ತುಳು ಭವನ: ರಿಯಾಯಿತಿ ರದ್ದು ಮಾಡಲಾಗಲಿಲ್ಲ”

0
82

ಮಂಗಳೂರು: ಖಾಸಗಿ ಸಂಘ, ಸಂಸ್ಥೆಗಳು ಆಯೋಜಿಸುವ ತುಳು ಭಾಷೆ, ಸಾಹಿತ್ಯ , ಸಂಸ್ಕ್ರತಿಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ಮಂಗಳೂರಿನ ತುಳು ಭವನದಲ್ಲಿ ವಿಶೇಷವಾಗಿ ಶೇಕಡಾ ಐವತ್ತರಷ್ಟು ರಿಯಾಯಿತಿಯಲ್ಲಿ ಸಭಾಂಗಣವನ್ನು ನೀಡಲಾಗುತ್ತಿದೆ. ಇದೇ ವೇಳೆ ಯಕ್ಷಗಾನ , ನಾಟಕ ಆಯೋಜಿಸುವವರಿಗೆ ಇನ್ನೂ ಹೆಚ್ಚಿನ ರಿಯಾಯಿತಿಯಲ್ಲಿ ಸಭಾಂಗಣವನ್ನು ಒದಗಿಸಲಾಗುತ್ತದೆ, ಯಾವುದೇ ರಿಯಾಯಿತಿಯನ್ನು ರದ್ದುಪಡಿಸಲಾಗಿಲ್ಲ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಂಘ ಸಂಸ್ಥೆಗಳು ಅಕಾಡೆಮಿಯೊಂದಿಗೆ ಸಹಭಾಗಿತ್ವದಲ್ಲಿ ನಡೆಸುವ ಕಾರ್ಯಕ್ರಮಗಳಿಗೆ ಉಚಿತವಾಗಿ ಸಭಾಂಗಣ ಒದಗಿಸಲಾಗುತ್ತದೆ. ಸಾಹಿತ್ಯ , ಸಾಂಸ್ಕ್ರತಿಕ ಹೊರತುಪಡಿಸಿದ ಖಾಸಗಿ ಕಾರ್ಯಕ್ರಮಗಳಿಗೆ ಮಾತ್ರ ಪೂರ್ತಿ ಬಾಡಿಗೆ ಪಡೆಯಲಾಗುತ್ತಿದೆ.
ಯಾವುದೇ ಸಂಘ , ಸಂಸ್ಥೆಗಳು ನಡೆಸುವ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಸರ್ಟಿಫಿಕೇಟ್ ನೀಡುವುದು ಅಕಾಡೆಮಿ ಕಾರ್ಯವ್ಯಾಪ್ತಿಗೆ ಸಂಬಂಧಿಸಿದ ವಿಚಾರವಾಗಿರುವುದಿಲ್ಲ ಅಥವಾ ಅಕಾಡೆಮಿಯು ಪರೀಕ್ಷೆ ಪ್ರಾಧಿಕಾರವಾಗಿರುವುದಿಲ್ಲ. ಅಕಾಡೆಮಿಯ ವತಿಯಿಂದ ನೇರವಾಗಿ ಅಥವಾ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆಸುವ ತರಬೇತಿ ಶಿಬಿರ , ಕಮ್ಮಟ, ಸೆಮಿನಾರ್ ಗಳಲ್ಲಿ ಭಾಗವಹಿಸುವವರಿಗೆ ಸರ್ಟಿಫೀಕೇಟ್ ಆಯಾ ಸಂದರ್ಭದಲ್ಲಿ ನೀಡಲಾಗುತ್ತಿದೆ.
