ತಾಳಮದ್ದಳೆ ವೇದಿಕೆಯಲ್ಲಿ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸಂಸ್ಮರಣೆ

0
7

ಕಲಾವಿದರು ಅಳಿದರೂ ಉಳಿಯುವುದು ನೆನಪು: ಜೈರಾಜ್ ರೈ

ಮಂಗಳೂರು : ‘ಯಕ್ಷಗಾನ ಕಲೆಯು ಕರಾವಳಿ ಜಿಲ್ಲೆಗಳಲ್ಲಿ ಜನರ ನಾಡಿಮಿಡಿತದೊಂದಿಗೆ ಸೇರಿ ಹೋಗಿದೆ. ಕಲೆಯ ಜೊತೆಗೆ ಕಲಾವಿದರನ್ನು ಪ್ರೀತಿಸುವ ಹೃದಯವಂತಿಕೆ ಇಲ್ಲಿಯವರದ್ದು. ಆದ್ದರಿಂದ ಯಕ್ಷಗಾನ ರಂಗದಲ್ಲಿ ಪ್ರಸಿದ್ಧರಾದ ಹಿರಿಯ ಕಲಾವಿದರು ಅಳಿದು ಹೋದರೂ ಅವರ ನೆನಪು ಶಾಶ್ವತವಾಗಿ ಉಳಿದಿರುತ್ತದೆ’ ಎಂದು ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷ ಜೈರಾಜ್ ಬಿ. ರೈ ಹೇಳಿದ್ದಾರೆ.

ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯಾದ ಯಕ್ಷಾಂಗಣ ಮಂಗಳೂರು ಆಶ್ರಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಡಾ|ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಪುತ್ತೂರಿನ ಕರ್ನಾಟಕ ಯಕ್ಷ ಭಾರತಿ ಸಹಯೋಗದಲ್ಲಿ ನಗರದ ವಿವಿ ಕಾಲೇಜು ರವೀಂದ್ರ ಕಲಾಭವನದಲ್ಲಿ ನಡೆಯುತ್ತಿರುವ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ ‘ಯಕ್ಷಗಾನ ತಾಳಮದ್ದಳೆ ಸಪ್ತಾಹ – 2026’ 14ನೇ ವರ್ಷದ ಕನ್ನಡ ನುಡಿಹಬ್ಬದ ಅಂಗವಾಗಿ 5ನೇ ದಿನ ನ. 26ರಂದು ಯಕ್ಷಗಾನದ ಹಿರಿಯ ಹಾಸ್ಯಪಟು ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಅವರ ಸಂಸ್ಮರಣ ಸಮಾರಂಭದಲ್ಲಿ ಸಂಸ್ಮರಣ ಜ್ಯೋತಿ ಬೆಳಗಿ ಅವರು ಮಾತನಾಡಿದರು.

ಡಾ| ವರ್ಕಾಡಿಯವರಿಗೆ ಸ್ಮೃತಿ ಗೌರವ

ಕಾರ್ಯಕ್ರಮದಲ್ಲಿ ಹಿರಿಯ ಯಕ್ಷಗಾನ ಕಲಾವಿದ ಮತ್ತು ಪ್ರಸಂಗಕರ್ತ ಡಾ|ತಾರಾನಾಥ ವರ್ಕಾಡಿ ಅವರಿಗೆ 2026 ನೇ ಸಾಲಿನ ‘ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಸ್ಮೃತಿ ಪ್ರಶಸ್ತಿ’ಯನ್ನು ಗಣ್ಯರು ಪ್ರದಾನ ಮಾಡಿದರು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ| ತಾರಾನಾಥ ಅವರು ಕದ್ರಿ ಮೇಳದಲ್ಲಿ ಬಾಳಪ್ಪ ಶೆಟ್ಟರ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡು ‘ಗತಿಸಿಹೋದ ಹಿರಿಯ ಕಲಾವಿದರಿಂದ ಯಕ್ಷಗಾನವನ್ನು ಬಳುವಳಿಯಾಗಿ ಪಡೆದ ಇಂದಿನ ತಲೆಮಾರು ಆ ಪರಂಪರೆಯನ್ನು ಉಳಿಸಿ ಬೆಳೆಸಬೇಕಾಗಿದೆ’ ಎಂದರು.

ದೇರಳಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷ ರವೀಂದ್ರ ಶೆಟ್ಟಿ ಉಳಿದೊಟ್ಟು, ಪೂರ್ಣಾನಂದ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಗಣೇಶ್ ಶೆಣೈ, ಕೋಡಿಕಲ್ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಮೊಕ್ತೇಸರ ಮತ್ತು ಕೋಡಿಕಲ್ ಬಂಟರ ಸಂಘದ ಅಧ್ಯಕ್ಷ ಮಹಾಬಲ ಚೌಟ, ಹಿರಿಯ ನ್ಯಾಯವಾದಿ ಹಾಗೂ ಹರಿದಾಸ ದೇವಕೀತನಯ ಕೂಡ್ಲು, ಮಾಜಿ ಮೇಯರ್ ಶಕೀಲಾ ಕಾವ ಮುಖ್ಯ ಅತಿಥಿಗಳಾಗಿದ್ದರು.

ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿಯವರು ಸ್ವಾಗತಿಸಿದರು. ಉಪಾಧ್ಯಕ್ಷ ಹಾಗೂ ಬೆಟ್ಟಂಪಾಡಿ ಬಾಳಪ್ಪ ಶೆಟ್ಟಿ ಯಕ್ಷ ಪ್ರತಿಷ್ಠಾನದ ಅಧ್ಯಕ್ಷ ಎಂ. ಸುಂದರ ಶೆಟ್ಟಿ ಬೆಟ್ಟಂಪಾಡಿ ಪ್ರಾಸ್ತಾವಿಕ ಭಾಷಣ ಮಾಡಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಪ್ರಾರ್ಥನೆ ಹಾಡಿದರು. ಸುಧಾಕರ ರಾವ್ ಪೇಜಾವರ ಕಾರ್ಯಕ್ರಮ ನಿರೂಪಿಸಿ ಸಿದ್ಧಾರ್ಥ ಅಜ್ರಿ ವಂದಿಸಿದರು. ರವೀಂದ್ರ ರೈ ಕಲ್ಲಿಮಾರು,ಕರುಣಾಕರ ಶೆಟ್ಟಿ ಪಣಿಯೂರು, ಲಕ್ಷ್ಮೀನಾರಾಯಣ ರೈ ಹರೇಕಳ, ಸುಮಾ ಪ್ರಸಾದ್ ಉಪಸ್ಥಿತರಿದ್ದರು.

‘ಶಲ್ಯ ಸಾರಥ್ಯ’ ತಾಳಮದ್ದಳೆ

ಸಪ್ತಾಹದ ಚತುರ್ದಶ ಸರಣಿಯ ಐದನೆಯ ಪ್ರಸಂಗ ‘ಶಲ್ಯ ಸಾರಥ್ಯ’ ತಾಳಮದ್ದಳೆಯನ್ನು ಕಾಸರಗೋಡಿನ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದವರು ನಡೆಸಿಕೊಟ್ಟರು. ವಾಸುದೇವ ಕಲ್ಲೂರಾಯ ಮಧೂರು, ಮುರಳೀ ಮಾಧವ ಮಧೂರು ಗೋಪಾಲಕೃಷ್ಣ ನಾವಡ ಅವರ ಹಿಮ್ಮೇಳದಲ್ಲಿ ಮಹಾಬಲ ಶೆಟ್ಟಿ ಕೂಡ್ಲು, ಡಾ| ತಾರಾನಾಥ ವರ್ಕಾಡಿ, ಗೋಪಾಲ ಮಡಿನ್ನಾಯ ಕೂಡ್ಲು, ಮಹಾಬಲ ನಾಯ್ಕ್ ಕೂಡ್ಲು ಮತ್ತು ಸರಸ್ವತಿ ಅಡಿಗ ಕೂಡ್ಲು ಅರ್ಥದಾರಿಗಳಾಗಿ ಭಾಗವಹಿಸಿದ್ದರು.