ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಅಭೂತಪೂರ್ವ ಕ್ಷಣಗಳ ಅನಿಸಿಕೆಗಳನ್ನು ಹಂಚಿಕೊಂಡ ಕರ್ನಾಟಕದ ಹಿಂದೂ ನಾಯಕರು ಮತ್ತು ಗಣ್ಯರು

0
145

23 ದೇಶಗಳಿಂದ ಮತ್ತು ಭಾರತದಿಂದ 20000 ಧರ್ಮಪ್ರೇಮಿಗಳು ಮತ್ತು ಸಾಧಕರ ಉತ್ಸಾಹಭರಿತ ಸಹಭಾಗ ; ಕರ್ನಾಟಕದಿಂದ 5000ಕ್ಕೂ ಅಧಿಕ ಹಿಂದೂಗಳ ಸಹಭಾಗ !

ಫೋಂಡಾ, (ಗೋವಾ) – ಸನಾತನ ರಾಷ್ಟ್ರದ ಸ್ಥಾಪನೆಗೆ ಸ್ಫೂರ್ತಿದಾಯಕವಾದ ‘ಸನಾತನ ರಾಷ್ಟ್ರ ಶಂಖನಾದ ಮಹೋತ್ಸವ’ವು ಗೋವಾ ಎಂಜಿನಿಯರಿಂಗ್ ಕಾಲೇಜು ಮೈದಾನದಲ್ಲಿ ಅತ್ಯಂತ ಉತ್ಸಾಹ, ಭಕ್ತಿ ಮತ್ತು ರಾಷ್ಟ್ರಪ್ರೇಮದಿಂದ ತುಂಬಿದ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು. ಈ 6 ದಿನಗಳ ಭವ್ಯ ಮಹೋತ್ಸವದಲ್ಲಿ ೨೩ ದೇಶಗಳಿಂದ ಮತ್ತು ಭಾರತದ ವಿವಿಧ ರಾಜ್ಯಗಳಿಂದ ಸುಮಾರು 20000 ಧರ್ಮಪ್ರೇಮಿ ನಾಗರಿಕರು ಮತ್ತು ಸಾಧಕರು ಭಾಗವಹಿಸಿ ಏಕತೆಯನ್ನು ಪ್ರದರ್ಶಿಸಿದರು. “ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ನಿಜವಾದ ಅರ್ಥದಲ್ಲಿ ಶಂಖನಾದ ಮೊಳಗಿದೆ. ಧರ್ಮಾಭಿಮಾನ ಜಾಗೃತಗೊಂಡಿದೆ. ಈ ಮಹೋತ್ಸವವು ಇತಿಹಾಸವನ್ನು ನಿರ್ಮಿಸುವ ಕ್ಷಣವಾಗಿತ್ತು ಮತ್ತು ಸನಾತನ ರಾಷ್ಟ್ರ ಸ್ಥಾಪನೆಯ ದಿಕ್ಕಿನಲ್ಲಿ ಇಟ್ಟಿರುವ ಒಂದು ಮಹತ್ವಪೂರ್ಣ ಹೆಜ್ಜೆಯಾಗಿದೆ” ಎಂದು ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಅಭಯ ವರ್ತಕ ಅವರು ಮಾಹಿತಿ ನೀಡಿದರು.

ಮಹೋತ್ಸವದಲ್ಲಿ ದೇಶದ ಅನೇಕ ಧರ್ಮಗುರುಗಳು, ರಾಷ್ಟ್ರನಿಷ್ಠ ನಾಯಕರು ಮತ್ತು ಚಿಂತಕರು ಮಾರ್ಗದರ್ಶನ ಮಾಡಿದರು. ಕರ್ನಾಟಕದ ಉಡುಪಿಯೂ ಸೇರಿದಂತೆ 5000ಕ್ಕೂ ಅಧಿಕ ಹಿಂದುತ್ವನಿಷ್ಠರು, ಗಣ್ಯರು, ಸಾಧಕರು ಉಪಸ್ಥಿತರಿದ್ದರು.

ಅಭೂತಪೂರ್ವ ಕ್ಷಣಗಳ ಅನಿಸಿಕೆಗಳನ್ನು ಹಂಚಿಕೊಂಡ ಹಿಂದೂ ನಾಯಕರು ಮತ್ತು ಗಣ್ಯರು :

