ನಿಯಮಬಾಹಿರ ಮಲ್ಪೆ ಬಂದರು ನಿರ್ವಹಣೆ ಗುತ್ತಿಗೆ ವಿಸ್ತರಣೆ ಆದೇಶ ತಕ್ಷಣ ರದ್ದುಪಡಿಸಿ : ಮಲ್ಪೆ ಮೀನುಗಾರ ಸಂಘದ ಆಗ್ರಹ

0
146

ಮಲ್ಪೆ ಮೀನುಗಾರಿಕಾ ಬಂದರು ನಿರ್ವಹಣಾ ಗುತ್ತಿಗೆಯನ್ನು ಖಾಸಗಿ ವ್ಯಕ್ತಿಗೆ ನಿಯಮಬಾಹಿರವಾಗಿ ಮುಂದಿನ ಎರಡು ವರ್ಷಗಳ ಅವಧಿಗೆ ವಿಸ್ತರಣೆ ಮಾಡಿರುವ ಬಗ್ಗೆ ಮಲ್ಪೆ ಮೀನುಗಾರರ ಸಂಘ ಹಾಗೂ ಮೀನುಗಾರರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಉಡುಪಿ ಶಾಸಕರಾದ ಶ್ರೀ ಯಶ್ ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ಮಲ್ಪೆ ಮೀನುಗಾರರ ಸಂಘದ ಸಭಾಂಗಣದಲ್ಲಿ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಮೀನುಗಾರ ಮುಖಂಡರ ಸಭೆ ನಡೆಸಿದರು.

ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷರಾದ ದಯಾನಂದ ಸುವರ್ಣ ಮಾತನಾಡಿ ಈ ಹಿಂದೆ ಮಲ್ಪೆ ಬಂದರು ನಿರ್ವಹಣೆಯ ಗುತ್ತಿಗೆ ಪಡೆದ ಖಾಸಗಿ ವ್ಯಕ್ತಿ ಬಂದರು ಸಮರ್ಪಕ ನಿರ್ವಹಣೆಯಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು ಹಾಗೂ ಟೆಂಡರ್ ನಿಯಮಾವಳಿಯನ್ನು ಪಾಲಿಸದೆ ಸಿಸಿಟಿವಿ, ಭದ್ರತಾ ಸಿಬ್ಬಂದಿ ನಿಯೋಜನೆ ಹಾಗೂ ಬಂದರು ಸ್ವಚ್ಛತೆ ಬಗ್ಗೆ ಯಾವುದೇ ಮುತುವರ್ಜಿ ವಹಿಸದೇ ಇರುವ ಬಗ್ಗೆ ಹಲವಾರು ಬಾರಿ ಮೀನುಗಾರಿಕೆ ಇಲಾಖೆ, ಜಿಲ್ಲಾಧಿಕಾರಿ ಹಾಗೂ ಮೀನುಗಾರಿಕೆ ಸಚಿವರಿಗೆ ದೂರು ನೀಡಲಾಗಿದೆ, ಮಲ್ಪೆ ಬಂದರಿನಲ್ಲಿ ಸೂಕ್ತ ಭದ್ರತಾ ಸಿಬ್ಬಂದಿ ಹಾಗೂ ಸಿಸಿಟಿವಿ ಕೊರತೆಯ ಪರಿಣಾಮ ನಿರಂತರವಾಗಿ ಮೀನು ಹಾಗೂ ಮೀನುಗಾರಿಕಾ ಸಲಕರಣೆಗಳ ಕಳ್ಳತನ ಪ್ರಕರಣಗಳು ನಡೆಯುತ್ತಿರುವ ಹಿನ್ನೆಲೆ ಇತ್ತೀಚೆಗೆ ನಡೆದ ಘಟನೆ ಕೂಡ ಮಲ್ಪೆ ಮೀನುಗಾರಿಕಾ ಬಂದರಿಗೆ ಕಪ್ಪು ಚುಕ್ಕೆಯಾಗಿದೆ. ಇಂತಹ ಗಂಭೀರ ಸಮಸ್ಯೆಗಳನ್ನು ಪರಿಗಣಿಸದೆ ನಮ್ಮ ಮನವಿಗೆ ಸ್ಪಂದಿಸದೆ ಈಗ ಏಕಪಕ್ಷೀಯವಾಗಿ ಅದೇ ವ್ಯಕ್ತಿಗೆ ನಿಯಮಬಾಹಿರವಾಗಿ ಮೀನುಗಾರಿಕೆ ಇಲಾಖೆ ಗುತ್ತಿಗೆಯನ್ನು ವಿಸ್ತರಿಸಿ ಮೀನುಗಾರರಿಗೆ ಮೋಸ ಮಾಡಿದೆ.

ಈಗಾಗಲೇ ಗುತ್ತಿಗೆ ಅವಧಿ ಮುಗಿದಿರುವ ಹಿನ್ನೆಲೆ ಹೊಸ ಟೆಂಡರ್ ಕರೆಯುವಂತೆ ಮೀನುಗಾರಿಕಾ ಇಲಾಖೆಗೆ ಹಲವು ಬಾರಿ ಮನವಿ ಮಾಡಲಾಗಿದೆ, ಸ್ವತಃ ಜಿಲ್ಲಾಧಿಕಾರಿಗಳು ಮಲ್ಪೆ ಬಂದರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಬಂದರು ನಿರ್ವಹಣೆಯಲ್ಲಿ ನಿರ್ಲಕ್ಷ್ಯವಹಿಸಿದ ವ್ಯಕ್ತಿಯ ಗುತ್ತಿಗೆಯನ್ನು ರದ್ದು ಮಾಡಿ ಕಪ್ಪು ಪಟ್ಟಿಗೆ ಸೇರಿಸಲು ಸೂಚನೆ ನೀಡಿದ ನಂತರವೂ ಮೀನುಗಾರಿಕೆ ಇಲಾಖೆ ಗುತ್ತಿಗೆ ಅವಧಿಯನ್ನು ವಿಸ್ತರಿಸಿರುವುದು ಅಕ್ಷಮ್ಯ.

