ಮಿತ್ತೂರು ಸರಕಾರಿ ಉ ಹಿ ಪ್ರಾ ಶಾಲಾ ನೂತನ ಕೊಠಡಿ,ಸಭಾಂಗಣ ಉದ್ಘಾಟನೆ

0
65

ಬಂಟ್ವಾಳ : ಪ್ರಸ್ತುತ ಕಾಲಘಟ್ಟದಲ್ಲಿ ಪ್ರತಿ ಗ್ರಾಮದಲ್ಲೂ ಕೆಪಿಎಸ್ ಮಾದರಿಯ ಶಾಲೆಗಳು ಪ್ರಾರಂಭ ಆಗುವ ಅಗತ್ಯತೆ ಇದೆ, ಪ್ರಸ್ತುತ ಸಾಲಿನಲ್ಲಿ ಶಿಕ್ಷಣಕ್ಕೆ ಬಜೆಟಿನಲ್ಲಿ 2500 ಕೋಟಿ ಮೀಸಲಿಟ್ಟಿದ್ದು ಮಕ್ಕಳ ಉತ್ತಮ ಶಿಕ್ಷಣಕ್ಕೆ ಸಹಕಾರಿಯಾಗಲಿದೆ. ಪ್ರಾಥಮಿಕ ಹಂತದ ಮಕ್ಕಳು ಶೇಕಡ 60 ಭಾಗವನ್ನು ತಮ್ಮ ಕುಟುಂಬದ ಸಹವಾಸದಿಂದ ಕಲಿತರೆ ಕೇವಲ 40 ಶೇಕಡ ಅಂಶವನ್ನು ಮಾತ್ರ ಶಾಲಾ ಶಿಕ್ಷಕರಿಂದ ಕಲಿಯುತ್ತಾರೆ. ಆದುದರಿಂದ ಮನೆಯೇ ಮೊದಲ ಪಾಠಶಾಲಾ ಎಂಬಂತೆ ಈ ಬಗ್ಗೆ ಪೋಷಕರು ಜಾಗೃತರಾಗಿ ಇರಬೇಕೆಂದು ಕಲಿಕೆಯ ಬಗ್ಗೆ ಮಕ್ಕಳ ಮನಸ್ಸಲ್ಲಿ ಭಯ ಹುಟ್ಟಿಸಬೇಡಿ, ಮಕ್ಕಳ ಮನಸ್ಸು ಮೃದುವಾಗಿದೆ ಅದು ಏನು ಕೊಟ್ಟರೂ ಸ್ವೀಕಾರ ಮಾಡುತ್ತದೆ, ಅದೇ ಮಕ್ಕಳ ಮನಸ್ಸಲ್ಲಿ ಭಯ ಹುಟ್ಟಿಸಿದರೆ ಮುಂದೆ ಮಕ್ಕಳು ಆ ವಿಚಾರದಲ್ಲಿ ಭಯವನ್ನೇ ಹೊಂದಿರುತ್ತಾರೆ,ಕಲಿಕೆಯಲ್ಲಿ ಹಿಂದೆ ಇರುವ ಮಕ್ಕಳನ್ನು ದಡ್ಡ ಎಂದು ಯಾರೂ ಕರೆಯಬಾರದು,ಯಾವ ಮಗೂ ದಡ್ಡ ಅಲ್ಲ,ಮಗುವಿಗೆ ಸೂಕ್ತ ಶಿಕ್ಷಣ ಕೊಡದ ನಾವೇ ದಡ್ಡರಾಗಿದ್ದೇವೆ, ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕೊಡಿಸುವಲ್ಲಿ ನಾವು ವಿಫಲರಾಗುತ್ತಿದ್ದೇವೆ. ಸರಕಾರಿ ಶಾಲೆಯಲ್ಲೂ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ.ಸರಕಾರಿ ಶಾಲೆಗಳಿಗೆ ಮಕ್ಕಳನ್ನು ದಾಖಲಿಸಿ. ನಮ್ಮ‌ಮಕ್ಕಳಿಗೆ ನಾವೇ ಮಾದರಿಯಾಗಬೇಕು ಎಂದು ಹೇಳಿ ಶಾಲೆಯ ನೂತನ ಸಭಾಂಗಣ ನಿರ್ಮಾಣವಾಗಿದ್ದು ಅದರ ಕಾಮಗಾರಿ ಪೂರ್ಣಗೊಂಡಿಲ್ಲ ಕಾಮಗಾರಿ ಪೂರ್ಣಗೊಳಿಸಲು 3 ಲಕ್ಷ ಅನುದಾನ ನೀಡುವುದಾಗಿ ಭರವಸೆ ನೀಡಿ ಶಾಲೆಯ ರಸ್ತೆಯನ್ನೂ ಅಭಿವೃದ್ದಿ ಮಾಡುವುದಾಗಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ರೈ ಹೇಳಿದರು.

