ಉಡುಪಿಯಲ್ಲಿ ಸೈಬರ್ ವಂಚಕರ ಹಾವಳಿ ಹೆಚ್ಚಳ : ಹಿರಿಯ ನಾಗರಿಕರೇ ಟಾರ್ಗೆಟ್!

0
14

ಉಡುಪಿ : ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಉಡುಪಿ ಜಿಲ್ಲೆಯಲ್ಲಿ ಕಳೆದ ಐದು ವರ್ಷಗಳಿಂದ ಸೈಬರ್ ವಂಚನೆ ಪ್ರಕರಣಗಳು ಆತಂಕಕಾರಿಯಾಗಿ ಹೆಚ್ಚುತ್ತಿವೆ. ವಿಶೇಷವಾಗಿ ಹಿರಿಯ ನಾಗರಿಕರು ಸೈಬರ್ ವಂಚಕರ ಸುಲಭ ಗುರಿಯಾಗುತ್ತಿದ್ದು, ನಿವೃತ್ತ ಬ್ಯಾಂಕ್ ಅಧಿಕಾರಿಗಳು ಹಾಗೂ ಉನ್ನತ ಹುದ್ದೆಗಳಿಂದ ನಿವೃತ್ತರಾದವರನ್ನೇ ಗುರಿಯಾಗಿಸಿಕೊಂಡು ಲಕ್ಷಾಂತರ ರೂಪಾಯಿ ಹಣವನ್ನು ದೋಚುತ್ತಿರುವ ಘಟನೆಗಳು ವರದಿಯಾಗುತ್ತಿವೆ.

ವಂಚಕರು ನಾನಾ ತಂತ್ರಗಳನ್ನು ಬಳಸಿ ಜನರನ್ನು ಬಲೆಗೆ ಬೀಳಿಸುತ್ತಿದ್ದಾರೆ. ನಕಲಿ ಲಿಂಕ್‌ಗಳನ್ನು ಕಳುಹಿಸುವುದು, ಗಿಫ್ಟ್ ಹ್ಯಾಂಪರ್‌ಗಳ ಆಮಿಷವೊಡ್ಡುವುದು ಸೇರಿದಂತೆ ವಿವಿಧ ವಿಧಾನಗಳ ಮೂಲಕ ಮೊಬೈಲ್ ಬಳಕೆದಾರರನ್ನು ವಂಚಿಸುತ್ತಿದ್ದಾರೆ. ಕೆಲವೊಮ್ಮೆ ಕ್ಷಣಮಾತ್ರದ ಅಜಾಗರೂಕತೆಯಿಂದ ಲಿಂಕ್ ತೆರೆದರೂ ಬ್ಯಾಂಕ್ ಖಾತೆಯಲ್ಲಿರುವ ಹಣ ಕಳೆದುಕೊಳ್ಳುವ ಅಪಾಯ ಎದುರಾಗುತ್ತಿದೆ.

ಸೈಬರ್ ವಂಚನೆ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಈಗಾಗಲೇ ವಿವಿಧ ಕಾರ್ಯಾಗಾರಗಳು ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. ಆದರೂ ಪ್ರಕರಣಗಳ ಸಂಖ್ಯೆ ಕಡಿಮೆಯಾಗದಿರುವುದು ಪೊಲೀಸ್ ಇಲಾಖೆಗೆ ಸವಾಲಾಗಿ ಪರಿಣಮಿಸಿದೆ.

ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹೊಸ ಯೋಜನೆ ರೂಪಿಸಿದ್ದಾರೆ. ಹಿರಿಯ ನಾಗರಿಕರ ಮನೆಗಳಿಗೆ ನೇರವಾಗಿ ಭೇಟಿ ನೀಡಿ ಸೈಬರ್ ವಂಚನೆಯ ವಿಧಾನಗಳ ಕುರಿತು ಮಾಹಿತಿ ನೀಡುವುದು, ಮೊಬೈಲ್ ಬಳಕೆಯಲ್ಲಿ ವಹಿಸಬೇಕಾದ ಎಚ್ಚರಿಕೆಗಳ ಬಗ್ಗೆ ತಿಳಿಸುವುದು ಹಾಗೂ ವಂಚಕರ ಜಾಲಕ್ಕೆ ಸಿಲುಕದಂತೆ ಜಾಗೃತಿ ಮೂಡಿಸುವುದು ಈ ಯೋಜನೆಯ ಉದ್ದೇಶವಾಗಿದೆ.

ಸೈಬರ್ ಸುರಕ್ಷತೆಗೆ ಹಿರಿಯ ನಾಗರಿಕರು ಪಾಲಿಸಬೇಕಾದ ಎಚ್ಚರಿಕೆಗಳು:

  • ಅಪರಿಚಿತರು ಕಳುಹಿಸುವ ಲಿಂಕ್‌ಗಳನ್ನು ತೆರೆಯಬೇಡಿ.
  • ಬ್ಯಾಂಕ್ ವಿವರ, ಒಟಿಪಿ, ಪಿನ್ ಹಾಗೂ ಪಾಸ್‌ವರ್ಡ್‌ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
  • ಉಚಿತ ಉಡುಗೊರೆ, ಬಹುಮಾನ ಹಾಗೂ ಗಿಫ್ಟ್ ಹ್ಯಾಂಪರ್‌ಗಳ ಆಮಿಷಕ್ಕೆ ಒಳಗಾಗಬೇಡಿ.
  • ಅನುಮಾನಾಸ್ಪದ ಕರೆ ಅಥವಾ ಸಂದೇಶ ಬಂದರೆ ತಕ್ಷಣ ಪರಿಶೀಲಿಸಿ.
  • ಸೈಬರ್ ವಂಚನೆಗೆ ಒಳಗಾದರೆ ಕೂಡಲೇ 1930 ಸಹಾಯವಾಣಿಗೆ ಕರೆ ಮಾಡಿ ದೂರು ದಾಖಲಿಸಿ.