  1. ಕರ್ನಾಟಕದ ‘ಯುವ ಬ್ರಿಗೇಡ್’ನ ಸಂಸ್ಥಾಪಕರಾದ ಶ್ರೀ. ಚಕ್ರವರ್ತಿ ಸೂಲಿಬೆಲೆ : ವಿಜೃಂಭಣೆಯಿಂದ ನಡೆಯುತ್ತಿರುವ ಈ ಕಾರ್ಯಕ್ರಮವು ಮೂಲೆ ಮೂಲೆಗಳಿಂದ ಹಿಂದೂ ನಾಯಕರನ್ನು ಒಂದೇ ಉದ್ದೇಶದಿಂದ ಸೇರಿಸಿದೆ – ಅದು ಸನಾತನ ರಾಷ್ಟ್ರ . ನಮ್ಮ ರಾಷ್ಟ್ರಕ್ಕೆ ಕವಿದಿರುವ ಮೋಡವನ್ನು ಸರಿಸಿ ಪುನಃ ಸನಾತನ ರಾಷ್ಟ್ರದ ನಿರ್ಮಿತಿಯ ಕಾರ್ಯ ಈ ಮಹೋತ್ಸವದ ಮೂಲಕ ನಡೆಯುತ್ತಿದೆ.
  2. ಶ್ರೀ. ಶ್ಯಾಮಸುದರ್ಶನ ಹೊಸಮೂಲೆ, ಸಂಪಾದಕರು, ಕಹಳೆ ನ್ಯೂಸ್ : ಸನಾತನ ಸಂಸ್ಥೆಯು ಸನಾತನ ರಾಷ್ಟ್ರ ಶಂಖನಾದ ಕಾರ್ಯಕ್ರಮದ ಮೂಲಕ ಹಿಂದೂ ರಾಷ್ಟ್ರ ನಿರ್ಮಾಣಕ್ಕೆ ಪ್ರೇರಣೆ ನೀಡಿದೆ. ಭಾರತವು ಹಿಂದೂ ರಾಷ್ಟ್ರವಾಗಿತ್ತು, ಇದೆ ಮತ್ತು ಇರಲಿದೆ. ಸದ್ಯ ಮೋಡ ಕವಿದಿದ್ದು, ಅದನ್ನು ಸರಿಸಿ ಭವ್ಯ ಹಿಂದೂ ರಾಷ್ಟ್ರವನ್ನು ಕಾಣಲಿದ್ದೇವೆ. ಛ.ಶಿವಾಜಿ ಮತ್ತು ಛ.ಸಂಭಾಜಿ ಮಹಾರಾಜರ ಶಸ್ತ್ರಾಸ್ತ್ರ ಪ್ರದರ್ಶನದೊಂದಿಗೆ, ‘ಅಹಿಂಸಾ ಪರಮೋಧರ್ಮಃ’ದ ಜೊತೆಗೆ ‘ಧರ್ಮ ಹಿಂಸಾ ತಥೈವಚ’ ವನ್ನು ನೆನಪಿಸುವ ಕಾರ್ಯವನ್ನು ಸಂಸ್ಥೆ ಮಾಡಿದೆ.
  3. ಶ್ರೀ. ರಮೇಶ ಕಾರ್ಣಿಕ್, ನಿವೃತ್ತ ಏರ್‍‌ ಮಾರ್ಶಲ್‌ ಮತ್ತು ಅಧ್ಯಕ್ಷರು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಕೆರ್ವಾಸೆ : ಸನಾತನ ಸಂಸ್ಥೆಯು ಆಯೋಜಿಸಿದ ಶಂಖನಾದ ಮಹೋತ್ಸವ ಕಾರ್ಯಕ್ರಮವು ಅದ್ಭುತ ಕಾರ್ಯಕ್ರಮವಾಗಿದೆ. ಸನಾತನ ಹಿಂದೂ ರಾಷ್ಟ್ರದ ಸ್ಥಾಪನೆ ನಮ್ಮ‌ ದ್ಯೇಯವಾಗಿದೆ. ಈ ನಿಟ್ಟಿನಲ್ಲಿ ಶಂಖನಾದ ಮೊಳಗಿದೆ ಇದು ಭಾರತದ ಮೂಲೆ ಮೂಲೆಗಳಿಗೂ ತಲುಪಿದೆ. ಇದರ ಮುಂದಿನ ಹೆಜ್ಚೆ ಎಂದರೆ ಹಿಂದೂ ರಾಷ್ಟ್ರದ ಸ್ಥಾಪನೆಯ ಗುರಿಯನ್ನು ತಲುಪಲು ಸಾಮಾಜಿಕವಾಗಿ ಮತ್ತು ಸಾವಿಂಧಾನಿಕವಾಗಿ ಪ್ರಯತ್ನ ಮಾಡಬೇಕಾಗಿದೆ. ಅಖಿಲ ಭಾರತ ಹಿಂದೂ ಸಂಘಟನೆಯಾಗಿ ಕಾರ್ಯನಿರತವಾಗಬೇಕಾಗಿದೆ.
  4. ಶ್ರೀ. ಗುರುರಾಜ್ ಗಂಟಿಹೊಳೆ, ಶಾಸಕರು, ಬೈಂದೂರು : ಸನಾತನ ರಾಷ್ಟ್ರ ಶಂಖನಾದ ಮಹೋತ್ಸವದ ಮಾಧ್ಯಮದಿಂದ ಅನ್ಯ ದೇಶಗಳಲ್ಲಿ ಹಿಂದೂ ಸಂಘಟನೆಗಾಗಿ ಪ್ರಯತ್ನಿಸುವ ಹಾಗೂ ಧರ್ಮರಕ್ಷಣೆಗಾಗಿ ಹೋರಾಡುವ ವ್ಯಕ್ತಿಗಳನ್ನು ಗುರುತಿಸಲಾಗುತ್ತಿದೆ. ಹಿಂದೂ ರಾಷ್ಟ್ರ ಸ್ಥಾಪನೆಯ ಕನಸನ್ನು ವಾಸ್ತವಿಕವಾಗಿ ಹಾಗೂ ಕಾನೂನಾತ್ಮಕವಾಗಿ ಹೇಗೆ ಸಾಕಾರಗೊಳಿಸಬಹುದು ಎಂಬುದನ್ನು ಈ ಭವ್ಯ ಹಾಗೂ ಅದ್ಭುತ ಕಾರ್ಯಕ್ರಮದಲ್ಲಿ ನಿರೂಪಿಸಲಾಗಿದೆ.

