ್ಸವ ಸಂಭ್ರಮ : 14 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

0
7

ಪುತ್ತೂರು : ಆದಿ ದ್ರಾವಿಡ ಸಮಾಜ ಸೇವಾ ಸಂಘ (ರಿ.) ಸುಳ್ಯ ಘಟಕದ ಆಶ್ರಯದಲ್ಲಿ, ಸ್ವರ ಸಂಗಮ ಪಂಜಿಕ್ಕಲ್ಲು ಇವರ ಸಹಕಾರದೊಂದಿಗೆ ಹಾಗೂ ಆರ್.ಪಿ. ಕಲಾ ಸೇವಾ ಟ್ರಸ್ಟ್ (ರಿ.) ಪಾಂಬಾರು ಇದರ ನೇತೃತ್ವದಲ್ಲಿ 70ನೇ ವರ್ಷದ ಕನ್ನಡ ರಾಜ್ಯೋತ್ಸವ ಸಂಭ್ರಮ-2026 ಕಾರ್ಯಕ್ರಮವು ನವೆಂಬರ್ 22ರಂದು ಜಾಲ್ಸೂರಿನ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಗೀತಗಾಯನ, ನೃತ್ಯರೂಪಕ, ಸಾಹಿತ್ಯ ಕವಿಗೋಷ್ಠಿ, ಸಾಧಕರಿಗೆ ಸನ್ಮಾನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭಗಳು ಜರುಗಿದವು.

ಬೆಳಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಬಂಗ್ಲಗುಡ್ಡೆ ಕಾವು ಶ್ರೀ ಮಾರಿಯಮ್ಮ ದೇವಿ ಕ್ಷೇತ್ರದ ಧರ್ಮದರ್ಶಿ ಚಂದ್ರ ಕಾವು ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಆರ್.ಪಿ. ಕಲಾ ಸೇವಾ ಟ್ರಸ್ಟ್‌ನ ಜಂಟಿ ಕಾರ್ಯದರ್ಶಿ ವಸಂತಿ ಎಣ್ಮೂರು ಸ್ವಾಗತಿಸಿದರು. ಲಾವಣ್ಯ ಮತ್ತು ಸಹನ್ಯ ಎಣ್ಮೂರು ಪ್ರಾರ್ಥಿಸಿದರು.

ಆದಿ ದ್ರಾವಿಡ ಸಮಾಜ ಸೇವಾ ಸಂಘದ ಸುಳ್ಯ ಘಟಕದ ಅಧ್ಯಕ್ಷ ಬಾಲಕೃಷ್ಣ ದೊಡ್ಡೇರಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ಸುಳ್ಯ ಘಟಕದ ಅಧ್ಯಕ್ಷ ಚಂದ್ರಶೇಖರ ಪೆರಾಲು ಆಶಯ ಭಾಷಣ ಮಾಡಿದರು.

ಆದಿ ದ್ರಾವಿಡ ಸಮಾಜ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಬಾಬು ಕೆ.ಎಂ., ಜೆಸಿಐ ಬೆಳ್ಳಾರೆಯ ಅಧ್ಯಕ್ಷೆ ಹಾಗೂ ಕವಯಿತ್ರಿ ಪೂರ್ಣಿಮಾ ಪೆರ್ಲಂಪಾಡಿ, ಪುತ್ತೂರು ಸಾಮಾಜಿಕ ಅರಣ್ಯ ವಲಯದ ಅರಣ್ಯ ವೀಕ್ಷಕ ವಿಶ್ವನಾಥ್ ಪುಂಚತ್ತಾರು ಹಾಗೂ ರಂಗಭೂಮಿ ಕಲಾವಿದ ಮತ್ತು ಗಾಯಕ ದೀಪಕ್ ಪೈ ಉಪ್ಪಿನಂಗಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಆರ್.ಪಿ. ಕಲಾ ಸೇವಾ ಟ್ರಸ್ಟ್‌ನ ಉಪಾಧ್ಯಕ್ಷ ರೋಹಿತ್ ಕುರಿಕ್ಕಾರ್ ವಂದಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಆರ್.ಪಿ. ಕಲಾ ಸೇವಾ ಟ್ರಸ್ಟ್‌ನ ಅಧ್ಯಕ್ಷ ಶ್ರೀಧರ್ ಎಕ್ಕಡ್ಕ ಅಧ್ಯಕ್ಷತೆ ವಹಿಸಿದ್ದರು. ಟ್ರಸ್ಟ್‌ನ ಸಂಚಾಲಕ ರವಿ ಪಾಂಬಾರು ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು. ಸಂಯೋಜಕಿ ಪವಿತ್ರ ಎಂ. ಬೆಳ್ಳಿಪ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಕಾರ್ಯಕ್ರಮ ನಿರೂಪಿಸಿದರು.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ 2026ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಡಿ.ವಿ. ಸುರೇಶ್ ದೇವರಗುಂಡ, ಪದ್ಮರಾಜ್ ಬಿ.ಸಿ. ಚಾರ್ವಾಕ, ಪೂರ್ಣಿಮಾ ಪಿ. ಪೆರ್ಲಂಪಾಡಿ, ರವಿ ಪುತ್ತೂರು, ಮೆಲಿಷ ನಿಶಾಲ್, ಕೆ. ನಿರಂಜನ್ ರಾವ್, ಕೃಷ್ಣ ಬುಳೇರಿಕಟ್ಟೆ, ರಾಜ ಸಾಬ್ ದೊಡ್ಮನಿ, ವಿಷ್ಮ ಏಕತಡ್ಕ ಅಜ್ಜಿಕಲ್ಲು, ಸುರೇಶ್ ಚಾರ್ವಾಕ, ಸದಾನಂದ ಪಡುಬಿದ್ರಿ, ದೀಪಕ್ ಪೈ ಉಪ್ಪಿನಂಗಡಿ, ಡಾ. ಸಚಿನ್ ಸಾಲ್ಯಾನ್ ಹಾಗೂ ಸಂದೇಶ್ ನಾಯಕ್ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.