ತುಳು ಮಾತೃ ಭಾಷಾ ಪ್ರಮಾಣ ಪತ್ರವನ್ನು (ತುಳು ಕೋಟ ಸರ್ಟಿಫೀಕೇಟ್) ಆಯಾ ವಿದ್ಯಾರ್ಥಿಗಳು ವಾಸಿಸುವ ತಾಲೂಕಿನ ತಹಶೀಲ್ದಾರರು ನೀಡುವವರಾಗಿದ್ದು, ಎಲ್ಲಾ ತಾಲೂಕುಗಳಲ್ಲಿ ಭಾಷಾ ಪ್ರಮಾಣ ಪತ್ರ ನೀಡಲಾಗುತ್ತಿದೆ. ಭಾಷಾ ಪ್ರಮಾಣ ಪತ್ರ ನೀಡುವ ಅಧಿಕಾರ ತಾಲೂಕು ದಂಡಾಧಿಕಾರಿಗಳ ವ್ಯಾಪ್ತಿಗೆ ಸೇರಿದ್ದಾಗಿರುತ್ತದೆ, ಕರ್ನಾಟಕದ ಯಾವುದೇ ಅಕಾಡೆಮಿಯು ವಿದ್ಯಾರ್ಥಿಗಳಿಗೆ ಭಾಷಾ ಪ್ರಮಾಣ ನೀಡುವ ಸಕ್ಷಮ ಪ್ರಾಧಿಕಾರವಾಗಿರುವುದಿಲ್ಲ. ವಿದ್ಯಾರ್ಥಿಗಳಿಗೆ ಹಾಗೂ ಪೋಷಕರಿಗೆ ಈ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಭಾಷಾ ಪ್ರಮಾಣ ಪತ್ರದ ಅರ್ಜಿ ನಮೂನೆಯನ್ನು ತುಳು ಅಕಾಡೆಮಿಯ ನೋಟಿಸ್ ಬೋರ್ಡ್ ನಲ್ಲಿ ಲಗತ್ತಿಸಲಾಗಿರುತ್ತದೆ.
ವಿದ್ಯಾರ್ಥಿಗಳು ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರವನ್ನು ಪಡೆಯುವ ರೀತಿಯಲ್ಲೇ ಮಾತೃ ಭಾಷಾ ಪ್ರಮಾಣ ಪತ್ರವನ್ನು ಪಡೆಯಲು ಅವಕಾಶ ಇರುವಂತಹದು. ಶಾಲಾ ದಾಖಲಾತಿ ವಿವರದೊಂದಿಗೆ ತಹಶೀಲ್ದಾರರ ಕಛೇರಿಗೆ ಅರ್ಜಿ ಸಲ್ಲಿಸಿದಾಗ ಭಾಷಾ ಪ್ರಮಾಣ ಪತ್ರವನ್ನು ತಹಶೀಲ್ದಾರರು ನೀಡುತ್ತಾರೆ. ತುರ್ತು ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದ ದಿನದಂದೇ ಈ ಪ್ರಮಾಣ ಪತ್ರವನ್ನು ನೀಡುತ್ತಾರೆ.
ತಹಶೀಲ್ದಾರರ ಹೊರತುಪಡಿಸಿ ಯಾರೇ ನೀಡುವ ಮಾತೃ ಭಾಷಾ ಸರ್ಟಿಫೀಕೇಟ್ ಗೆ ಕಾನೂನಿನ ಮಾನ್ಯತೆ ಇರುವುದಿಲ್ಲ ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಈ ಮೇಲಿನ ಎಲ್ಲ ವಿಚಾರಗಳ ಬಗ್ಗೆ ಮಂಗಳೂರು ದಕ್ಷಿಣದ ಶಾಸಕ ಶ್ರೀ ವೇದವ್ಯಾಸ ಕಾಮತ್ ಅವರು ಮಾಹಿತಿಯ ಕೊರತೆಯಿಂದ ವಾಸ್ತವ ಅಲ್ಲದ ಹೇಳಿಕೆಯನ್ನು ನೀಡಿರುವುದರಿಂದ ಈ ಸ್ಪಷ್ಟೀಕರಣವನ್ನು ನೀಡುವುದು ಅಗತ್ಯವಾಯಿತು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

LEAVE A REPLY

Please enter your comment!
Please enter your name here