ಮೆಸ್ಕಾಂ ಇಲಾಖೆಯ ನಿರ್ಲಕ್ಷ್ಯದಿಂದ ಮಹಿಳೆಯೊಬ್ಬರು ಸಾವು: ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು

0
217

ಮೂಡುಬಿದಿರೆ: ತಾಲೂಕಿನ ಇರುವೈಲು ಗ್ರಾ.ಪಂ. ವ್ಯಾಪ್ತಿಯ ಹೊಸಮಾರಪದವಿನ ಬಂಗಾರುಗುಡ್ಡೆ ಎಂಬಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಬುಧವಾರ ಮುಂಜಾನೆ ನಡೆದಿದೆ.
ಮೃತರನ್ನು ಲಿಲ್ಲಿ ಡಿಸೋಜ (64) ಎಂದು ಗುರುತಿಸಲಾಗಿದೆ.
ಮನೆಯ ಮೇಲೆ ವಿದ್ಯುತ್ ತಂತಿ ಹರಿದುಹೋಗಿದ್ದು, ಆ ಕಂಬದಲ್ಲಿನ ವಿದ್ಯುತ್ ತಂತಿ ತುಂಡಾಗಿ ಬಚ್ಚಲು ಮನೆಯ ಹಿಂಭಾಗ ಬಿದ್ದಿದೆ, ಇದನ್ನು ಗಮನಿಸದ ಲಿಲ್ಲಿ ಡಿಸೋಜಾ ಅವರು ಬಚ್ಚಲು ಮನೆಯ ಹಿಂಭಾಗದಲ್ಲಿ ವಿದ್ಯುತ್ ತಂತಿ ತುಳಿದು ಸಾವನ್ನಪ್ಪಿದ್ದಾರೆ.
ಇದೇ ಮನೆಯ ಸದಸ್ಯರು ನಿನ್ನೆ ಮೆಸ್ಕಾಂ ಇಲಾಖೆಗೆ ಶರ್ಟ್ ಸರ್ಕ್ಯೂಟ್ ಆಗಿದೆಯೆಂದು ಕರೆ ಮಾಡಿ ತಿಳಿಸಿದರೂ ನಿರ್ಲಕ್ಷ್ಯವನ್ನು ತೋರಿದ ಪರಿಣಾಮವಾಗಿ ಈ ದುರ್ಘಟನೆಗೆ ಕಾರಣ ಇಲ್ಲದಿದ್ದರೆ ಜೀವವೊಂದು ಉಳಿಯುತ್ತಿತ್ತು ಎಂದು ಸ್ಥಳೀಯರು ದೂರಿದ್ದಾರೆ.

