ಅಕ್ಕಿ ಪಾಲಿಶ್ ಮಾಡಿ ಬೇರೆ ಬ್ರ್ಯಾಂಡ್​ಗಳ ಹೆಸರಿನಲ್ಲಿ ಮಾರಾಟ ಶಂಕೆ: ಮಂಗಳೂರಿನಲ್ಲಿ ಮೂಟೆಗಟ್ಟಲೆ ರೇಷನ್ ಅಕ್ಕಿ ಪತ್ತೆ

0
461

ಮಂಗಳೂರು: ಬಡವರು ಮೂರು ಹೊತ್ತು ಉಪವಾಸ ಕೂರಬಾರದೆಂದು ಕರ್ನಾಟಕ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದೆ. ಆದರೆ ಈ ಯೋಜನೆ ಮೂಲಕ ಸಿಗುವ ಅಕ್ಕಿ ಅನ್ಯರ ಪಾಲಾಗುತ್ತಿದೆ. ಇದಕ್ಕೆ ಸಾಕ್ಷಿಯೆನ್ನುವಂತೆ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನ ಖಾಸಗಿ ಗೋಡೌನ್ ಒಂದರಲ್ಲಿ ನೂರಾರು ಮೂಟೆಗಳಲ್ಲಿ ರೇಷನ್ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ. ಮಂಗಳೂರು ನಗರದ ಬಂದರು ಸಮೀಪದ ಅಕ್ಕಿ ದಾಸ್ತಾನು ಗೋಡೌನ್​​ಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೂಚನೆಯಂತೆ ಸಹಾಯಕ ಆಯುಕ್ತ ಹರ್ಷವರ್ಧನ್ ಹಾಗೂ ಆಹಾರ ಇಲಾಖೆಯ ಉಪನಿರ್ದೇಶಕರು ದಾಳಿ ನಡೆಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ.

ಉತ್ತರ ಕರ್ನಾಟಕ ಭಾಗದಿಂದ ಅನ್ನಭಾಗ್ಯದ ಅಕ್ಕಿ ತಂದು ಅಕ್ರಮವಾಗಿ ದಾಸ್ತಾನು ಇರಿಸಿರುವ ಆರೋಪ ಕೇಳಿಬಂದಿದ್ದು, ದಾಳಿ ಮಾಡಿದ ಅಧಿಕಾರಿಗಳು ಗೋಡೌನ್ ಸೀಜ್ ಮಾಡಿದ್ದಾರೆ. ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಅನಿತಾ ಮಾಹಿತಿ ನೀಡಿದ್ದಾರೆ.

ಹಾವೇರಿ ಸೇರಿದಂತೆ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಅನ್ನಭಾಗ್ಯದ ಅಕ್ಕಿ ಮಾರಾಟ ಮಾಫಿಯಾ ಸಕ್ರಿಯವಾಗಿರುವ ಅನುಮಾನವಿದೆ. ದಲ್ಲಾಲಿಗಳ ಮೂಲಕ ಅಕ್ರಮವಾಗಿ ಅಕ್ಕಿ ಖರೀದಿಸಿ ಮಂಗಳೂರಿನ ಕೆಲ ಖಾಸಗಿ ರೈಸ್ ಮಿಲ್‌ಗಳಿಗೆ ಸಾಗಾಟ ಮಾಡುತ್ತಿರುವ ಶಂಕೆಯಿದೆ. ಬಳಿಕ ಫಾಲಿಶ್ ಮಾಡಿ ಬೇರೆ ಬೇರೆ ಬ್ರ್ಯಾಂಡ್ ಹೆಸರಿನಲ್ಲಿ ಮಾರುಕಟ್ಟೆಗೆ ಪೂರೈಕೆ ಮಾಡುವ ಮಾಫಿಯಾ ಕಾರ್ಯಚರಿಸುತ್ತಿರುವ ಬಗ್ಗೆ ಆರೋಪಗಳು ಕೇಳಿಬಂದಿವೆ. ಹೀಗಾಗಿ ಗೋಡೌನ್​ನಲ್ಲಿದ್ದ ವಿವಿಧ ಅಕ್ಕಿಗಳ ಮಾದರಿಯನ್ನು ಆಹಾರ ಇಲಾಖೆ ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಇನ್ನು ಗೋಡೌನ್‌ನಲ್ಲಿ ಲೇಬಲ್ ಇಲ್ಲದ 500 ಕ್ವಿಂಟಾಲ್ ಗೂ ಹೆಚ್ಚು ಅಕ್ಕಿ ದಾಸ್ತಾನು ಇರಿಸಿರುವುದು ಕಂಡು ಬಂದಿದ್ದು ಇದು ಅನುಮಾನಕ್ಕೆ ಕಾರಣವಾಗಿದೆ.

ಸದ್ಯ, ಅಕ್ಕಿ ದಾಸ್ತಾನು ಗೋಡೌನ್‌ಗೆ ದಾಳಿ ನಡೆಸಿದ ಅಧಿಕಾರಿಗಳು ಸಂಪೂರ್ಣ ಮಹಜರು ಮಾಡಿ ಬೀಗ ಜಡಿದಿದ್ದಾರೆ. ಈ ಅಕ್ರಮ ಅಕ್ಕಿ ಮಾಫಿಯಾದ ವಿರುದ್ದ ಆಳವಾದ ತನಿಖೆಗೆ ಅಧಿಕಾರಿಗಳು ಇಳಿದಿದ್ದು ಮುಂದೆ ಯಾವ ವಿಚಾರಗಳು ಬಯಲಾಗಲಿವೆ ಎಂಬುದನ್ನು ಕಾದು ನೋಡಬೇಕಾಗಿದೆ.

LEAVE A REPLY

Please enter your comment!
Please enter your name here