ಹೆಬ್ರಿ : ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಅನುಷ್ಠಾನ : ಹೆಬ್ರಿ ಗ್ರಾಮ ಪಂಚಾಯಿತಿ ಮಾದರಿ. – ಕೋಟ ಶ್ರೀನಿವಾಸ ಪೂಜಾರಿ.

0
209


ಸವಲತ್ತು ವಿತರಣೆ – ಮಾಹಿತಿ ಕಾರ್ಯಗಾರ – ನವೀಕೃತ ಕಲಿಕಾ ಕೇಂದ್ರದ ಸಭಾಭವನ ಉದ್ಘಾಟನೆ.

ಹೆಬ್ರಿ : ಕುಟುಂಬಕ್ಕೆ ಬೇಕಾದ ವಿದ್ಯುತ್‌ ಉತ್ಪಾದಿಸಿ ಬಳಸಿಕೊಂಡು ಹೆಚ್ಚುವರಿಯಾಗಿ ಉಳಿದ ವಿದ್ಯುತನ್ನು ಮೆಸ್ಕಾಂಗೆ ಮಾರಾಟ ಮಾಡುವ ಅವಕಾಶವನ್ನು ನರೇಂದ್ರ ಮೋದಿ ಸರ್ಕಾರ ಜನತೆಗೆ ನೀಡಿದೆ. ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಮಾದರಿಯಾಗಿ ಅನುಷ್ಠಾನಗೊಳಿಸುವ ಮಹತ್ವದ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಹೆಬ್ರಿ ಗ್ರಾಮ ಪಂಚಾಯಿತಿಯು ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಅನುಷ್ಠಾನದ ಮುತುವರ್ಜಿ ವಹಿಸಿ ಅತೀ ಹೆಚ್ಚು ಘಟಕಗಳನ್ನು ಸ್ಥಾಪಿಸಿರುವುದು ಎಲ್ಲರಿಗೂ ಮಾದರಿಯಾಗಿದೆ ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಬುಧವಾರ ಹೆಬ್ರಿ ಗ್ರಾಮ ಪಂಚಾಯಿತಿಯಲ್ಲಿ ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯ ಸವಲತ್ತು ವಿತರಣೆ, ಸೋಲಾರ್ ಮಾಹಿತಿ ಕಾರ್ಯಗಾರ ಮತ್ತು ಹೆಬ್ರಿ ಗ್ರಾಮ ಪಂಚಾಯತಿಯ ನವೀಕೃತಗೊಂಡ ಕಲಿಕಾ ಕೇಂದ್ರ ಸಭಾಭವನದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ಸೂರ್ಯ ಘರ್ ಎಂಬ ಮಹತ್ವದ ಯೋಜನೆಯನ್ನು ಜಾರಿಗೆ ತಂದಿದೆ. ರಾಜ್ಯ ಸರ್ಕಾರ ಕೂಡ ಸೋಲಾರ್‌ ವಿದ್ಯುತ್‌ ಬಗ್ಗೆ ಹೆಚ್ಚಿನ ಒತ್ತು ನೀಡುತ್ತಿದೆ. ಸೋಲಾರ್‌ ವಿದ್ಯುತ್‌ ಉತ್ಪಾದನೆಯ ಮೂಲಕ ಹೆಚ್ಚು ವಿದ್ಯುತ್‌ ಉತ್ಪಾದಿಸಿ ನಾವು ಸ್ವಾವಲಂಭಿಗಳಾಗಬೇಕು, ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ಅತೀ ಹೆಚ್ಚು ಜನರಿಗೆ ಸೂರ್ಯಘರ್‌ ಯೋಜನೆ ತಲುಪಬೇಕು, ಯೋಜನೆಯ ವಿಚಾರವು ಜನಸಾಮಾನ್ಯರಿಗೆ ತಲುಪುತ್ತಿರುವುದು ಸಂತಸ ತಂದಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಮೆಚ್ಚುಗೆ ವ್ಯಕ್ತಪಡಿಸಿದರು.
ಹೆಬ್ರಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ತಾರನಾಥ ಬಂಗೇರ ಅಧ್ಯಕ್ಷತೆ ವಹಿಸಿ ಮಾತನಾಡಿ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯನ್ನು ಹೆಬ್ರಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅತೀ ಹೆಚ್ಚು ಅನುಷ್ಠಾನಗೊಳಿಸುತ್ತೇವೆ, ಹೆಬ್ರಿ ಗ್ರಾಮದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನ ನೀಡಿ ಎಂದು ಮನವಿ ಮಾಡಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿ ಮತ್ತು ಕಟ್ಟಡ ನವೀಕೃತಗೊಳಿಸಿದ ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು. ಸೆಲ್ಕೋ ಸೋಲಾರ್‌ ಸಂಸ್ಥೆಯ ಡಿಜಿಎಂ ಗುರುಪ್ರಸಾದ್‌ ಶೆಟ್ಟಿ ಸೋಲಾರ್‌ ವಿದ್ಯುತ್‌ ಬಗ್ಗೆ ಮಾಹಿತಿ ನೀಡಿದರು. ವಿವಿಧ ಸವಲತ್ತುಗಳನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಹೆಬ್ರಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಣಾಧಿಕಾರಿ ವಿಜಯಾ, ಹೆಬ್ರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪೆರ್ಡೂರು ಸದಾಶಿವ ಸೇರ್ವೆಗಾರ್‌,ಸೆಲ್ಕೋ ಸೋಲಾರ್‌ ಸಂಸ್ಥೆಯ ವಿವಿಧ ಪ್ರತಿನಿಧಿಗಳು ಉಪಸ್ಥಿತರಿದ್ದರು. ಹೆಬ್ರಿ ಗ್ರಾಮ ಪಂಚಾಯಿತಿಯ ಪ್ರಸಾದ್‌ ಶೆಟ್ಟಿ ನಿರೂಪಿಸಿ ವಂದಿಸಿದರು. ಪಿಡಿಒ ಸದಾಶಿವ ಸೇರ್ವೆಗಾರ್‌ ಸ್ವಾಗತಿಸಿದರು.

LEAVE A REPLY

Please enter your comment!
Please enter your name here