ಸಾಮಾಜಿಕ ಜಾಲತಾಣದಲ್ಲಿ ಜನರ ಆರೋಗ್ಯ ಭಿಕ್ಷಾಟನೆ – ಆರೋಗ್ಯ ಇಲಾಖೆಯ ವೈಫಲ್ಯವೇ?

0
142

ಇಂದಿನ ಡಿಜಿಟಲ್ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ಕೇವಲ ಸಂವಹನದ ಸಾಧನವಾಗದೇ, ಜನರ ಜೀವನದ ಸಮಸ್ಯೆಗಳನ್ನು ಮುಕ್ತವಾಗಿ ಚರ್ಚಿಸುವ ವೇದಿಕೆಯಾಗಿವೆ. ಆದರೆ, ಈ ವೇದಿಕೆಯಲ್ಲಿ ಒಂದು ಕಳವಳಕಾರಿ ಚಿತ್ರಣ ಎದ್ದುಕಾಣುತ್ತಿದೆ – ಜನರು ತಮ್ಮ ಅರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯಲು ಆರ್ಥಿಕ ನೆರವಿಗಾಗಿ ಭಿಕ್ಷಾಟನೆ ಮಾಡುವ ದೃಶ್ಯ. ಇದು ಭಾರತ ಸರ್ಕಾರದ ಮತ್ತು ಕರ್ನಾಟಕ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ಗಂಭೀರ ವೈಫಲ್ಯವನ್ನು ಎತ್ತಿ ತೋರಿಸುತ್ತದೆಯೇ ಎಂಬ ಪ್ರಶ್ನೆ ಎದುರಾಗುತ್ತಿದೆ.

ಸಾಮಾಜಿಕ ಜಾಲತಾಣದ ವೈಪರೀತ್ಯ

ಆರೋಗ್ಯ ಸಚಿವರು, ಶಾಸಕರು, ಸಂಸದರು ಹಾಗೂ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸಾಮಾಜಿಕ ಜಾಲತಾಣಗಳನ್ನು ತಮ್ಮ ವೈಯಕ್ತಿಕ ಮತ್ತು ಇಲಾಖೆಯ ವರ್ಚಸ್ಸು ಹೆಚ್ಚಿಸಿಕೊಳ್ಳಲು ಬಳಸುತ್ತಿದ್ದಾರೆ. ಆದರೆ, ಅದೇ ವೇದಿಕೆಯಲ್ಲಿ ಜನರು ತಮ್ಮ ಜೀವ ಉಳಿಸಿಕೊಳ್ಳಲು ಆರ್ಥಿಕ ಸಹಾಯಕ್ಕಾಗಿ ಕಾಯಾಡುವ ದೃಶ್ಯವು ಆರೋಗ್ಯ ವ್ಯವಸ್ಥೆಯ ಕುರಿತು ಗಂಭೀರ ಚಿಂತನೆಗೆ ಒಡ್ಡುತ್ತದೆ. ಜನರು ಕ್ಯಾನ್ಸರ್, ಕಿಡ್ನಿ ವೈಫಲ್ಯ, ಹೃದಯ ಸಂಬಂಧಿತ ಕಾಯಿಲೆಗಳಿಗೆ ಚಿಕಿತ್ಸೆಗಾಗಿ ಕೋಟಿಗಟ್ಟಲೆ ಹಣಕ್ಕಾಗಿ ಕರೆ ನೀಡುವುದು ಇಂದಿನ ದೃಶ್ಯವಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿಗಳು, ರಾಜ್ಯ ಆರೋಗ್ಯ ಕಮಿಷನರ್, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಏನು ಕ್ರಮ ಕೈಗೊಂಡಿದ್ದಾರೆ? ಆರೋಗ್ಯ ಸಚಿವರು ಈ ಸಮಸ್ಯೆಗಳ ಬಗ್ಗೆ ದೈನಂದಿನ ಮಾಹಿತಿ ಪಡೆದುಕೊಂಡು ಕಾರ್ಯೋನ್ಮುಖರಾಗಿದ್ದಾರೆಯೇ?

ವಿಧಾನಸಭೆ ಮತ್ತು ಲೋಕಸಭೆಯಲ್ಲಿ ಮೌನ
ಚುನಾವಣೆಯ ಸಂದರ್ಭದಲ್ಲಿ ಶಾಸಕರು, ಸಂಸದರು ಮತಗಳಿಗಾಗಿ ಜನರ ಬಳಿಗೆ ಭಿಕ್ಷಾಟನೆಗೆ ತೆರಳುವುದು ಸಾಮಾನ್ಯ. ಆದರೆ, ಚುನಾಯಿತರಾದ ಬಳಿಕ ಜನರ ಆರೋಗ್ಯ ಸಮಸ್ಯೆಗಳ ಬಗ್ಗೆ ವಿಧಾನಸಭೆಯಲ್ಲಿ ಇಲ್ಲವೇ ಲೋಕಸಭೆಯಲ್ಲಿ ಚರ್ಚೆ ನಡೆಸಿದ ದಾಖಲೆ ಎಷ್ಟಿದೆ? ಸಂವಿಧಾನದ ಮೇಲೆ ಪ್ರಮಾಣವಿಡುವ ಶಾಸಕರು, ಸಂಸದರು, ಸಚಿವರು ಕನಿಷ್ಠ ಸಂವಿಧಾನದ 21ನೇ ಪರಿಚ್ಛೇದವನ್ನಾದರೂ ಓದಿದ್ದಾರೆಯೇ? ಈ ಪರಿಚ್ಛೇದವು ಪ್ರತಿಯೊಬ್ಬ ಭಾರತೀಯನಿಗೆ ಬದುಕುವ ಹಕ್ಕನ್ನು ಖಾತರಿಪಡಿಸುತ್ತದೆ, ಇದರಲ್ಲಿ ಆರೋಗ್ಯ ಸೇವೆಯೂ ಸೇರಿದೆ. ಆದರೆ, ಈ ಹಕ್ಕನ್ನು ಒದಗಿಸುವಲ್ಲಿ ಆರೋಗ್ಯ ಇಲಾಖೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಿದೆ?

