ಜಗತ್ತಿನಾದ್ಯಂತ ಅತಿ ಹೆಚ್ಚು ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಒಂಬತ್ತು ವರ್ಷಗಳ ನಂತರ ಫೈನಲ್‌ಗೆ ಕಾಲಿಟ್ಟು, ಮತ್ತು ತನ್ನ 18 ವರ್ಷದ ಐಪಿಎಲ್ ಪ್ರಯಾಣದಲ್ಲಿ ಮೊದಲ ಬಾರಿಗೆ ಐಪಿಎಲ್ ಕಪ್ ಗೆದ್ದು ಚರಿತ್ರೆ ನಿರ್ಮಿಸಿ ಈ ಸಲ ಕಪ್ ನಮ್ದೇ ಎನ್ನುವ ಮಾತು ನಿಜಗೊಳಿಸಿತು. ವಿಶ್ವದ ದಿಗ್ಗಜ ಕ್ರಿಕೆಟಿಗ ವಿರಾಟ್ ಕೊಹ್ಲಿಯ ನೇತೃತ್ವ, ನಾಯಕ ರಜತ್ ಪಟಿದಾರ್ ಅವರ ನಾಯಕತ್ವ, ಹಾಗೂ ತಂಡದ ಎಲ್ಲ ಸದಸ್ಯರ ಪ್ರಯತ್ನದಿಂದ ನಂಬಿಕೆಯೇ ನಮ್ಮ ಆಯುಧ ಎಂಬ ದೃಢ ನಿಲುವಿನಿಂದ, ನೆನ್ನೆ ದಿನ ನಡೆದ ಫೈನಲ್ ಪಂದ್ಯದಲ್ಲಿ ಬಲಿಷ್ಠ ಪಂಜಾಬ್ ಕಿಂಗ್ಸ್ ತಂಡವನ್ನು
ಸೋಲಿಸಲು ಆರ್‌ಸಿಬಿ ತಂಡ ಯಶಸ್ವಿಯಾಯಿತು.
ಕ್ರುನಾಲ್ ಪಾಂಡ್ಯ ಹಾಗೂ ಜೋಷ್ ಹೇಜಲ್‌ವುಡ್ ಅವರ ಅದ್ಭುತ ಬೌಲಿಂಗ್ ಎದುರಿಸಲು ಪಂಜಾಬ್ ಕಿಂಗ್ಸ್ ತಂಡ ಅಸಾಧ್ಯವಾಯಿತು. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಎಲ್ಲ ಕ್ಷೇತ್ರಗಳಲ್ಲಿಯೂ ಆರ್‌ಸಿಬಿಯ ಆಟಗಾರರು ತೋರಿಸಿದ ಶ್ರೇಷ್ಠ ಪ್ರದರ್ಶನದಿಂದ, ಈ ಜಯ ಅಭಿಮಾನಿಗಳ ಸಂಭ್ರಮವನ್ನು ಮುಗಿಲು ಮುಟ್ಟುವಂತೆ ಮಾಡಿತು. ತಾಳ್ಮೆ, ನಿಯತ್ತು, ಪ್ರಾಮಾಣಿಕತೆ, ಕಿಚ್ಚು, ಚಲ ಮತ್ತು ಅಭಿಮಾನದಿಂದ 18 ವರ್ಷಗಳಿಂದ ಒಂದೇ ತಂಡದಲ್ಲಿ ಸೇವೆ ಸಲ್ಲಿಸುತ್ತಿರುವ ವಿರಾಟ್ ಕೊಹ್ಲಿಯು ಈ ಗೆಲುವಿಗೆ ಪ್ರಮುಖ
ಕಾರಣವೆಂಬುದರಲ್ಲಿ ಸಂದೇಹವೇ ಇಲ್ಲ. ಆರ್‌ಸಿಬಿ ತಂಡದ ಈ ಐತಿಹಾಸಿಕ ಸಾಧನೆಗಾಗಿ ಎಲ್ಲಾ ಕ್ರಿಕೆಟ್
ಅಭಿಮಾನಿಗಳನ್ನು ಸಂತೋಷದ ಅಲೆಯಲ್ಲಿ ತೇಲಾಡುವಂತೆ ಮಾಡಿತು.

ಹೆಚ್. ವಿ. ಮಂಜುನಾಥ ಸ್ವಾಮಿ
ಮೊ: 98448 82366