ಕಾಡಿನಲ್ಲಿ ಪತ್ತೆಯಾದ ಹೆಣ್ಣು ಶಿಶುವಿನ ತಂದೆ-ತಾಯಿಗೆ ಮದುವೆ

0
1348


ಬೆಳ್ತಂಗಡಿ: ತಾಲೂಕಿನ ಬೆಳಾಲು ಗ್ರಾಮದ ಕೊಡೋಳುಕೆರೆ ಕಾಡುದಾರಿಯಲ್ಲಿ ಮಾರ್ಚ್ 22ರಂದು ದೊರಕಿದ್ದ ಹೆಣ್ಣು ಶಿಶುವಿನ ತಂದೆ-ತಾಯಿಗೆ ಮದುವೆ ನಡೆದಿದೆ.

ಬೆಳಾಲು ಗ್ರಾಮದ ಮಾಯ ಪ್ರದೇಶದ ನಿವಾಸಿ ರಂಜಿತ್ ಗೌಡ(27) ಹಾಗೂ ಧರ್ಮಸ್ಥಳದ ಪಾಂಗಾಳ ನಿವಾಸಿ ಸುಶ್ಮಿತಾ ಮದುವೆಯಾದವರು.
ರಂಜಿತ್ ಗೌಡ ಹಾಗೂ ಮಂಗಳೂರಿನ ಬ್ಯೂಟಿಪಾರ್ಲರ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸುಶ್ಮಿತಾ ಪರಸ್ಪರ ಪ್ರೀತಿಸುತ್ತಿದ್ದರು. ರಂಜಿತ್ ಗೌಡ ವಿವಾಹವಾಗುವ ಭರವಸೆಯೊಂದಿಗೆ ಸುಶ್ಮಿತಾಳೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಪರಿಣಾಮ ಗರ್ಭಿಣಿಯಾಗಿದ್ದ ಆಕೆ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಆ ಬಳಿಕ ಇವರಿಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು. ಆದ್ದರಿಂದ ಸುಶ್ಮಿತಾ ಮಗುವನ್ನು ರಂಜಿತ್ ಗೌಡನ ಮನೆಯಲ್ಲಿ ಬಿಟ್ಟು ಹೋಗಿದ್ದಳು. ಆದರೆ ಆತ ಅದನ್ನು ಕಾಡುದಾರಿಯಲ್ಲಿ ತೊರೆದು ಹೋಗಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದ್ದರು. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ಎರಡೂ ಕುಟುಂಬಗಳ ಸಮ್ಮುಖದಲ್ಲಿ ನಡ ಗ್ರಾಮದ ಕುತ್ತೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ರಂಜಿತ್ ಗೌಡ ಹಾಗೂ ಸುಶ್ಮಿತಾ ವಿವಾಹ ನೆರವೇರಿದೆ. ಸದ್ಯ ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯು ಶಿಶುವನ್ನು ಪುತ್ತೂರಿನ ವಾತ್ಸಲ್ಯಧಾಮ ದತ್ತು ಕೇಂದ್ರದ ಸುಪರ್ದಿಗೆ ವಹಿಸಿದೆ. ಇದೀಗ ಸುಶ್ಮಿತಾ ಹಾಗೂ ರಂಜಿತ್ ಗೌಡ ದಂಪತಿ ‘ಶಿಶುವನ್ನು ಕಾನೂನಾತ್ಮಕವಾಗಿ ವಾಪಾಸ್ ಪಡೆಯುತ್ತೇವೆ’ ಎಂದಿದ್ದಾರೆ.

LEAVE A REPLY

Please enter your comment!
Please enter your name here