ಮಂಗಳೂರು : ಕುಟುಂಬಕ್ಕೆ ಆಸರೆಯಾಗಬೇಕು, ಉತ್ತಮ ಉದ್ಯೋಗ ಪಡೆದು ಹೆತ್ತವರ ಕನಸನ್ನು ನನಸು ಮಾಡಬೇಕು ಎಂಬ ಆಶಯ ಹೊಂದಿದ್ದ 19ರ ಹರೆಯದ ನರ್ಸಿಂಗ್ ವಿದ್ಯಾರ್ಥಿನಿ ಜ್ಯೋತಿ ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಈ ದುರ್ಘಟನೆಯಿಂದ ಕುಟುಂಬದಲ್ಲಿ ಶೋಕದ ಛಾಯೆ ಆವರಿಸಿದೆ.
ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಜಿಎನ್ಎಂ ನರ್ಸಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದ ಜ್ಯೋತಿ, ಭವಿಷ್ಯದಲ್ಲಿ ಉದ್ಯೋಗ ಪಡೆದು ಕುಟುಂಬಕ್ಕೆ ನೆರವಾಗುವ ಕನಸು ಕಂಡಿದ್ದರು. ಆದರೆ ವಿಧಿಯಾಟಕ್ಕೆ ಆಕೆಯ ಬದುಕಿನ ಕನಸುಗಳು ನನಸಾಗುವ ಮುನ್ನವೇ ಜೀವನದ ಪಯಣ ಅಂತ್ಯಗೊಂಡಿದೆ.
ನವೆಂಬರ್ 14ರಂದು ಬೆಳಿಗ್ಗೆ ರಾಷ್ಟ್ರೀಯ ಹೆದ್ದಾರಿ 66ರ ಪಂಪ್ವೆಲ್ ಸಮೀಪದ ಉದ್ಯೋಡಿ ಗೋರಿಗುಡ್ಡ ಬಳಿ ಜ್ಯೋತಿ ಹಾಗೂ ಅವರ ಸಂಬಂಧಿ ನಂದಿನಿ (19) ರಸ್ತೆ ವಿಭಜಕವನ್ನು ದಾಟಿ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ತೊಕ್ಕೊಟ್ಟು ಕಡೆಯಿಂದ ನಂತೂರು ಕಡೆಗೆ ವೇಗವಾಗಿ ಬರುತ್ತಿದ್ದ ಬೈಕ್ ಇಬ್ಬರಿಗೂ ಡಿಕ್ಕಿ ಹೊಡೆದಿದೆ.
ಅಪಘಾತದ ತೀವ್ರತೆಗೆ ಜ್ಯೋತಿ ಮತ್ತು ನಂದಿನಿ ಗಂಭೀರವಾಗಿ ಗಾಯಗೊಂಡಿದ್ದು, ಬೈಕ್ ಸವಾರರಿಗೂ ಗಾಯಗಳಾಗಿದ್ದವು. ತಕ್ಷಣ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಗಂಭೀರ ಸ್ಥಿತಿಯಲ್ಲಿದ್ದ ಜ್ಯೋತಿ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರು. ಆದರೆ ವೈದ್ಯರ ಸತತ ಪ್ರಯತ್ನದ ನಡುವೆಯೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಕುಟುಂಬದ ಭವಿಷ್ಯಕ್ಕೆ ಆಸರೆಯಾಗಬೇಕಿದ್ದ ಮಗಳು ಅಕಾಲಿಕವಾಗಿ ಅಗಲಿರುವುದು ಕುಟುಂಬಸ್ಥರು ಹಾಗೂ ಆಪ್ತರಲ್ಲಿ ತೀವ್ರ ದುಃಖ ಮೂಡಿಸಿದೆ. ಇನ್ನೂ ಬಾಳಬೇಕಿದ್ದ ಯುವತಿಯ ಬದುಕು ರಸ್ತೆ ಅಪಘಾತದಲ್ಲಿ ದುರಂತ ಅಂತ್ಯ ಕಂಡಿರುವುದು ಎಲ್ಲರ ಮನಕಲಕಿದೆ.