ಈ ಮಹೋತ್ಸವದಲ್ಲಿ ೧೫ ಸಂತರ ಪವಿತ್ರ ಪಾದುಕೆಗಳನ್ನು ದರ್ಶನ ಪಡೆಯುವ ಸುವರ್ಣಾವಕಾಶ ಭಕ್ತರಿಗೆ ದೊರಕಿತು, ಇದರಲ್ಲಿ ಕರ್ನಾಟಕದ ಬ್ರಹ್ಮಚೈತನ್ಯ ಶ್ರೀ ಗೊಂದಾವಲೇಕರ ಮಹಾರಾಜ, ಶ್ರೀ ಬ್ರಹ್ಮಾನಂದಜಿ ಮಹಾರಾಜ, ಪ. ಪೂ. ಶ್ರೀಧರಸ್ವಾಮೀಜಿ, ಹುಬ್ಬಳಿಯ ಸಿದ್ಧಾರೂಢ ಸ್ವಾಮೀಗಳ ಪಾದುಕೆಗಳ ದುರ್ಲಭ ದರ್ಶನದ ಲಾಭವನ್ನು ಸಾವಿರಾರು ಭಕ್ತರು ಪಡೆದುಕೊಂಡರು.

ಈ ಮಹೋತ್ಸವದಲ್ಲಿ ಆಧ್ಯಾತ್ಮಿಕ, ಸಾಂಸ್ಕೃತಿಕ ಮತ್ತು ರಾಷ್ಟ್ರಹಿತ ಸಾಧಿಸುವ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಭಾರತದ ವಿಜಯಕ್ಕಾಗಿ ‘ಶತಚಂಡಿ ಯಾಗ’, ಶ್ರೀ ಲಲಿತಾ ತ್ರಿಶತೀ ಪೂಜೆ , ಎಲ್ಲರಿಗೂ ಉತ್ತಮ ಆರೋಗ್ಯಕ್ಕಾಗಿ ‘ಮಹಾಧನ್ವಂತರಿ ಯಾಗ’ , ಮತ್ತು ರಾಷ್ಟ್ರ ರಕ್ಷಣೆಗಾಗಿ ಸಾಮೂಹಿಕ ಹವನವನ್ನು ನಡೆಸಲಾಯಿತು.

ಈ ಮಹೋತ್ಸವದ ಒಂದು ಐತಿಹಾಸಿಕ ಮತ್ತು ಹೃದಯಸ್ಪರ್ಶಿ ಕ್ಷಣವೆಂದರೆ ಸನಾತನ ಧರ್ಮಧ್ವಜಾರೋಹಣ. ಈ ವೇಳೆ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಅವರ ಕರಕಮಲದಿಂದ ಸನಾತನ ಧರ್ಮಧ್ವಜವನ್ನು ಶಂಖನಾದ ಮತ್ತು ವೇದಮಂತ್ರ ಘೋಷದೊಂದಿಗೆ ಏರಿಸಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರ ಕಣ್ಣುಗಳಲ್ಲಿ ಅಭಿಮಾನ, ಹೃದಯದಲ್ಲಿ ಭಕ್ತಿ ಮತ್ತು ತುಟಿಗಳಲ್ಲಿ ಗುರುಗೀತೆ ಇತ್ತು. ಇಡೀ ವಾತಾವರಣ ಭಕ್ತಿಪರವಶವಾಗಿತ್ತು.

LEAVE A REPLY

Please enter your comment!
Please enter your name here