ಹೆಬ್ರಿ : ಬೇಳಂಜೆ ಗ್ರಾಮದ ಅಂಚೆ ಕಚೇರಿಯಲ್ಲಿ ಪೊಸ್ಟ್ ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ದಾನಮ್ಮ ತೇಲಿ ಎಂಬವರು ಸೋಮವಾರ ಬೇಳಂಜೆ ಗ್ರಾಮದ ಹಾನಾಡಿ ತುಮರಿಜೆಡ್ಡಿನ ಮೋಹನದಾಸ ಅವರ ಮನೆಗೆ ರಿಜಿಸ್ಟರ್ ಪೊಸ್ಟ್‌ನ್ನು ತನ್ನ ಗಂಡನೊಂದಿಗೆ ನೀಡಲು ಹೋಗಿ ಮನೆಯ ಗೇಟಿನ ಎದುರು ರಸ್ತೆಯಿಂದ ಕೂಗಿ ಪೊಸ್ಟ್ ಇದೆ ಹೇಳಿದಾಗ ಮೋಹನದಾಸ ಅವರ ಮನೆಯಿಂದ 3 ನಾಯಿಗಳು ಓಡಿ ಬಂದು ಕಂಪೌಡನಿಂದ ನುಸುಳಿ ದಾಳಿ ನಡೆಸಿದ ಘಟನೆ ಸಂಭವಿಸಿದೆ. ದಾನಮ್ಮ ತೇಲಿ ಮತ್ತು ಅವರ ಪತಿಗೆ ನಾಯಿಯು ಕಚ್ಚಿ ಪರಚಿ ಗಾಯಗೊಳಿಸಿದೆ. ದಾನಮ್ಮ ತೇಲಿ ಅವರ ತಲೆಯ ಭಾಗಕ್ಕೆ ಸೊಂಟದ ಭಾಗ, ೨ ಕಾಲುಗಳಿಗೆ ಗಂಬೀರ ಗಾಯವಾಗಿದೆ. ದೇಹದ ಮೇಲೆ ಅಲ್ಲಲ್ಲಿ ಪರಚಿದ ಗಾಯವಾಗಿದೆ. ದಾನಮ್ಮ ತೇಲಿ ಅವರ ಗಂಡನಿಗೆ ಬಲಕೈಗೆ ಕಚ್ಚಿದ ಗಾಯ, ಎಡಕೈ ತೋಳಿನ ಬಳಿ ಹಾಗೂ ಎದೆಯ ಎಡಭಾಗದಲ್ಲಿ ಉಗುರಿನಿಂದ ಪರಚಿದ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಚ್ಚಿದ ನಾಯಿಗಳು ಪಿಟ್ ಬುಲ್ ಜಾತಿಯ ನಾಯಿಗಳಾಗಿದ್ದು ಮೋಹನದಾಸ ಅವರು ನಾಯಿಗಳನ್ನು ಸೂಕ್ತ ಸಂರಕ್ಷಣೆ ಮಾಡಿರುವುದಿಲ್ಲ, ಸೂಕ್ತ ಎಚ್ಚರಿಕೆ ವಹಿಸದೆ ನಿರ್ಲಕ್ಷತನ ಮಾಡಿದ್ದಾರೆ ಎಂದು ದಾನಮ್ಮ ತೇಲಿ ಹೆಬ್ರಿ ಪೊಲೀಸ್ ಠಾಣೆಗೆ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.