ಮೇ 10 ರ ಬಳಿಕ ಮಲ್ಪೆ ಮೀನುಗಾರ ಸಂಘದ ವತಿಯಿಂದ ಯಾವುದೇ ನಿರ್ವಹಣಾ ವೆಚ್ಚವನ್ನು ಪಾವತಿಸದೇ ಇರುವ ಬಗ್ಗೆ ಈಗಾಗಲೇ ತೀರ್ಮಾನ ಕೈಗೊಂಡಿದ್ದು, ಮೀನುಗಾರಿಕಾ ಇಲಾಖೆ ತಕ್ಷಣ ಎರಡು ವರ್ಷಗಳಿಗೆ ಗುತ್ತಿಗೆ ಅವಧಿಯನ್ನು ವಿಸ್ತರಿಸಿರುವ ಆದೇಶವನ್ನು ತಕ್ಷಣ ರದ್ದುಮಾಡಿ, ಹೊಸತಾಗಿ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಮೀನುಗಾರರ ಪರವಾಗಿ ಆಗ್ರಹಿಸಿದರು.

ಶಾಸಕ ಯಶ್ ಪಾಲ್ ಸುವರ್ಣ ಮಾತನಾಡಿ ಈಗಾಗಲೇ ಮಲ್ಪೆ ಮೀನುಗಾರಿಕೆ ಬಂದರಿನ ಅವ್ಯವಸ್ಥೆಯ ಬಗ್ಗೆ ನಿರಂತರವಾಗಿ ದಿನಪತ್ರಿಕೆ ಹಾಗೂ ವಿವಿಧ ಮಾಧ್ಯಮಗಳಲ್ಲಿ ವರದಿಗಳು ಬರುತ್ತಿದ್ದರೂ ಮೀನುಗಾರಿಕೆ ಇಲಾಖೆ ನಿಯಮ ಬಾಹಿರವಾಗಿ ಗುತ್ತಿಗೆ ಅವಧಿ ವಿಸ್ತರಿಸುವ ಮೂಲಕ ಮೀನುಗಾರರಿಗೆ ಅನ್ಯಾಯವೆಸಗಿದ್ದು, ಮೀನುಗಾರಿಕೆ ಇಲಾಖೆ ನಿರ್ದೇಶಕರು ತಕ್ಷಣ ಮಲ್ಪೆ ಬಂದರಿಗೆ ಆಗಮಿಸಿ ಮೀನುಗಾರ ಸಂಘದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಗುತ್ತಿಗೆ ಅವಧಿ ವಿಸ್ತರಣೆ ಮಾಡಿದ ಆದೇಶ ಹಿಂಪಡೆದು, ಹೊಸ ಟೆಂಡರ್ ಪ್ರಕ್ರಿಯೆ ನಡೆಸಬೇಕು ಹಾಗೂ ಇತ್ತೀಚಿನ ದಿನಗಳಲ್ಲಿ ಮಲ್ಪೆ ಮೀನುಗಾರಿಕೆ ಹಾಗೂ ಬಂದರು ಇಲಾಖೆಯ ಮೀನುಗಾರಿಕೆ ಚಟುವಟಿಕೆಗೆ ಸಂಬಂಧಿಸಿದ ನಿವೇಶನಗಳನ್ನು ಖಾಸಗಿ ವ್ಯಕ್ತಿಗಳಿಗೆ ಲೀಸ್ ನೀಡಲು ಮುಂದಾಗಿರುವ ಬಗ್ಗೆ ದೂರುಗಳು ಕೇಳಿಬರುತ್ತಿದ್ದು, ಇಲಾಖೆ ತಕ್ಷಣ ಈ ಪ್ರಕ್ರಿಯೆಯನ್ನು ಕೈ ಬಿಡಬೇಕು ಹಾಗೂ ಮುಂದಿನ ದಿನಗಳಲ್ಲಿ ಮಲ್ಪೆ ಬಂದರು ಅಭಿವೃದ್ಧಿ, ನಿರ್ವಹಣೆ ಹಾಗೂ ನಿವೇಶನ ಹಂಚಿಕೆಯಂತಹ ಪ್ರಕ್ರಿಯೆ ಸಂದರ್ಭದಲ್ಲಿ ಸ್ಥಳೀಯ ಶಾಸಕರು ಹಾಗೂ ಮಲ್ಪೆ ಮೀನುಗಾರ ಸಂಘದ ಪ್ರತಿನಿಧಿಗಳೊಂದಿಗೆ ಸಾಧಕ ಬಾಧಕಗಳನ್ನು ಚರ್ಚಿಸಿ ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಮೀನುಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರಾದ ಶ್ರೀ ವಿವೇಕ್, ಸಹಾಯಕ ನಿರ್ದೇಶಕರಾದ ಶ್ರೀಮತಿ ಸವಿತಾ ಖಾದ್ರಿ, ಮಲ್ಪೆ ಮೀನುಗಾರ ಸಂಘದ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here