ಸುಮಾರು 30-40 ವರ್ಷಗಳಿಂದ ವಿದ್ಯುತ್ ತಂತಿಯ ವಯರ್ ಬದಲಿಸಿಲ್ಲ. ಹಾಗಾಗಿ ವಯರ್ ಗಳು ತುಂಡಾಗಿ ಬಿದ್ದರೂ ಮೆಸ್ಕಾಂ ಇಲಾಖೆ ಕ್ಯಾರೆ ಅನ್ನುತ್ತಿಲ್ಲವೆಂದು ಸ್ಥಳೀಯರು ಆರೋಪಿಸಿದ್ದಾರೆ. ಅಷ್ಟೇ ಅಲ್ಲದೇ ಮರದ ಕೊಂಬೆ ಕಡಿಯುವಂತೆ ಮೆಸ್ಕಾಂಗೆ ತಿಳಿಸಿದರೆ ಟಿ.ಸಿ ಆಫ್ ಮಾಡಿ ಕೊಡುತ್ತೇವೆ ನೀವೇ ಕಡಿಯಿರಿ ಎಂದು ಹೇಳುತ್ತಾರೆಂದು ಸ್ಥಳೀಯ ಗ್ರಾಮಸ್ಥರು ದೂರಿದರು. ಗ್ರಾಮಸಭೆಯಲ್ಲಿ ಪ್ರತಿಬಾರಿ ದೂರು ನೀಡಿದರೂ ಯಾವುದೇ ನಿರ್ಣಯ ಕೈಗೊಂಡಿಲ್ಲ. ಬಂಗಾರುಗುಡ್ಡೆ ವ್ಯಾಪ್ತಿಯಲ್ಲಿ ಅಧಿಕವಾಗಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿದೆ. ಪ್ರತಿಬಾರಿ ದೂರು ನೀಡಿದಾಗಲೂ ಕರೆಂಟ್ ಕಡಿತಗೊಂಡ ವಿದ್ಯುತ್ ತಂತಿಯನ್ನು ಜೋಡಿಸಿ ಹೋಗುತ್ತಾರೆ ವಿನಃ ತಂತಿಯನ್ನು ಬದಲಿಸುವುದಿಲ್ಲವೆಂದು ಗ್ರಾಮಸ್ಥರು ಮೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಈ ಹಿಂದೆ ನಡೆದ ಶಾಸಕರು ಮತ್ತು ತಹಶೀಲ್ದಾರ್ ಅವರು ಮಳೆಗೆ ಮೊದಲು ಮರದ ಕೊಂಬೆಗಳನ್ನು ಕಡಿಯುವಂತೆ ಸೂಚಿಸಿದ್ದರೂ, ಮೆಸ್ಕಾಂ ನಿರ್ಲಕ್ಷ್ಯ ವಹಿಸಿದ್ದು, ಈ ನಿರ್ಲಾಕ್ಷ್ಯವೇ ಈ ಘಟನೆಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಈ ಸಂಬಂಧ ಮೆಸ್ಕಾಂ ಇಲಾಖೆಯು 25 ಲಕ್ಷ ಪರಿಹಾರ ನೀಡಬೇಕೆಂದು ಸ್ಥಳೀಯ ಗ್ರಾಮಸ್ಥರು, ಜನಪ್ರತಿನಿಧಿಗಳು ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರು ಮೋಹನ್ ಟಿ ಅವರಿಗೆ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಅವರು ಮೆಸ್ಕಾಂ ಇಲಾಖೆಯಿಂದ ತಕ್ಷಣ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ವಾಗ್ದಾನ ನೀಡಿದರು. ಹೆಚ್ಚು ಪರಿಹಾರದ ಬೇಡಿಕೆಗಾಗಿ ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ಹೇಳಿದರು. ತುಂಡಾದ ಹಾಗೂ ಹಳೆಯ ವಯರ್ ಗಳನ್ನು ಕೂಡಲೇ ಬದಲಿಸಲಾಗುವುದು ಎಂದ ಅವರು ಮೃತಪಟ್ಟ ಲಿಲ್ಲಿ ಡಿಸೋಜಗೆ ಸಂತಾಪ ಸೂಚಿಸಿದರು.
ಮೆಸ್ಕಾಂನ ಬಗ್ಗೆ ಯಾವುದೇ ದೂರುಗಳಿದ್ದರೂ ಅದನ್ನು ತೀವ್ರವಾಗಿ ಪರಿಗಣಿಸಿ ಕೆಲಸ ಕಾರ್ಯಗಳನ್ನು ಮುನ್ಸೂಚನೆ ನೀಡಿದರು.

ಕ್ಷೇತ್ರದ ಶಾಸಕ ಉಮಾನಾಥ ಎ ಕೋಟ್ಯಾನ್ ಸ್ಥಳಕ್ಕೆ ಭೇಟಿ ನೀಡಿ ತಕ್ಷಣ ವಯರ್ ಗಳನ್ನು ಬದಲಿಸಿ ಸರಿಪಡಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿ , ಮೆಸ್ಕಾಂ ಇಲಾಖೆಯ ಎಮ್.ಡಿ ಯವರೊಂದಿಗೆ ಮಾತನಾಡಿ ಹೆಚ್ಚು ಪರಿಹಾರ ನೀಡುವಂತೆ ಗಮನಕ್ಕೆ ತರಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭ ತಹಶಿಲ್ದಾರ್ ಶ್ರೀಧರ್ ಮುಂದಲಮನಿ, ಪಿಡಿಓ ಶೇಖರ್, ಗ್ರಾಮಕರಣಿಕರು ದೀಪ್ತಿ,
ಇರುವೈಲು ಗ್ರಾಮ ಪಂಚಾಯತ್ ಉಪಾಧ್ಯಕ್ಷ ವಲೇರಿಯನ್ ಕುಟಿನ್ಹಾ, ಸದಸ್ಯರಾದ ನವೀನ್ ಪೂಜಾರಿ ಕಿಟ್ಟುಬೆಟ್ಟು, ನಾಗೇಶ್ ಅಮಿನ್ ಬಿಯಂದಕೋಡಿ, ಕೆಡಿಪಿ ಸದಸ್ಯ ಪ್ರವೀಣ್ ಪೂಜಾರಿ ಪಲ್ಕೆ, ಮೆಸ್ಕಾಂ ಇಲಾಖೆಯ ಶಾಖಾಧಿಕಾರಿ ಪ್ರವೀಣ್, ಸ್ಥಳ ಪರಿಶೀಲನೆ ನಡೆಸಿದರು.

LEAVE A REPLY

Please enter your comment!
Please enter your name here