ಸಂವಿಧಾನದ 21ನೇ ಪರಿಚ್ಛೇದ: ಬದುಕುವ ಹಕ್ಕು
ಸಂವಿಧಾನದ 21ನೇ ಪರಿಚ್ಛೇದವು ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ರಕ್ಷಣೆಯನ್ನು ಒದಗಿಸುತ್ತದೆ. ಇದರಲ್ಲಿ ಸಮರ್ಪಕ ಆರೋಗ್ಯ ಸೇವೆಯೂ ಒಂದು ಅವಿಭಾಜ್ಯ ಅಂಗವಾಗಿದೆ. ಆದರೆ, ಜನರು ಆರೋಗ್ಯ ಸೇವೆಗಾಗಿ ಸಾಮಾಜಿಕ ಜಾಲತಾಣದಲ್ಲಿ ಭಿಕ್ಷಾಟನೆ ಮಾಡುವುದು ಈ ಹಕ್ಕಿನ ಉಲ್ಲಂಘನೆಯೇ ಅಲ್ಲವೇ? ರಾಜ್ಯದ ಐಎಎಸ್ ಅಧಿಕಾರಿಗಳು ಈ ಸಂವಿಧಾನದ ಆಶಯವನ್ನು ಜನರಿಗೆ ವಿವರಿಸಿ, ಆರೋಗ್ಯ ಸೇವೆಯನ್ನು ಒದಗಿಸುವಲ್ಲಿ ಏಕೆ ವಿಫಲರಾಗಿದ್ದಾರೆ?

ಆರೋಗ್ಯ ಇಲಾಖೆಯ ವೈಫಲ್ಯ

ಆರೋಗ್ಯ ಇಲಾಖೆಯ ಈ ನಿರ್ಲಕ್ಷ್ಯವು ಜನರ ಜೀವನದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಔಷಧಿಗಳ ಕೊರತೆ, ತಜ್ಞ ವೈದ್ಯರ ಕೊರತೆ – ಇವೆಲ್ಲವೂ ಜನರನ್ನು ಖಾಸಗಿ ಆಸ್ಪತ್ರೆಗಳ ಕಡೆಗೆ ತಿರುಗಿಸುತ್ತಿವೆ. ಖಾಸಗಿ ಆಸ್ಪತ್ರೆಗಳ ದುಬಾರಿ ಚಿಕಿತ್ಸೆಯನ್ನು ಭರಿಸಲಾಗದೇ, ಜನರು ಸಾಮಾಜಿಕ ಜಾಲತಾಣದಲ್ಲಿ ಆರ್ಥಿಕ ಸಹಾಯಕ್ಕಾಗಿ ಕಾಯಾಡುವಂತಾಗಿದೆ. ಇದು ಆರೋಗ್ಯ ಇಲಾಖೆಯ ವೈಫಲ್ಯವನ್ನು ಸ್ಪಷ್ಟವಾಗಿ ತೋರಿಸುತ್ತದೆ.

ತಮಗೆ ಕೊನೆಯ ಮಾತು
ಆರೋಗ್ಯ ಎನ್ನುವುದು ಮಾನವನ ಮೂಲಭೂತ ಹಕ್ಕು. ಆದರೆ, ಈ ಹಕ್ಕನ್ನು ಒದಗಿಸುವಲ್ಲಿ ಸರ್ಕಾರದ ಆರೋಗ್ಯ ಇಲಾಖೆ ವಿಫಲವಾಗಿರುವುದು ಸ್ಪಷ್ಟ. ಶಾಸಕರು, ಸಂಸದರು, ಸಚಿವರು ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಸಾಮಾಜಿಕ ಜಾಲತಾಣದಲ್ಲಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಬದಲು, ಜನರ ಆರೋಗ್ಯ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು. ಸಂವಿಧಾನದ 21ನೇ ಪರಿಚ್ಛೇದದ ಆಶಯವನ್ನು ಈಡೇರಿಸುವ ನಿಟ್ಟಿನಲ್ಲಿ ಜನರ ಜೀವನವನ್ನು ಉಳಿಸುವ ಕಾರ್ಯಕ್ಕೆ ಆದ್ಯತೆ ನೀಡಬೇಕು. ಇದು ಕೇವಲ ಜವಾಬ್ದಾರಿಯಷ್ಟೇ ಅಲ್ಲ, ಜನರಿಗೆ ಮಾಡಬೇಕಾದ ಕರ್ತವ್ಯವೂ ಹೌದು.

LEAVE A REPLY

Please enter your comment!
Please enter your name here