ಅವರು ಶನಿವಾರ ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದ ಸರಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಮಿತ್ತೂರು ಇಲ್ಲಿ ಎಂ ಆರ್ ಪಿ ಎಲ್ ಹಾಗೂ ಏನ್ ಎಂ ಪಿ ಎ ಸಂಸ್ಥೆಯ ಸಿ ಎಸ್ ಆರ್ ಅನುದಾನದಿಂದ ನಿರ್ಮಾಣವಾದ ತರಗತಿ ಕೊಠಡಿಗಳನ್ನು ಹಾಗೂ ದಾನಿಗಳ ಸಹಕಾರದಿಂದ ನಿರ್ಮಾಣವಾದ ಶಾಲಾ ಸಭಾಭವನದ ಉದ್ಘಾಟನೆ ಮಾಡಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನುಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ವಹಿಸಿದ್ದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಸಮುದಾಯ ಅಭಿವೃದ್ಧಿ ವಿಭಾಗದಿಂದ ಕೊಡಲ್ಪಟ್ಟ ಪೀಠೋಪಕರಣ ಹಾಗೂ ಶಾಲಾ ಹಳೆ ವಿದ್ಯಾರ್ಥಿಗಳಿಂದ ಒದಗಿಸಿದ ಸಿಸಿ ಕ್ಯಾಮೆರಾ ಹಸ್ತಾಂತರ ಮಾಡಲಾಯಿತು.

ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಎಂ ಜಿ ಮಾತನಾಡಿ ಮಕ್ಕಳಲ್ಲಿ ಛಲ ಮತ್ತು ಕನಸು ಇದ್ದರೆ ಗುರಿ ಸಾಧಿಸಲು ಸಾಧ್ಯ, ಕನಸು ಎಂಬುದು ಚೈತನ್ಯ ಶಕ್ತಿ ಎಂದು ಅಭಿಪ್ರಾಯ ಪಟ್ಟರು

ವೇದಿಕೆಯಲ್ಲಿ ಇಡ್ಕಿದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮೋಹಿನಿ ಜಯಕರ, ಪಂಚಾಯತ್ ಸದಸ್ಯರುಗಳಾದ ಸುಧೀರ್ ಕುಮಾರ್ ಶೆಟ್ಟಿ, ರಮೇಶ್ ಪೂಜಾರಿ, ಸಂಜೀವ ಪೂಜಾರಿ, ಜಯಂತಿ,ಎಂ ಆರ್ ಪಿ ಎಲ್ ಮೆನೇಜರ್ ಪ್ರದೀಪ್ ಕುಮಾರ್, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್ ಭಕ್ತ, ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಜ್ಯೋತಿ,ಇಡ್ಕಿದು ಸೇವಾ ಸಹಕಾರಿ ಸಂಘ ಉರಿಮಜಲು ಅಧ್ಯಕ್ಷ ಸುಧಾಕರ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೇಲ್ವಿಚಾರಕಿ ಆಶಾ ಪಾರ್ವತಿ, ಶಾಲಾ ಹಿರಿಯ ವಿದ್ಯಾರ್ಥಿ ಫ್ಲೆವಿಯ ಮೈಕಲ್ ಡಿಸೋಜ, ನಾಸಿರ್ ಕೊಲ್ಪೆ, ಅಂಗನವಾಡಿ ಕಾರ್ಯಕರ್ತೆ ಭವಾನಿ,ಮೊದಲಾದವರು ಉಪಸ್ಥಿತರಿದ್ದರು.

ಶಾಲಾ ಮಕ್ಕಳು ಪ್ರಾರ್ಥಿಸಿ,ಮುಖ್ಯ ಶಿಕ್ಷಕಿ ಸರೋಜಾ ಎಂ ಸ್ವಾಗತಿಸಿ, ಶಿಕ್ಷಕಿ ಪೂರ್ಣಿಮಾ ವಂದಿಸಿ. ಶಿಕ್ಷಕ ಸಂಜೀವ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here