ಸಮಾರೋಪ ಸಮಾರಂಭದಲ್ಲಿ ಮಾಜಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಕಡಬ, ರೈಲ್ವೆಯ ಹಿರಿಯ ಸ್ಟೇಷನ್ ಅಧೀಕ್ಷಕ ಡಿ.ವಿ. ಸುರೇಶ್ ದೇವರಗುಂಡ, ಉದ್ಯಮಿ ಹಾಗೂ ಗಾಯಕ ಕೆ. ನಿರಂಜನ್ ರಾವ್, ಚಲನಚಿತ್ರ ನಿರ್ದೇಶಕ, ನಿರೂಪಕ ಹಾಗೂ ಗಾಯಕ ಪದ್ಮರಾಜ್ ಬಿ.ಸಿ. ಚಾರ್ವಾಕ, ಕೆಎಸ್‌ಆರ್‌ಟಿಸಿ ನಿರ್ವಾಹಕ ರಾಜ ಸಾಬ್ ದೊಡ್ಮನಿ, ಕುಶಲಕರ್ಮಿ ಶಿವಾನಂದ ಪಡುಬಿದ್ರಿ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಜಾನಪದ ಕಲಾವಿದ ಮತ್ತು ರಾಜ್ಯ ಹಾಗೂ ರಾಷ್ಟ್ರಮಟ್ಟದ ತೀರ್ಪುಗಾರ ಡಾ. ಸಚಿನ್ ಸಾಲ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಅಧ್ಯಕ್ಷರು ಹಾಗೂ ಅತಿಥಿಗಳು ಸಭೆಯನ್ನುದ್ದೇಶಿಸಿ ಮಾತನಾಡಿದರು.

ಸಾಹಿತ್ಯ ಕವಿಗೋಷ್ಠಿಯಲ್ಲಿ ಗಿರೀಶ್ ಪೆರಿಯಡ್ಕ, ಸುರೇಶ್ ಕುಮಾರ್ ಚಾರ್ವಾಕ, ಪೂರ್ಣಿಮಾ ಪೆರ್ಲಂಪಾಡಿ ಹಾಗೂ ಎಂ.ಎ. ಮುಸ್ತಫಾ ಬೆಳ್ಳಾರೆ ಕವನ ವಾಚಿಸಿದರು.

ಗೀತಗಾಯನ ಕಾರ್ಯಕ್ರಮದಲ್ಲಿ ಸ್ಪರ್ಧಾ ಕಾರ್ಲಪ್ಪಾಡಿ, ಜಿಷಾ ಪಿ. ರಾವ್ ನೆಹರೂ ನಗರ, ಗೀತಾ ಕೊಕ್ಕಡ, ಚೈತ್ರಾ ಗದಗ, ಹೇಮಲತಾ ಸಂಪ್ಯ, ಮಹೇಶ್ ಉಬರಡ್ಕ, ಪಲ್ಲವಿ ಸುಳ್ಯ ಹಾಗೂ ಉಮೇಶ್ ಬೆಟ್ಟಂಪಾಡಿ ಗಾಯನ ಪ್ರಸ್ತುತಪಡಿಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲ ಕಲಾವಿದರಿಗೆ ಹಿರಿಯರ ಸಮ್ಮುಖದಲ್ಲಿ ಪ್ರಶಂಸನಾ ಪತ್ರ ನೀಡಿ ಗೌರವಿಸಲಾಯಿತು.

ಆರ್.ಪಿ. ಕಲಾ ಸೇವಾ ಟ್ರಸ್ಟ್‌ನ ಕೋಶಾಧಿಕಾರಿ ಸನತ್ ಕೆ. ಬೆಳ್ಳಾರೆ ವಂದಿಸಿದರು. ಕನ್ನಡ ನಾಡು, ನುಡಿ, ಸಾಹಿತ್ಯ ಹಾಗೂ ಕಲಾ ಪರಂಪರೆಯನ್ನು ಬಿಂಬಿಸುವ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ರಾಜ್ಯೋತ್ಸವ ಸಂಭ್ರಮ ಅರ್ಥಪೂರ್ಣವಾಗಿ ನಡೆಯಿತು.