ಭಕ್ತಿ-ಶ್ರದ್ಧೆಯೊಂದಿಗೆ ಸಂಪನ್ನಗೊಂಡ ಶ್ರೀ ಬೊಬ್ಬರಿಯ ಮತ್ತು ಪರಿವಾರ ದೈವಗಳ ಕೋಲಾ ಸೇವೆ

0
10

ಹಾವಂಜೆ: ಗ್ರಾಮದ ನಾಲ್ಕನೇ ವಾರ್ಡ್‌ನ ಕೀಳಂಜೆ ಗೋಪಾಲ್ ತೋಟದಲ್ಲಿರುವ ಹಾಗೂ ಸ್ವರ್ಣ ನದಿಯ ತಟದಲ್ಲಿರುವ ಶ್ರೀ ಬೊಬ್ಬರಿಯ ಮತ್ತು ಪರಿವಾರ ದೈವಗಳ ವಾರ್ಷಿಕ ಕೋಲಾ ಸೇವೆಯು ನವೆಂಬರ್ 24ರ ಮಂಗಳವಾರ ರಾತ್ರಿ 8 ಗಂಟೆಗೆ ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ನಡೆಯಿತು.

ಇದೇ ದಿನ ಸಂಜೆ 6 ಗಂಟೆಯಿಂದ ನಂದಿಗೋಣ ಮತ್ತು ಪರಿವಾರ ದೈವಗಳಿಗೆ ವಿಶೇಷ ಪೂಜೆ ಹಾಗೂ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಸ್ವರ್ಣ ನದಿ ತಟದಲ್ಲಿರುವ ಶ್ರೀ ಬೊಬ್ಬರಿಯ ದೈವ ಸನ್ನಿಧಾನದಲ್ಲಿ ಜಯಂತಿ ಸುಂದರ್ ಪೂಜಾರಿ ಅವರ ವತಿಯಿಂದ ಅನ್ನಸೇವೆಯನ್ನು ಆಯೋಜಿಸಲಾಗಿತ್ತು.

ಕೋಲಾ ಸೇವೆಯ ಯಶಸ್ಸಿಗೆ ಸಹಕರಿಸಿದ ದಾನಿಗಳನ್ನು ದೈವಗಳ ಪ್ರಸಾದ ನೀಡಿ, ಶಾಲು ಹೊದಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಆಡಳಿತ ಮುಖ್ಯಸ್ಥ ಸುಂದರ್ ಶೆಟ್ಟಿ (ಅದಪ್ಪ), ಊರಿನ ದೇವಸ್ಥಾನದ ಪ್ರಧಾನ ಅರ್ಚಕ ರವೀಂದ್ರ ಭಟ್ ಕೀಳಂಜೆ, ಅಧ್ಯಕ್ಷ ಸತೀಶ್ ಪೂಜಾರಿ ಕೀಳಂಜೆ, ಊರಿನ ಗುರುಕಾರ ಸಾಧು ಪೂಜಾರಿ ಗೋಪಾಲ್ ತೋಟ, ಪ್ರಧಾನ ಕಾರ್ಯದರ್ಶಿ ರಾಮಚಂದ್ರ ನಾಯಕ್, ಕೋಶಾಧಿಕಾರಿ ವಿಕ್ರಾಂತ್ ಶೆಟ್ಟಿ ಕೀಳಂಜೆ ಸೇರಿದಂತೆ ಅನೇಕ ದೈವಭಕ್ತರು ಹಾಗೂ ಅಭಿಮಾನಿಗಳು ಉಪಸ್ಥಿತರಿದ್ದರು.

ಜೀರ್ಣೋದ್ಧಾರ ಕಾರ್ಯಕ್ಕೆ ದೈವಗಳ ಅಭಯ ನುಡಿ

ವಾರ್ಷಿಕ ಕೋಲಾ ಸೇವೆಯ ಸಂದರ್ಭದಲ್ಲಿ ದೈವಗಳ ನುಡಿಯ ಪ್ರಕಾರ, ಕೀಳಂಜೆಯ ಸ್ವರ್ಣ ನದಿ ತಟದಲ್ಲಿರುವ ಗೋಣಕಟ್ಟ ನಾಗಬ್ರಹ್ಮ ಸ್ಥಾನ ಹಾಗೂ ಶ್ರೀ ಬೊಬ್ಬರಿಯ ದೈವ ಸಾನಿಧ್ಯದ ಜೀರ್ಣೋದ್ಧಾರ ಕಾರ್ಯಗಳು ಮುಂದಿನ ದಿನಗಳಲ್ಲಿ ಯಾವುದೇ ಅಡೆತಡೆಗಳಿಲ್ಲದೆ ವಿಜೃಂಭಣೆಯಿಂದ ನೆರವೇರಲಿವೆ ಎಂಬ ಅಭಯ ನುಡಿ ದೊರೆತಿದೆ ಎಂದು ತಿಳಿಸಲಾಗಿದೆ.

ಈ ಪುಣ್ಯ ಕಾರ್ಯಕ್ಕೆ ಊರಿನವರು ಹಾಗೂ ಕೀಳಂಜೆಯ ಈ ಜಾಗಕ್ಕೆ ಸಂಬಂಧಪಟ್ಟ ಎಲ್ಲರ ಸಹಕಾರ ಅತ್ಯಗತ್ಯ ಎಂಬ ಸಂದೇಶವೂ ದೈವಗಳ ಪ್ರಸಾದದ ರೂಪದಲ್ಲಿ ವ್ಯಕ್ತವಾಗಿದೆ. ದೈವ ಮತ್ತು ದೇವರುಗಳ ಸಾನಿಧ್ಯಗಳ ಜೀರ್ಣೋದ್ಧಾರದಿಂದ ಊರಿನ ಅಭಿವೃದ್ಧಿ ಹಾಗೂ ಸಮೃದ್ಧಿಗೆ ಪೂರಕ ವಾತಾವರಣ ನಿರ್ಮಾಣವಾಗಲಿದೆ ಎಂಬ ಸಂದೇಶವನ್ನು ಕೋಲಾ ಸೇವೆಯ ಸಂದರ್ಭದಲ್ಲಿ ನೀಡಲಾಯಿತು.

ಧಾರ್ಮಿಕ ಶ್ರದ್ಧೆ, ಭಕ್ತಿ ಹಾಗೂ ಊರಿನವರ ಒಗ್ಗಟ್ಟಿನೊಂದಿಗೆ ನಡೆದ ವಾರ್ಷಿಕ ಕೋಲಾ ಸೇವೆಯು ಭಕ್ತರ ಗಮನ ಸೆಳೆಯಿತು.