
ವರಂಗದಲ್ಲಿ ಆಧುನಿಕ ತಂತ್ರಜ್ಞಾನದ ರೋವರ್ ಸರ್ವೆ ಕಾರ್ಯ ಆರಂಭ.
ಹೆಬ್ರಿ : ರಾಜ್ಯದ ಬುಡಕಟ್ಟು, ಭೂರಹಿತ ಮತ್ತು ಅರಣ್ಯ ಸಮುದಾಯಗಳು ಕೃಷಿ ಸಾಗುವಾಳಿ ಮಾಡಿಕೊಂಡು ಬರುತ್ತಿದ್ದ ಭೂಮಿಗೆ ದಶಕಗಳಿಂದ ಹಕ್ಕುಪತ್ರಗಳು ಇಲ್ಲದೆ ಜನತೆ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳಿಂದ ವಂಚಿತರಾಗಿದ್ದು ಸರ್ಕಾರ ಇದೀಗ ಮಹತ್ವದ ನಿರ್ಧಾರ ಮಾಡಿ ಬಗರ್ ಹುಕುಂ, ಅಕ್ರಮಸಕ್ರಮ ಅರ್ಜಿಗಳ ವಿಲೇವಾರಿಗಾಗಿ ಭೂದಾಖಲೆ ಮತ್ತು ಭೂಮಾಪನ ಇಲಾಖೆಯಿಂದ ಆಧುನಿಕ ತಂತ್ರಜ್ಞಾನದ ರೋವರ್ ಸರ್ವೆ ಕಾರ್ಯ ಮಾಡಿಸಿ ಶೀಘ್ರವಾಗಿ ಅರ್ಜಿಗಳನ್ನು ವಿಲೇವಾರಿ ಮಾಡಿ ಹಕ್ಕುಪತ್ರ ನೀಡುವ ಕಾರ್ಯಕ್ಕೆ ಮುಂದಾಗಿದೆ. ಇದರ ಭಾಗವಾಗಿ ಹೆಬ್ರಿ ತಾಲ್ಲೂಕಿನ ವರಂಗ ಗ್ರಾಮದ ಕೃಷಿಕ್ಷೇತ್ರದಲ್ಲಿ ಬಗರ್ ಹುಕುಂ ಅರ್ಜಿಗಳ ವಿಲೇವಾರಿಗಾಗಿ ಆಧುನಿಕ ತಂತ್ರಜ್ಞಾನದ ರೋವರ್ ಸರ್ವೆ ಕಾರ್ಯ ಭೂಮಾಪನ ಇಲಾಖೆಯ ಅಧಿಕಾರಿಗಳಿಂದ ಶುಕ್ರವಾರ ಆರಂಭಗೊಂಡಿದೆ. ಉಡುಪಿ ಜಿಲ್ಲೆಯ ಪ್ರತೀ ತಾಲ್ಲೂಕಿನಲ್ಲಿಯೂ ಸಾವಿರಾರು ಅರ್ಜಿಗಳು ಬಾಕಿಯಿದ್ದು ಜಿಲ್ಲೆಯ ಲಕ್ಷಾಂತರ ಮಂದಿ ಹಕ್ಕುಪತ್ರಕ್ಕಾಗಿ ಎದುರು ನೋಡುತ್ತಿದ್ದಾರೆ. ಕಂದಾಯ ಸಚಿವರು ಮುಂದಿನ ೬ ತಿಂಗಳಿನ ಒಳಗಾಗಿ ಬಹುತೇಕ ಬಾಕಿಯಿರುವ ಬಗರ್ ಹುಕುಂ ಅಕ್ರಮಸಕ್ರಮ ಅರ್ಜಿಗಳ ವಿಲೇವಾರಿ ಮಾಡಿ ಭೂಮಿಯ ವಾರೀಸುದಾರರಿಗೆ ಶಾಶ್ವತವಾದ ಹಕ್ಕುಪತ್ರ ನೀಡಬೇಕು ಎಂಬ ಸೂಚನೆಯ ಹಿನ್ನಲೆಯಲ್ಲಿ ಸಮಾರೋಪಾಧಿಯಲ್ಲಿ ಸರ್ವೆ ಕಾರ್ಯ ಬಿರುಸುಗೊಂಡಿದೆ. ಮಳೆಯ ನಡುವೆಯೂ ಹೆಬ್ರಿ ತಾಲ್ಲೂಕಿನಲ್ಲಿ ರೋವರ್ ಸರ್ವೆ ಕಾರ್ಯ ಬಿರುಸುಗೊಂಡಿದೆ. ಭೂಮಾಪನ ಇಲಾಖೆಯ ಪರ್ಯಾವೇಕ್ಷಕ ಉದಯ ಕುಮಾರ್ ಎಂ, ಹೆಬ್ರಿ ತಾಲ್ಲೂಕು ಸರ್ವೆಯರ್ ರವಿರಾಜ್, ಸಹಾಯಕ ಶಂಕರ್ ಶಿವಪುರ ಸರ್ವೆ ಕಾರ್ಯದಲ್ಲಿ ತೊಡಗಿದ್ದಾರೆ.
….
ಸರ್ಕಾರವೇ ಮನೆಗೆ ಬಂದು ಸರ್ವೆ ನಡೆಸುತ್ತಿರುವುದು ಖುಷಿ !
ನಾವು ಕೃಷಿ ಮಾಡಿಕೊಂಡು ಕಳೆದ ಹಲವು ವರ್ಷಗಳಿಂದ ಜೀವನ ಮಾಡಿಕೊಂಡು ಬರುತ್ತಿದ್ದೇವೆ. ಅರ್ಜಿ ಕೊಟ್ಟು ಹಲವಾರು ವರ್ಷಗಳೇ ಕಳೆದಿದೆ. ಈಗ ನಮ್ಮ ಸರ್ಕಾರದ ಅಧಿಕಾರಿಗಳೇ ನಮ್ಮ ಮನೆಬಾಗಿಲಿಗೆ ಬಂದು ನಮ್ಮ ಜಾಗದ ಸರ್ವೆ ಕಾರ್ಯ ನಡೆಸಿ ಕಡತ ತಯಾರಿಸಿ ಮುಂದೆ ಹಕ್ಕುಪತ್ರಕ್ಕಾಗಿ ಮಂಡಿಸುತ್ತಿರುವುದು ಮಹತ್ವದ ಕಾರ್ಯ, ನಮಗೆ ಅತ್ಯಂತ ಖುಷಿಯಾಗಿದೆ. ಇದರಿಂದ ಯಾವೂದೇ ಮಾಹಿತಿ ಅರಿಯದೇ ಹಕ್ಕುಪತ್ರ ಪಡೆಯದ ಸಾವಿರಾರು ಮಂದಿಗೆ ವರದಾನವಾಗಲಿದೆ.
- ಪಾಪಣ್ಣ ನಾಯ್ಕ್ ಮುನಿಯಾಲು.
ಬಗರ್ ಹುಕುಂ ಅರ್ಜಿದಾರ.